ಕುರುಗೋಡು ಉತ್ಸವ: ಅದ್ದೂರಿಯಾಗಿ ನಡೆದ ಸಾಂಸ್ಕೃತಿಕ ಸೊಬಗಿನ ಜಾನಪದ ಮೆರವಣಿಗೆ

ಕುರುಗೋಡು ಉತ್ಸವ: ಅದ್ದೂರಿಯಾಗಿ ನಡೆದ ಸಾಂಸ್ಕೃತಿಕ ಸೊಬಗಿನ ಜಾನಪದ ಮೆರವಣಿಗೆ  Kurugod Festival: A grand cultural and elegant folk procession

ಬಳ್ಳಾರಿ 16:  ಕುರುಗೋಡು ಉತ್ಸವದ ಅಂಗವಾಗಿ ಭಾನುವಾರ ಪಟ್ಟಣದಲ್ಲಿ ಸಾಂಸ್ಕೃತಿಕ ಸೊಬಗಿನ ಜಾನಪದ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು.  ಪಟ್ಟಣದ ಸಿಂಧಿಗೇರಿ ರಸ್ತೆಯಲ್ಲಿನ ಶ್ರೀ ಗಾದಿಲಿಂಗೇಶ್ವರ ದೇವಸ್ಥಾನ ಬಳಿ ಉತ್ಸವದ ಮೂರ್ತಿ ಪಾರ್ವತಿ-ಪರಮೇಶ್ವರನಿಗೆ ಕಂಪ್ಲಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ (ಕಾವೇರಿ ಹ್ಯಾಂಡ್ಲೂಮ್ಸ್‌) ದ ಅಧ್ಯಕ್ಷರೂ ಆಗಿರುವ ಜೆ.ಎನ್‌.ಗಣೇಶ್ ಅವರು ಪುಷ್ಪಾರ್ಚನೆ ಮಾಡಿ ಜಾನಪದ ಮೆರವಣಿಗೆಗೆ ಚಾಲನೆ ನೀಡಿದರು.

ಚೊಚ್ಚಲ ಉತ್ಸವ ಅಂಗವಾಗಿ ಕಲಾ ತಂಡಗಳ ಮೂಲಕ ಗ್ರಾಮೀಣ ಭಾಗದ ಸಾಂಸ್ಕೃತಿಕ ವೈವಿಧ್ಯತೆಗೆ ಜಾನಪದ ಮೆರವಣಿಗೆಯು ಸಾಕ್ಷಿಯಾಯಿತು. ಪಟ್ಟಣದ ಇಕ್ಕೆಲಗಳಲ್ಲಿ ನೆರೆದಿದ್ದ ನೋಡುಗ ಜನರ ಜನಮನ ಸೆಳೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಾಸಿ ರಾಂಡೋಲ್, ಹಲಗೆವಾದನ, ವೀರಗಾಸೆ, ಹಗಲುವೇಷ, ಗೊರವರ ನೃತ್ಯ ಕುಣಿತ, ನಂದಿಧ್ವಜ, ಕಹಳೆ ವಾದನ, ಹಕ್ಕಿಪಿಕ್ಕಿ ನೃತ್ಯ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಕಳಸ-ಕುಂಭ ಹೊತ್ತ 100 ಕ್ಕೂ ಹೆಚ್ಚು ಮಹಿಳೆಯರು ಗಮನಸೆಳೆದರು. ಜಾನಪದ ಮೆರವಣಿಗೆಯು ಗಾದಿಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡು ಪಟ್ಟಣದ ಮುಖ್ಯವೃತ್ತದ ಮಾರ್ಗವಾಗಿ ದೊಡ್ಡಬಸವೇಶ್ವರ ದೇವಸ್ಥಾನದ ಆವರಣಕ್ಕೆ ತಲುಪಿ ಸಂಪನ್ನಗೊಂಡಿತು.

ಈ ವೇಳೆ ಕುರುಗೋಡು ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಕುರುಗೋಡು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಸವನಗೌಡ, ತಹಶೀಲ್ದಾರ ನರಸಪ್ಪ, ತಾಪಂ ಇಓ ನಿರ್ಮಲಾ, ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.