ಲಕ್ನೋ, ಜ27 : ದೇಶದ ಅತಿದೊಡ್ಡ ಜೆವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಧರಣಿ ನಡೆಸುತ್ತಿದ್ದ ರೈತರನ್ನು ತೆರವು ಮಾಡಿಸುವ ಸಮಯದಲ್ಲಿ ರೈತರು - ಪೊಲೀಸರ ನಡವೆ ಘರ್ಷಣೆ ಜರುಗಿದೆ .
ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ರೈತರು ಬಹಳ ಪ್ರತಿರೋಧ ತೋರಿ, ಪೊಲೀಸರತ್ತ ಇಟ್ಟಿಗೆ ಮತ್ತು ಇತರ ವಸ್ತುಗಳಿಂದ ಹಲ್ಲೆ ನಡೆಸಿದಾಗ ಹಲವು ಪೊಲೀಸರು ಗಾಯಗೊಂಡಿದ್ದಾರೆ ಎಂದು ರಾಜ್ಯ ಕೇಂದ್ರ ಕಚೇರಿಯ ಪೊಲೀಸ್ ಮೂಲಗಳು ತಿಳಿಸಿವೆ. ಎಸ್‌ಡಿಎಂ ಗುಂಜಾ ಸಿಂಗ್ ಕೂಡ ಕಲ್ಲೇಟಿನಿಂದ ಗಾಯಗೊಂಡಿದ್ದಾರೆ.
ಗ್ರೇಟರ್ ನೋಯ್ಡಾ ಪ್ರದೇಶದ ರೋಹಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ರೈತರು ಧರಣಿ ಕುಳಿತಿದ್ದು, ಜೆವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಹೆಚ್ಚಿನ ಪರಿಹಾರ ಕೊಡಬೇಕೆಂದೂ ಬಿಗಿಪಟ್ಟು ಹಾಕಿದ್ದಾರೆ .
ಸೋಮವಾರ ಬೆಳಿಗ್ಗೆ ಜಿಲ್ಲಾ ಅಧಿಕಾರಿಗಳು ರೈತರನ್ನು 'ಧರಣಿ ಸ್ಥಳದಿಂದ ಬೇರ್ಪಡಿಸಿ, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೋಗಿದ್ದಾಗ ಈ ಘಟನೆ ಜರುಗಿದೆ, ರೈತರು ಜಾಗ ಖಾಲಿ ಮಾಡಲು ನಿರಾಕರಿಸಿದಾಗ ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ತಿರುಗಿದೆ. ರೈತರು ಸರ್ಕಾರ ವಿರೋಧಿ ಘೋಷಣೆಗಳನ್ನು ಕೂಗಿ ಹಲವು ಪೊಲೀಸ್ ವಾಹನಗಳನ್ನುಜಖಂ ಗೊಳಿಸಿದ್ದಾರೆ.