ಬೆಳಗಾವಿ 22: ನೀರಿನ ಮಹತ್ವ ಸಾರುವ ಕಾರಣಕ್ಕಾಗಿ ಪ್ರತಿ ವರ್ಷ ಜಗತ್ತಿನಾದ್ಯಂತ ಮಾ 22 ರಂದು ವಿಶ್ವ ಜಲ ದಿನ ಆಚರಿಸಲಾಗುತ್ತಿದೆ. ಜನಸಂಖ್ಯೆ ಹೆಚ್ಚಳ ಹಾಗೂ ಮಾನವನ ಅವಶ್ಯಕತೆಗಳ ಹೆಚ್ಚಳದಿಂದಾಗಿ ನೀರಿನ ಬೇಡಿಕೆಯೂ ಹೆಚ್ಚುತ್ತಿದೆ. ಬೇಸಿಗೆ ಬಂತೆಂದರೆ ಜನಸಾಮಾನ್ಯರು ನೀರಿಗಾಗಿ ಪರದಾಡುವ ಪರಿಸ್ಥಿತಿಯು ಪ್ರತಿ ದಿನ ಹಳ್ಳಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಂಡುಬರುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ನೈಸರ್ಗಿಕವಾಗಿ ಸಿಗುವ ಮಳೆನೀರನ್ನು ಹರಿದು ಹೋಗಲು ಬಿಡದೇ, ಗ್ರಾಮಗಳ ಪುರಾತನ ಕೆರೆಗಳಲ್ಲಿ ಸಂಗ್ರಹಿಸುವ ಕೆಲಸವಾಗಬೇಕು. ಆಟದ ಮೈದಾನ, ಗಿಡ ಗಂಟಿಗಳಿಂದ ಕೂಡಿರುವ ಕೆರೆಗಳನ್ನು ಹೂಳೆತ್ತಿ,ಕೆರೆಗಳನ್ನು ಸಂರಕ್ಷಿಸಬೇಕಾಗಿದೆ.
ಈ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ/ ಡಿ ವೀರೇಂದ್ರ ಹಗ್ಗೆಡೆಯವರು ನಮ್ಮೂರು ನಮ್ಮ ಕೆರೆ ಎಂಬ ಕಾರ್ಯಕ್ರಮದ ಮೂಲಕ ಕೆರೆಗಳನ್ನು ಪುನಶ್ಚೇತನಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯಾದ್ಯಂತ 889 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು, 240.13 ಲಕ್ಷ ಕ್ಯೂಬಿಕ್ ಮೀಟರ್ ಮಣ್ಣನ್ನು ಹೊರತೆಗೆಯಲಾಗಿದೆ. ಇದರಿಂದ 530 ಕೋಟಿ ಗ್ಯಾಲನ್ ನೀರಿನ ಸಂಗ್ರಹಣ ಸಾಮರ್ಥ್ಯ ಹೆಚ್ಚಳವಾಗಿದೆ. ಬೆಳಗಾವಿ ಜಿಲ್ಲಾದ್ಯಂತ 60 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ.
ಕಳೆದ ಎಪ್ರಿಲ್ ತಿಂಗಳಲ್ಲಿ ಶಿಂದೊಳ್ಳಿ ಗ್ರಾಮದ ಸರಕಾರಿ ಕೆರೆಯನ್ನು ಹೂಳೆತ್ತುವ ಮೂಲಕ ಕೆರೆಗೆ ಹೊಸ ಕಾಯಕಲ್ಪ ನೀಡಲಾಗಿದೆ. 2.34 ವಿಸ್ತೀರ್ಣದ ಕೆರೆಯಲ್ಲಿ 2087 ಟ್ರಾಕ್ಟರ್ ಮತ್ತು 180 ಟಿಪ್ಪರ್ ಲೋಡ ಮಣ್ಣನ್ನು ಹೊರತೆಗೆದು ಬೇಸಿಗೆಯ ಈ ಸಂದರ್ಭದಲ್ಲೂ ಜಾನುವಾರುಗಳಿಗೆ ಕುಡಿಯಲು, ಗ್ರಾಮಸ್ಥರ ಕೃಷಿಗೆ, ಮಕ್ಕಳ ಈಜಾಟಕ್ಕೆ ಈಜು ಕೊಳವಾಗಿ, ಗ್ರಾಮಕ್ಕೆ ತಂಪೊದಗಿಸುವ ಗಂಗೆಯಾಗಿ ನಲಿದಾಡುತ್ತಿದೆ.