ಕುವೆಂಪು, ಬೇಂದ್ರೆ ಅವರ ಸಾಹಿತ್ಯಕ್ಕೆ ಸಾವಿಲ್ಲ ಹಾಗೆಂದು ಅದನ್ನು ಪದೇ ಪದೇ ನೆನಪಿಸುವ ಅಗತ್ಯವೂ ಇಲ್ಲ...!

ಈ ನಾಡಿನಲ್ಲಿ ಯಾರು ದೊಡ್ಡ ಸಾಹಿತಿಗಳು? ಎಂದು ನಾನು ನೀರೀಕ್ಷಿಸದ ಒಂದು ಪ್ರಶ್ನೆಯನ್ನು ನನ್ನ ವಿದ್ಯಾರ್ಥಿ ಕೇಳಿದ್ದು ಒಂದು ಕ್ಷಣ ನಾನು ಏನು ಹೇಳಬೇಕು ಎನ್ನುವುದು ಅರ್ಥವಾಗದೇ ಮೌನಕ್ಕೆ ಶರಣಾಗುವಂತೆ ಮಾಡಿತು. ಆಗ ಅದೇ ವಿದ್ಯಾರ್ಥಿ ಮುಂದುವರಿದು, “ಸರ್; ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ಗೋಕಾಕ, ಅನಂತಮೂರ್ತಿ, ಕಾರ್ನಾಡ, ಕಂಬಾರ ಇವರೆಲ್ಲರೂ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭೈರ​‍್ಪನವರು ಸರಸ್ವತಿ ಸಮ್ಮಾನ್ ದಿಂದ ಪುರಸ್ಕೃತರಾಗಿದ್ದಾರೆ. ಇನ್ನು ನರಸಿಂಹಸ್ವಾಮಿ, ಕಣವಿ, ಪಟ್ಟಣಶೆಟ್ಟಿ, ವೆಂಕಟೇಶಮೂರ್ತಿ, ಚಂಪಾ ಸೇರಿದಂತೆ ಹಲವು ಜನರು ಕವಿತೆಗಳಿಂದ ಕಾಡಿದ್ದಾರೆ. ಗಿರಡ್ಡಿ, ಕುರ್ತುಕೋಟಿ ಸೇರಿದಂತೆ ಹತ್ತು ಹಲವು ಜನರು ವಿಮರ್ಶಾ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಆದರೆ ನನ್ನನ್ನು ಕಾಡುತ್ತಿರುವ ಪ್ರಶ್ನೆ ಇವರಲ್ಲಿ ಯಾರು ದೊಡ್ಡವರು? ಮತ್ತು ಇವರುಗಳನ್ನು ಹೊರತು ಪಡಿಸಿ ಮತ್ಯಾರೂ ದೊಡ್ಡ ಸಾಹಿತಿಗಳಾಗಲಿ, ಕವಿಗಳಾಗಲಿ ಬರುವುದಕ್ಕೆ ಸಾಧ್ಯವಿಲ್ಲವೇ? ಅಥವಾ ಒಬ್ಬ ಬರಹಗಾರ, ಸಾಹಿತಿ ಅಥವಾ ಕವಿ ಎಂದು ಗುರುತಿಸಿಕೊಳ್ಳುವುದಕ್ಕೆ ಯಾವುದಾದರೂ ದೊಡ್ಡ ಮಟ್ಟದ ಪ್ರಶಸ್ತಿಗೆ ಭಾಜನರಾಗಬೇಕೆ? ಪ್ರಶಸ್ತಿ ಪಡೆಯದೇ ಬರೆಯುವ ವ್ಯಕ್ತಿ ಯಾವತ್ತೂ ಸಾಹಿತ್ಯ ಲೋಕದಲ್ಲಿ ಅರಳು ಪ್ರತಿಭೆಯಾಗಿಯೇ ಉಳಿಯಬೇಕೆ? ಒಂದು ವೇಳೆ ಬೆಳೆಯಬೇಕೆಂದರೆ ಪ್ರಶಸ್ತಿಗಳ ಮಾನದಂಡವನ್ನು ಮುಂದಿಟ್ಟುಕೊಳ್ಳಬೇಕೆ? ಸಾವಿರಾರು ಕವಿತೆ ಬರೆಯಬೇಕೆ? ಅಥವಾ ಬೇಂದ್ರೆ ಅಜ್ಜ ಹೇಳಿದಂತೆ ಸಾವಿಲ್ಲದ ಒಂದು ಕವಿತೆ ಬರೆಯಬೇಕೆ? ಹಾಗಾದರೆ ನಿಜವಾಗಲೂ ಯಾರು ದೊಡ್ಡ ಕವಿ, ಸಾಹಿತಿಯಾಗುತ್ತಾನೆ? ಇಲ್ಲಿ ಪ್ರಾದೇಶಿಕತೆಯೂ ಮುಖ್ಯವಾಗುತ್ತದೆಯೇ? ಅಂದರೆ ಕಲ್ಯಾಣ ಕರ್ಣಾಟಕ, ಮಲೆನಾಡು ಕರ್ನಾಟಕ, ಕಿತ್ತೂರು ಕರ್ನಾಟಕ, ಮೈಸೂರು ಕರ್ನಾಟಕ ಎನ್ನುವುದು ಇಲ್ಲಿ ಅನಿವಾರ್ಯವಾಗುತ್ತದೆಯೆ?” ಈ ರೀತಿ ಅವನ ಬಾಯಿಂದ ಬಂದ ಒಂದೊಂದು ಪ್ರಶ್ನೆಗಳು ನನ್ನನ್ನು ಇನ್ನಿಲ್ಲದಂತೆ ಬಾಧಿಸಲು ಶುರುವಾದವು. ಆ ಕ್ಷಣ ನಾನು ಏನು ಹೇಳಬೇಕು ಎನ್ನುವುದು ನನಗೆ ತಿಳಿಯಲಿಲ್ಲ. ಪ್ರಾಧ್ಯಾಪಕನಾದ ನಾನು ಸುಖಾ ಸುಮ್ಮನೆ ಕುಳಿತುಕೊಳ್ಳುವುದಕ್ಕೂ ಆಗುವುದಿಲ್ಲ. ಮೌನ ಮುರಿಯಲೇ ಬೇಕು, ಕೊರಳಿಂದ ಧ್ವನಿ ಹರಿಯಲೇ ಬೇಕು. ನೀರೀಕ್ಷೆಯ ನೋಟ ಹೊತ್ತು ನಿಂತ ಆ ವಿದ್ಯಾರ್ಥಿಯ ಪ್ರಶ್ನೆಗೆ ನಾನು ಉತ್ತರಿಸಲೇ ಬೇಕು. ನಾನು ಅದಕ್ಕೆ ಉತ್ತರ ಹೇಳುವ ಮುನ್ನ ಈ ಪ್ರಶ್ನೆಯನ್ನು ನಿಮಗೆ ರವಾನಿಸುತ್ತಿದ್ದೇನೆ. ಒಂದು ವೇಳೆ ಈ ಪ್ರಶ್ನೆ ನಿಮ್ಮೆದುರಿಗೆ ಬಂದರೆ ನೀವೇನು ಉತ್ತರ ನೀಡುತ್ತಿದ್ದಿರಿ? ಲೇಖನದ ಮುಂದಿನ ಭಾಗಕ್ಕೆ ಹೋಗುವ ಮುನ್ನ ಈ ಪ್ರಶ್ನೆಗಳಿಗೆ ನಿಮ್ಮ ಮನಸ್ಸಿನಲ್ಲಿಯೇ ಉತ್ತರ ಕಂಡುಕೊಂಡರೆ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ.  

ಹೌದು ಇಂಥಹ ಒಂದು ಜಿಜ್ಞಾಸೆ ಬಹಳಷ್ಟು ಜನಗಳ ಮನಸ್ಸಿನಲ್ಲಿದೆ. ಈ ನಾಡಿನಲ್ಲಿ ಬರೆದು ಬರೆದು ಕನ್ನಡ ಸಾಹಿತ್ಯ ಲೋಕದಲ್ಲಿ ಬಹಳಷ್ಟು ಜನ ಸಾಧನೆಯ ಮೂಲಕ ಮೆರೆಯುತ್ತಿದ್ದಾರೆ. ಆದರೆ ಅದೆಷ್ಟೋ ಜನ ಅದ್ಭುತವಾಗಿ ಬರೆದರೂ ಕೂಡ ಕಾಣದಂತೆ ಮಾಯವಾಗುತ್ತಿದ್ದಾರೆ. ಇಲ್ಲಿ ಅವರೇಕೆ ಬೆಳೆದರೋ? ಇವರೇಕೆ ಅಳಿದರೋ? ಗೊತ್ತಾಗುತ್ತಿಲ್ಲ. ಆ ನಿಟ್ಟನಲ್ಲಿ ನನ್ನ ವಿದ್ಯಾರ್ಥಿ ಪ್ರಶ್ನೆಯಿಂದ ನನ್ನ ಮನಸ್ಸು ಕೂಡ ಒಂದು ಕ್ಷಣ ಆಲೋಚನೆಯ ಕಡಲಲ್ಲಿ ಮುಳುಗಿ, ಚಿಂತನೆಯ ಅಲೆಯಲ್ಲಿ ತೇಲಿ ಮೇಲೆದ್ದಿತು.  ಇದು ನನ್ನ ವಿದ್ಯಾರ್ಥಿ ಕೇಳಿದ ಪ್ರಶ್ನೆಯಾಗಿದ್ದರೂ ಕೂಡ ಅದರ ಹಿಂದೆ ಬಹಳಷ್ಟು ಜನಗಳ ಭಾವನೆ ನನಗೆ ಎದ್ದು ಕಾಣುತ್ತಿತ್ತು. ಹೀಗಾಗಿ ಉತ್ತರ ಕೊಡಲು ತತ್ತರಿಸಬೇಕಾಯಿತು. ಆದರೂ ಕೂಡ ನಾನು ಅದರ ಕುರಿತು ಹೇಳಲೇ ಬೇಕಾದ ಅನಿವಾರ್ಯತೆ ಇರುವ ಕಾರಣ ವಿದ್ಯಾರ್ಥಿಗಳಿಗೆ ಉತ್ತರ ನೀಡುವುದಕ್ಕೆ ಯತ್ನಿಸಿದೆ. ಮಾತ್ರವಲ್ಲ ಅದರಿಂದ ಅವರ ಮನಸ್ಸಿಗೂ ಸಮಾಧಾನ ಮಾಡುವುದರಲ್ಲಿ ಯಶಸ್ವಿಯಾದೆ. ಹೌದು ನನ್ನ ಪ್ರಕಾರ ಹೇಳುವುದಾದರೆ ಈ ಜಗತ್ತಿನಲ್ಲಿ ಬರೆಯುವ ಬರಹಗಾರರಲ್ಲಿ ಯಾರೋಬ್ಬರೂ ದೊಡ್ಡವರಲ್ಲ, ಯಾರೋಬ್ಬರು ಚಿಕ್ಕವರಲ್ಲ. ಅವರವರ ಬರವಣಿಗೆ ಅವರವರ ಶಕ್ತಿಗೆ ಹಾಗೂ ಜ್ಞಾನಕ್ಕೆ ಬಿಟ್ಟಿದ್ದು. ಅದರಲ್ಲೂ ಸಹ ಒಬ್ಬ ಬರಹಗಾರ ಬರೆದ ಬರಹಗಳನ್ನು ಅಕ್ಕರೆಯಿಂದ ಒಬ್ಬ ಸಾಮಾನ್ಯ ಓದುಗ ಓದಿ ಮೆಚ್ಚಿದರೆ ಆತನೆ ಯಶಸ್ವಿ ಬರಹಗಾರನಾಗುತ್ತಾನೆ. ಕೇವಲ ಜ್ಞಾನಿಗಳ ಕೈಯಿಂದ ಪ್ರಶಂಸೆಗೆ ಪಾತ್ರನಾಗುವವನು ಮಾತ್ರ ಯಶಸ್ವಿ ಬರಹಗಾರನಲ್ಲ. ಕವಿತೆ ಎನ್ನುವುದು ಆಸ್ವಾಧಿಸುವವನ ಮನಸ್ಸಿಗೆ ಖುಷಿ ನೀಡಿದರೆ ಅದು ಯಶಸ್ವಿ ಕವಿತೆಯಾಗುತ್ತದೆ. ಆದರೆ ಅದನ್ನು ಹೊರತು ಪಡಿಸಿ ಕವಿತೆಯಲ್ಲಿ ಅತ್ಯುನ್ನತ ಪದಪುಂಜಗಳನ್ನು ಬಳಸಿ, ಅಪಾರವಾದ ಪಾಂಡಿತ್ಯ ಪ್ರದರ್ಶಿಸಿದ ಮಾತ್ರಕ್ಕೆ ಅದು ಶ್ರೇಷ್ಠ ಕವಿತೆಯಲ್ಲ. ಅದು ಶ್ರೇಷ್ಠವೆನಿಸಿದರೂ ಕೂಡ ಓದುಗನನ್ನಾಗಲಿ ಕೇಳುಗನನ್ನಾಗಲಿ ಗೆಲ್ಲದೆ ಇರುವ ಕವಿತೆ ಕವಿತೆಯಾಗಲಾರದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೆ. ನನ್ನ ಅಭಿಪ್ರಾಯ ತಮ್ಮಲ್ಲಿ ಕೆಲವರಿಗೆ ತಪ್ಪು ಎನ್ನಿಸಿಬಹದು. ನನ್ನ ಪ್ರಕಾರ; ಇವರು ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ, ಗ್ರಂಥಗಳನ್ನು ರಚಿಸಿದ್ದಾರೆ ಎಂದು ಹೇಳುವುದು ದೊಡ್ಡದಲ್ಲ. ಕಾರಣ ಆ ಗ್ರಂಥಗಳು ಅದೆಷ್ಟು ಜನರನ್ನು ಓದುವುದಕ್ಕೆ ಪ್ರೇರೇಪಿಸಿವೆ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತದೆ. ಯಾವುದೇ ಗ್ರಂಥವಾಗಿರಲಿ, ಸಣ್ಣ ಕೃತಿಯಾಗಿರಲಿ ಅದನ್ನು ಓದುವುದಕ್ಕೆ ಶುರುವಿಟ್ಟುಕೊಂಡರೆ ಅದು ಯಾಂತ್ರಿಕವಾಗಿ ನಮ್ಮನ್ನು ಓದುಗರನ್ನಾಗಿಸಿದರೆ ಆ ಕೃತಿಯಿಂದ ಯಾವುದೇ ಲಾಭವಿಲ್ಲ. ಅದು ಯಾವತ್ತೂ ನನ್ನ ಮನಸ್ಸನ್ನು ಮುಟ್ಟುವುದಿಲ್ಲ. ಒಂದು ಬಾರಿ ಓದುವುದಕ್ಕೆಂದು ಪುಸ್ತಕದ ಮೊದಲ ಸಾಲಿಗಿಳಿದರೆ ಅದೇ ನಮ್ಮ ಕೊರಳ ಪಟ್ಟಿ ಹಿಡಿದುಕೊಂಡು ಓದಿಸಿಕೊಂಡು ಹೋಗಬೇಕು. ಆಗ ಅದೇ ನಿಜವಾದ ಬರವಣಿಗೆಯಾಗುತ್ತದೆ. ಆ ಕಾರಣದಿಂದಾಗಿ ಇಲ್ಲಿ ಯಾರ ಬರವಣಿಗೆ ಓದುಗನನ್ನು ಆತನಿಗೆ ಗೊತ್ತಿಲ್ಲದಂತೆ ಎಳೆದುಕೊಂಡು ಹೋಗಿ ಪುಸ್ತಕದ ಅಂತ್ಯಕ್ಕೆ ತಂದು ನಿಲ್ಲಿಸುತ್ತದೆಯೋ ಅದೇ ನಿಜವಾದ ಕೃತಿ, ಆತನೆ ನಿಜವಾದ ಬರಹಗಾರನಾಗುತ್ತಾನೆ. ಹಾಗೂ ಆ ಬರಹಗಳೇ ಶ್ರೇಷ್ಠವಾಗುತ್ತವೆ. ಆ ನಿಟ್ಟಿನಲ್ಲಿ ಈ ಜಗತ್ತಿನಲ್ಲಿ ಯಾವ ಬರಹಗಾರನು ದೊಡ್ಡವನಲ್ಲ. ಯಾರೂ ಚಿಕ್ಕವರೂ ಅಲ್ಲ. ಸಾವಿರ ಪದಗಳಲ್ಲಿ ವರ್ಣಿಸಿದ ಕಥೆಯನ್ನು ಕೇವಲ ಒಂದು ಚಿತ್ರಪಟ ವಿವರಣೆ ನೀಡುವಾಗ ಇಲ್ಲಿ ಯಾರೂ ಯಾರಿಗೂ ದೊಡ್ಡವರಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಈ ಉತ್ತರದಿಂದ ಸಂತೃಪ್ತಗೊಂಡ ವಿದ್ಯಾರ್ಥಿ “ನಿಮ್ಮ ಮಾತು ನಿಜ ಸರ್ ನನಗೂ ಹಾಗೆ ಅನಿಸುತ್ತದೆ ಆದರೂ ಸ್ವಾತಂತ್ರ್ಯ ಹೋರಾಟದಲ್ಲಿ ಕೆಲವೇ ಜನರನ್ನು ಬೆರಳು ಮಾಡಿ ತೋರಿಸಿ ಬೆಳೆಸಿದಂತೆ ಸಾಹಿತ್ಯ ಲೋಕದಲ್ಲಿಯೂ ಕೂಡ ಕೆಲವೇ ಜನಗಳನ್ನು ತೋರಿಸುತ್ತಿರುವ ಕಾರಣ ಹೊಸತನವನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದೇ ನನಗೆ ಬೇಸರ ತರಿಸುತ್ತಿದೆ ಸರ್‌” ಎಂದು ಆತನ ಹೇಳಿದ ಮಾತು ನನಗೆ ಈಗಲು ಏನೊ ಒಂದು ತರಹದ ಕಸಿವಿಸಿ ಉಂಟಾಗುವಂತೆ ಮಾಡುತ್ತಿದೆ. 

ನಿಜ...! ಇಲ್ಲಿ ಆ ಯುವಕನ ಮಾತನ್ನು ನಾವು ಒಪ್ಪಿಕೊಳ್ಳಲೇ ಬೇಕು. ಕಾರಣ ಸಾಹಿತ್ಯ ಕ್ಷೇತ್ರವೇನು ನಿಂತ ನೀರಲ್ಲ. ಸದಾ ಹರಿಯುತ್ತಿರುವ ನದಿಯಾಗಿದೆ. ಆದರೆ ಆ ನದಿಯಲ್ಲಿ ಹಳೆ ನೀರು ಕಡಲನ್ನು ಸೇರಿ ಅಖಂಡ ಸಾಗರದಲ್ಲಿ ಲೀನವಾಗಿದೆ. ಆದರೆ ಹೊಸ ನೀರು ಅಖಂಡ ಸಾಗರವನ್ನು ಸೇರುವುದಕ್ಕೆ ತೆರಳಿದರೆ ನಡುವೆಯೇ ಆಣೆಕಟ್ಟು ಕಟ್ಟಿ ತಡೆ ಹಿಡಿಯುವ ಕಾರ್ಯವಾಗುತ್ತಿದೆ. ಏಕೆಂದರೆ ನಾವೇ ಭಾಷಣ ಮಾಡುವಾಗ ಕುವೆಂಪು, ಬೇಂದ್ರೆ ಸೇರಿದಂತೆ ಸಾವಿರಾರು ಕನ್ನಡ ಸಾಹಿತಿಗಳು ಸಾವಿಲ್ಲದ ಸಾಹಿತ್ಯವನ್ನು ನೀಡಿದರು ಎಂದು ಹೇಳುತ್ತೇವೆ. ಅದಂತೂ ಸತ್ಯ. ಆದರೆ  ಆ ಸಾವಿಲ್ಲದ ಸಾಹಿತ್ಯವನ್ನು ನೀಡಿದರು ಎಂದು ಪದೆ ಪದೇ ನಾವು ನೆನಪು ಮಾಡಿಕೊಡುವ ಅಗತ್ಯವಿದೆಯೇ ಎನ್ನುವುದು ಕೂಡ ನಮ್ಮ ಜನಗಳ ಪ್ರಶ್ನೆಯಾಗಿದೆ. ಪ್ರತಿ ನಿತ್ಯವು ಹೊಸ ಬರಹಗಾರರು ಹುಟ್ಟಿಕೊಳ್ಳುತ್ತಿದ್ದಾರೆ. ಎಷ್ಟು ಜನರು ಹುಟ್ಟಿಕೊಳ್ಳುತ್ತಿದ್ದಾರೋ ಅಷ್ಟೇ ಬೇಗನೆ ಅವರ ಸಾಹಿತ್ಯವು ಕೂಡ ಸತ್ತು ಹೋಗುತ್ತಿದೆ. ಕಾರಣ ಸಾವಿಲ್ಲದ ಸಾಹಿತ್ಯ ನೀಡಿದ ಸಾಹಿತಿಗಳ ಬೆನ್ನತ್ತಿ ಬೆಳೆಯಬೇಕಾದವರನ್ನು ನಾವೇ ಬಲಿ ಕೊಡುತ್ತಿದ್ದೇವೆ ಎನ್ನುವುದು ಬಹಳಷ್ಟು ಜನಗಳ ವಿಚಾರ. ಮೇಲೆ ಉಲ್ಲೇಖಿಸಿದ ಎಲ್ಲ ಬರಹಗಾರರ ಪುಸ್ತಕಗಳನ್ನು ಮುದ್ರಿಸುವುದಕ್ಕೂ ಜನರಿದ್ದಾರೆ, ಅದನ್ನು ಮಾರುಕಟ್ಟೆಯಲ್ಲಿಟ್ಟು ಮಾರುವುದಕ್ಕೂ ಜನರಿದ್ದಾರೆ ಅದರ ಜೊತೆಗೆ ನಾವು ನೀಡುತ್ತಿರುವ ಪ್ರಚಾರದಿಂದಾಗಿ ಅದನ್ನು ಕೊಳ್ಳುವುದಕ್ಕೂ ಜನರಿದ್ದಾರೆ. ಆದರೆ ಅವರನ್ನೂ ಸಹ ಮೀರಿಸುವ ಮಟ್ಟದಲ್ಲಿ ಹೊಸ ಬರಹಗಾರ ಬರೆದರೂ ಕೂಡ ಅದನ್ನು ಮುದ್ರಿಸುವುದಕ್ಕೆ ಯಾರೂ ಮುಂದಾಗುವುದಿಲ್ಲ, ಮಾರುವುದಕ್ಕೆ ಮಾರುಕಟ್ಟೆಯ ಅವಕಾಶವೂ ನೀಡುವುದಿಲ್ಲ. ಇನ್ನು ಕೊಳ್ಳುವವರಿಗೆ ಇವರು ಯಾರೂ ಎನ್ನುವುದೇ ಗೊತ್ತಿಲ್ಲ. ಆ ಕಾರಣದಿಂದಾಗಿ ಅದ್ಭುತವಾದ ವಿಚಾರಗಳನ್ನು ತಲೆಯಲ್ಲಿಟ್ಟುಕೊಂಡಿದ್ದರೂ ಕೂಡ ಅವುಗಳನ್ನು ಬರಹದ ರೂಪಕ್ಕೆ ತರಲು ಬಹಳಷ್ಟು ಜನ ಹಿಂದೇಟು ಹಾಕುತ್ತಿದ್ದಾರೆ. ಆ ಮೂಲಕ ಇದೊಂದು ರೀತಿಯಲ್ಲಿ ಸಾಹಿತ್ಯದ ಆತ್ಮಹತ್ಯೆಯಾಗುತ್ತಿದೆ. ಇದು ಆತ್ಮಹತ್ಯೆಯೋ ಇಲ್ಲ ನಾವೇ ಮುಂದೆ ನಿಂತು ಮಾಡುತ್ತಿರುವ ಕೊಲೆಯೊ ನನಗೆ ಅರ್ಥವಾಗಿಲ್ಲ. 

ಇದಕ್ಕೊಂದು ಸಣ್ಣ ಉದಾಹರಣೆಯನ್ನು ನೀಡುತ್ತೇನೆ. ಹಲಸಂಗಿಯಲ್ಲಿ ಗೆಳಯರ ಬಳಗವಿದ್ದಂತೆ ದಯವಿಟ್ಟು ಕ್ಷಮಿಸಿ ಬಹುಶಃ ಹಲಸಂಗಿ ಗೆಳೆಯರ ಬಳಗವೂ ಕೂಡ ತಮಗೆ ಗೊತ್ತಿಲ್ಲ ಎನಿಸುತ್ತದೆ. ಕಾರಣ ಕನ್ನಡ ಸಾಹಿತ್ಯಕ್ಕೆ ಅನುಭಾವ ಹಾಗೂ ಅನುಭವ ಎರಡನ್ನೂ ಬೆರೆಸಿ ಯಾರೂ ನೀಡದ ಶ್ರೇಷ್ಠ ಬರಹಗಳನ್ನು ಕಾಣಿಕೆಯಾಗಿ ನೀಡಿದ ಹಲಸಂಗಿಯ ಗೆಳೆಯರ ಬಳಗದ ಮಧುರಚನ್ನರಾಗಲಿ, ಧೂಲಾಸಾಹೇಬರಾಗಲಿ, ಕಾಪ್ಸೆ ರೇವಪ್ಪನವರಾಗಲಿ, ಸಿಂಪಿ ಲಿಂಗಣ್ಣನವರಾಗಲಿ ನಮಗೆ ಗೊತ್ತಿಲ್ಲ. ಕಾರಣ ಅವರ ಬಗ್ಗೆ ಹೇಳುವುದಕ್ಕೆ ಯಾರೂ ಮುಂದಾಗಲಿಲ್ಲ. ಈ ಕಾರಣದಿಂದಾಗಿಯೇ ವಿಜಯಪುರದ ಯುವಕರಿಗೆ ಧಾರವಾಡ ಬೇಂದ್ರೆ ಗೊತ್ತು, ಶಿವಮೊಗ್ಗದ ಕುವೆಂಪು ಗೊತ್ತು, ಮೈಸೂರಿನ ನಂರಸಿಂಹ ಸ್ವಾಮಿ ಗೊತ್ತು. ಆದರೆ ಭೀಮೆಯ ಒಡಲಿನ ಹಸಲಂಗಿ ಗೆಳೆಯರು ಗೊತ್ತಿಲ್ಲ. ಇದು ಹೇಗಿದೆ ಎಂದರೆ ‘ತಮ್ಮ ಜೋಳ ಗೌಡರಿಗೆ ನೀಡಿ, ಗೌಡರ ಮನೆಯ ಜೋಳವನ್ನು ಹಾಡಿಕೊಂಡು ಬೀಸಿದಂತಾಗಿದೆ’ ಅದಕ್ಕೆ ಹೇಳಿದ್ದು ಕ್ಷಮಿಸಿ ಅಂಥ. ಹೋಗಲಿ ಧಾರವಾಡದ ಗೆಳೆಯರ ಬಳಗವಾದರೂ ತಮಗೆ ಗೊತ್ತಿರಲೇ ಬೇಕಲ್ಲವೇ? ಅದು ಗೊತ್ತಿರುತ್ತದೆ ಬಿಡಿ. ಆ ಧಾರವಾಡದ ಗೆಳೆಯರ ಬಳಗದಂತೆ ನಮ್ಮ ನಗರದಲ್ಲಿಯೂ ಒಂದು ಓದುಗರ ಚಾವಡಿ ಎನ್ನುವ ಸಾಹಿತ್ಯಾಸಕ್ತರ ಗುಂಪನ್ನು ಕಟ್ಟಿಕೊಳ್ಳಲಾಗಿದೆ. ಇದರಲ್ಲಿ ಅವರಷ್ಟು ದೊಡ್ಡ ಸಾಹಿತಗಳು ಇಲ್ಲದೇ ಇದ್ದರೂ ಕೂಡ ದಡ್ಡ ಸಾಹಿತಿಗಳಂತೂ ಯಾರೂ ಇಲ್ಲ. ಈ ಪದ ಬಳಸುವುದಕ್ಕೆ ಕಾರಣವಿಷ್ಟೆ. ಉತ್ತರ ಕರ್ನಾಟಕದವರು ಏನೇ ಮಾಡಿದರೂ ದಡ್ಡರಿಗೆ ಸಮ, ಆ ಕಡೆಯವರು ಏನೇ ಮಾಡಿದರೂ ಶ್ರೇಷ್ಠತೆಗೆ ಸಮ ಎಂದು ಬಿಂಬಿಸಿದ ಕಾರಣಕ್ಕೆ ನಾನು ಈ ಮಾತನ್ನು ಅನಿವಾರ್ಯವಾಗಿ ಹೇಳುತ್ತಿದ್ದೇನೆ. ಒಂದು ವೇಳೆ ಇಲ್ಲವಾಗಿದ್ದರೆ ಕನ್ನಡಕ್ಕೆ ಎಂಟಲ್ಲ ಹತ್ತು ಜ್ಞಾನಪೀಠಗಳು ದೊರಕುತ್ತಿದ್ದವು. ಆ ಮಾತನ್ನು ಇನ್ನೊಂದು ದಿನ ಖಂಡಿತವಾಗಿ ಚರ್ಚಿಸುತ್ತೇನೆ. ಈಗ ಗೆಳೆಯರ ಬಳಗದ ವಿಷಯಕ್ಕೆ ಬರೋಣ. ಇಲ್ಲಿ ಕಟ್ಟಿಕೊಂಡಿರುವ ಓದುಗರ ಚಾವಡಿಯಲ್ಲಿ ಪ್ರತಿ ತಿಂಗಳು ಒಂದೊಂದು ಕೃತಿಯ ಕುರಿತು ಒಬ್ಬೊಬ್ಬ ವ್ಯಕ್ತಿ ವಿಭಿನ್ನವಾಗಿ ವಿಮರ್ಶೆ ಮಾಡುತ್ತಾರೆ. ಕಳೆದ ಒಂದು ವರ್ಷದಿಂದ ನಿರಂತರವಾಗಿ ಮಾಡಿಕೊಂಡು ಬಂದ ಉಪನ್ಯಾಸಗಳಲ್ಲಿ ಕೇವಲ 3 ಜನ ಲೇಖಕರ ಪುಸ್ತಕಗಳು ಮಾತ್ರ ಸ್ಥಳೀಯವಾಗಿದ್ದವು. ಮಿಕ್ಕವರ ಉಪನ್ಯಾಗಳಲ್ಲಿ ಮತ್ತದೆ ಕುವೆಂಪು, ಬೇಂದ್ರೆ, ಠ್ಯಾಗೋರ ಅವರ ಕೃತಿಗಳೇ ವಿಮರ್ಶೆಗೆ ಬಂದವು. ಇದು ತಪ್ಪೆಂದು ನಾನು ಹೇಳುತ್ತಿಲ್ಲ. ಆದರೆ ಸ್ಥಳೀಯವಾಗಿ ಸಾಕಷ್ಟು ಕೃತಿಗಳು ಹೊಸ ಹೊಸದಾಗಿ ಪ್ರಕಟಗೊಳ್ಳುತ್ತಿದ್ದರೂ ಕೂಡ ಅದರ ಕುರಿತು ಚರ್ಚೆ ಮಾಡುವುದಕ್ಕೆ ಯಾರೂ ಮುಂದಾಗುತ್ತಿಲ್ಲ. ಬದಲಿಗೆ ಅಪ್ಪ ನೆಟ್ಟ ಆಲದ ಮರವೆಂದು ನೇಣು ಬಿಗಿದುಕೊಳ್ಳುತ್ತಿದ್ದೇವೇನೋ ಎನಿಸುತ್ತಿದೆ. ಇದರ ಕುರಿತು ಕೆಲವು ಜನ ವಾದ ಮಾಡಿದರೆ ಮತ್ತೆ ಕೆಲವರು ಅದನ್ನು ಸಮರ್ಥಿಸಿಕೊಂಡರು. ಇದನ್ನು ಕಂಡಾಗ ನನ್ನ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಮೂಲ ಕಾರಣಗಳು ನಮ್ಮವರ ನಡುವಳಕೆಯಲ್ಲಿಯೇ ಇದೆ ಎನ್ನುವುದು ನನಗೆ ಸ್ಪಷ್ಟವಾಗಿ ಹೋಯಿತು. 

‘ಮನೆ ಗೆದ್ದು ಮಾರುಗೆಲ್ಲು’ ಎಂಬ ಜನಪದ ಗಾದೆಯೊಂದಿದೆ. ‘ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು’ ಎಂದು ಡಿವಿಜಿ ಅವರೇ ಹೇಳಿದ್ದಾರೆ. ಮೊದಲು ನಮ್ಮವರನ್ನು ನಾವು ಅರಿತುಕೊಂಡರೆ ಬೇರೆಯವರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಅದನ್ನು ಬಿಟ್ಟು ಬರೀ ಬೇರೆಯವರನ್ನು ಅರಿತುಕೊಳ್ಳುವ ಬರದಲ್ಲಿ ಮನೆಯವರನ್ನೆ ಮರೆತು ಹೋದರೆ ಹೇಗೆ ಎನ್ನುವುದೇ ಇಂದು ಉದ್ಭವಿಸುತ್ತಿರುವ ಪ್ರಶ್ನೆಯಾಗಿದೆ. ಸಾಹಿತ್ಯವೆಂದ ತಕ್ಷಣ ನಮಗೆ ಬರೀ ಕೇವಲ ಜ್ಞಾನಪೀಠ ಪುರಸ್ಕೃತರೋ, ಸಾಹಿತ್ಯ ಅಕಾಡೆಮಿ ಪುರಸ್ಕೃತರೋ ನೆನಪಾದರೆ ಹೇಗೆ? ಉಳಿದವರೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗಾಗುವುದಿಲ್ಲವೇ? ಉದಾಹರಣೆಗೆ ಆಕಾಶವಾಣಿಯಲ್ಲಿ ಒಬ್ಬ ಕಲಾವಿದ ಗಾಯನ ಕಾರ್ಯಕ್ರಮ ನೀಡಬೇಕೆಂದರೆ ಮೊದಲಿಗೆ ಯಾವ ಹಾಡನ್ನು ಹಾಡುತ್ತಿದ್ದಾರೆ ಹಾಗೂ ಅದನ್ನು ಬರೆದವರು ಯಾರು ಎಂಬುದು ತಿಳಿಸಬೇಕು. ಆಗವರು ತಮ್ಮಲ್ಲಿ ಪಟ್ಟಿ ಮಾಡಿಟ್ಟುಕೊಂಡ ಕೆಲವು ಕವಿಗಳ ಹೆಸರನ್ನು ಹುಡುಕುತ್ತಾರೆ. ಒಂದು ವೇಳೆ ಈತ ಹಾಡುವ ಹಾಡನ್ನು ಬರೆದ ಕವಿಯ ಹೆಸರು ಆ ಪಟ್ಟಿಯಲ್ಲಿ ಇಲ್ಲದೇ ಹೋದರೆ ಹಾಡುವುದಕ್ಕೆ ಅವಕಾಶವಿಲ್ಲ. ಏಕೆಂದು ಪ್ರಶ್ನಿಸಿದರೆ ಅವರು ಗುರುತಿಸಿಕೊಂಡ ಕವಿಯಲ್ಲ ಎಂದು ಹೇಳುತ್ತಾರೆ. ಬಹುಶಃ ಸರ್ಕಾರ ಗುರುತಿಸಿದ ಕವಿಯಲ್ಲ. ಇಲ್ಲಿ ಕವಿ ಗುರುತಿಸಿಕೊಳ್ಳುವುದು ತನ್ನ ಕವಿತೆಯಿಂದಲೇ ಹೊರತು ಹೆಸರಿನಿಂದಲ್ಲ. ಅಷ್ಟಕ್ಕೂ ಕವಿಗಳನ್ನು ಪಟ್ಟಿ ಮಾಡಿ ಇವರು ಶ್ರೇಷ್ಠ ಎಂದು ಹೇಳುವುದಕ್ಕೆ ಆಕಾಶವಾಣಿಗೆ ಯಾವ ಮಾನದಂಡವಿದೆ ಹೇಳಿ? ಇದಕ್ಕೆಲ್ಲ ಕಾರಣವೇನು ಗೊತ್ತಾ? ಅದು ಕೇವಲ ನಾವು ಬೇರೆಡೆಗೆ ನಮ್ಮ ದೃಷ್ಠಿ ಹಾಯಿಸಿ ನಮ್ಮವರನ್ನು ಕಡೆಗಣಿಸಿದ್ದು. ಇದು ಇನ್ನೂ ನಮಗೆ ಅರ್ಥವಾಗದೇ ಇರುವುದು ದೊಡ್ಡ ದುರಂತವೇ ಸರಿ. ಅದೇ ಕಾರಣಕ್ಕಾಗಿಯೇ ಪ್ರಶಸ್ತಿಗಳನ್ನು ನೀಡಬೇಕಾದರೂ ಕೂಡ ಸ್ಥಳಿಯರನ್ನು ಕಡೆಗಣಿಸಿ ಈ ಭಾಗದ ಬಗ್ಗೆ ಗಂಧ ಗಾಳಿಯೂ ಗೊತ್ತಿಲ್ಲದ ಜನರನ್ನು ಹುಡುಕಿಕೊಂಡು ತಂದು ಪ್ರಶಸ್ತಿ ನೀಡುತ್ತಿರುವುದು. ಅದನ್ನು ನಾವು ಬೆರಗುಗಣ್ಣಿನಿಂದ ನೋಡುತ್ತಿರುವುದು. 

ಇತ್ತೀಚೆಗೆ ನಮ್ಮ ಜಿಲ್ಲೆಯವರು ಬರೆದ ಕಾದಂಬರಿಗಳು ಪ್ರಕಟಗೊಂಡವು. ರಾಗಂ ಅವರ ‘ದಂಡಿ’ ಚಲನಚಿತ್ರವಾಗುತ್ತಿದೆ, ಹೆಚ್‌.ಟಿ.ಪೋತೆಯವರ ‘ಬಯಲೆಂಬೊ ಬಯಲು’ ಕನ್ನಡದ ಬಯೋಪಿಕ್ ಕಾದಂಬರಿ ಲೋಕಕ್ಕೆ ಅಡಿ ಇಟ್ಟಿದೆ, ಬಸವರಾಜ ಡೋಣೂರ ಅವರ ‘ಉರಿವ ಕೆಂಡದ ಮೇಲೆ’ ಬೃಹತ್ ಕಾದಂಬರಿಯಾಗಿ ಹೊರ ಬಂದಿದೆ. ಶಂಕರ ಬೈಚಬಾಳ ಅವರ ‘ಭಾರತ ಸಿಂಹಾಸನ ರಶ್ಮಿ’ ದೇಶಿ ಸೊಗಡನ್ನು ಎತ್ತಿ ತೋರಿಸುತ್ತಿದೆ. ಆದರೆ ಇವುಗಳನ್ನು ಓದುವುದಕ್ಕೆ ಸ್ಥಳೀಯ ಓದುಗರು ಮನಸ್ಸು ಮಾಡುತ್ತಿಲ್ಲ. ಏಕೆಂದರೆ ಹಿತ್ತಲ ಗಿಡ ಮದ್ದಲ್ಲ ಎನ್ನುತ್ತಾರಲ್ಲ ಹಾಗೆ ನಮ್ಮವರು ಏನೇ ಬರೆದರು ಅದು ದೊಡ್ಡದಲ್ಲ. ಆ ಭಾಗದವರು ಏನೆ ಬರೆದರು ಅದು ಸಣ್ಣದಲ್ಲ ಎನ್ನುವಷ್ಟರ ಮಟ್ಟಿಗೆ ನಾವು ಆ ಕಡೆ ಭಾಗದಕ್ಕೆ ಸೋತು ಹೋಗಿದ್ದೇವೆ. ನಮ್ಮವರಿಗೆ ಭೈರ​‍್ಪನವರೊಬ್ಬರೆ ಕಾದಂಬರಿಕಾರರು. ಸ್ಥಳೀಯರು ಕಾದಂಬರಿ ಬರೆದರೆ ಅದೂ ಲೆಕ್ಕಕ್ಕಿಲ್ಲ. ಇದೇ ಕಾರಣದಿಂದಲೇ ದ.ರಾ.ಬೇಂದ್ರಯವರನ್ನು ನಾವು ಕೊಂಡಾಡುತ್ತೇವೆ. ಅದೇ ಬೇಂದ್ರೆಯಯವರು ನಮ್ಮ ಮಧುರ ಚನ್ನರನ್ನು ಕೊಂಡಾಡುತ್ತಾರೆ. ಏಕೆಂದರೆ ನಮ್ಮ ಸಾಹಿತಿಗಳ ತಾಕತ್ತೇನು ಎನ್ನುವುದನ್ನು ಅವರು ಅರ್ಥ ಮಾಡಿಕೊಂಡಿದ್ದರು. ಅದು ನಮ್ಮವರಿಗೆ ಅರ್ಥವಾಗದಿರುವುದು ಬೇಸರದ ಸಂಗತಿ. ಇನ್ನಾದರೂ ನಮ್ಮವರು ಈ ಗುಂಗಿನಿಂದ ಹೊರ ಬಂದರೆ ಒಳ್ಳೆಯದು. ಏಕೆಂದರೆ ಬೇಂದ್ರ ಅಜ್ಜ ಹೇಳಿದಂತೆ ಸಾವಿರದ ಒಂದು ಕವಿತೆ ಬರೆದರೆ ಸಾಕು ಆತ ಜೀವಂತವಾಗಿ ಉಳಿಯುತ್ತಾನೆ. ಕನ್ನಡ ಭಾಷೆಯಲ್ಲಿ ಏನೇ ಬರೆದರು ಅದು ಚಂದವೇ ಆಗಿರುತ್ತದೆ. ಇಲ್ಲಿ ಬರೆಯುವ ಪದಗಳ ಲಾಲಿತ್ಯದಿಂದ ಲೇಖಕ ಜನ ಮಾನಸದಲ್ಲಿ ಉಳಿಯುವುದಕ್ಕೆ ಸಾಧ್ಯವಾಗುತ್ತದೆಯೇ ಹೊರತು ಆತ ಯಾವ ಭಾಗದ ಸಾಹಿತಿ ಎನ್ನುವುದರಿಂದಲ್ಲ. ಅದು ಕಡಲ ತಡಿಯಾಗಿರಲಿ, ಮಲೆ ನಾಡಿನ ಮಲೆಯಾಗಿರಲಿ, ಭೀಮೆಯ ಒಡಲಾಗಿರಲಿ, ಕಲಬುರ್ಗಿಯ ಬಿಸಿಲಾಗಿರಲಿ. ಇಲ್ಲಿ ಗಟ್ಟಿ ಸಾಹಿತ್ಯವೇ ದಿಟ್ಟ ಉತ್ತರ ನೀಡುತ್ತದೆ. ಅದಕ್ಕೆ ಹೇಳಿದ್ದು ಮಾತೆತ್ತಿದರೆ ಸಾವಿಲ್ಲದ ಸಾಹಿತ್ಯ ನೀಡಿದರು ಎಂದು ಹೇಳುವುದನ್ನು ನಿಲ್ಲಿಸಿ ಸಾವಿಲ್ಲದ ಸಾಹಿತ್ಯವನ್ನು ನಮ್ಮವರು ಬರೆದು ಶಾಶ್ವತವಾಗಲಿ ಎನ್ನುವುದನ್ನು ಮುಗ್ದ ಮನಸ್ಸಿನಿಂದ ನಮ್ಮವರನ್ನು ಹರಸಿ ಏನಂತಿರ...? 

- * * * -