ಸೆ. 10ರಂದು ಕುಮಾರ ಶಿವಯೋಗಿ ಮಹೋತ್ಸವ: ನಾಡಿನ 150ಕ್ಕೂ ಮಠಾಧೀಶರು ಭಾಗಿ

ಸೆ. 10ರಂದು ಕುಮಾರ ಶಿವಯೋಗಿ ಮಹೋತ್ಸವ: ನಾಡಿನ 150ಕ್ಕೂ ಮಠಾಧೀಶರು ಭಾಗಿ Kumara Shivayogi Mahotsav on Sept. 10

ಗಂಗಾವತಿ 06: ಶಿವಯೋಗ ಮಂದಿರದ ಸಂಸ್ಥಾಪಕ ಲಿಂ.ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 158ನೇ ಜಯಂತಿ ಮಹೋತ್ಸವವನ್ನು ಸೆ. 10 ರಿಂದ 11 ದಿನಗಳ ವರೆಗೆ ಗಂಗಾವತಿ ನಗರದಲ್ಲಿ ಅದ್ಧೂರಿ ಆಚರಿಸಲಾಗುವುದು.

ಶಿವಯೋಗ ಮಂದಿರದಲ್ಲಿ ಅಭ್ಯಾಸ ಮಾಡಿರುವ, ನಾಡಿನ ಸುಮಾರು 150ಕ್ಕೂ ಹೆಚ್ಚು ಮಠಾಧೀಶರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ ಎಂದು ವೀರಶೈವ ಲಿಂಗಾಯತ ಮಹಾಸಭಾ ತಾಲೂಕಾಧ್ಯಕ್ಷ ಎಚ್‌.ಗಿರಿಗೌಡ ಹೇಳಿದರು.ನಗರದ ಮಲ್ಲಿಕಾರ್ಜುನ ಮಠದ ಪುರಾಣ ಮಂಟಪದಲ್ಲಿ ಕಾರ್ಯಕ್ರಮದ ಆಹ್ವಾನದ ಕರ ಪತ್ರ ಬಿಡುಗಡೆ ಮಾಡಿ ಶನಿವಾರ ಮಾತನಾಡಿದರು.ಕಾರ್ಯಕ್ರಮದ ಅಂಗವಾಗಿ ಸೆ.10 ರಿಂದ ಕುಮಾರ ಶಿವಯೋಗಿಗಳ ಜೀವನದರ್ಶನ ಪ್ರವಚನ ಮಲ್ಲಿಕಾರ್ಜುನ ಮಠದ ಪುರಾಣ ಮಂಟಪದಲ್ಲಿ ನಡೆಯಲಿದೆ. ಸೆ. 11 ರಿಂದ ಸೆ.19ರ ವೇರೆಗೆ ಪ್ರತಿ ದಿನ ಗಂಗಾವತಿಯ ವಿವಿಧ ವಾರ್ಡ್‌  ನಲ್ಲಿ ಬೆಳಗ್ಗೆ 5.30ರಿಂದ 7 ಗಂಟೆ ವರೆಗೆ, ಗ್ರಾಮೀಣ ಭಾಗದಲ್ಲಿ ಬೆಳಗ್ಗೆ 8.30ರಿಂದ 12.30ರ ವರೆಗೆ ಸದ್ಭಾವನಾ ಪಾದಯಾತ್ರೆ ನಡೆಯಲಿದೆ. ಈ ವೇಳೆ ಶ್ರೀಗಳು ಜನರಿಂದ ದುಶ್ಚಟಗಳನ್ನು ಭಿಕ್ಷೆ ರೂಪದಲ್ಲಿ ಜೋಳಿಗೆಗೆ ಹಾಕಿಸಿಕೊಂಡು, ರುದ್ರಾಕ್ಷಿ ಹಾಕುವ ಮೂಲಕ ಸದ್ಗುಣಗಳ ದೀಕ್ಷೆ ನೀಡಲಿದ್ದಾರೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಯಾತ್ರೆ ನಡೆಯುವ ಸ್ಥಳವನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.   

ಅಖಿಲ ಭಾತರ ವೀರಶೈವ ಮಹಾಸಭಾ ಹಾಗೂ ಜಯಂತ್ಯುತ್ಸವ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಿಳೆಯರು ಈಗಾಗಲೇ ರುದ್ರಾಕ್ಷಿ ಪೋಷಿಸುವ ಕೆಲಸ ಮಾಡುತ್ತಿದ್ದಾರೆ. ಸದ್ಭಾವನಾ ಯಾತ್ರೆಯಲ್ಲಿ ಶ್ರೀಗಳು ಗ್ರಾಮಸ್ಥರಿಗೆ ರುದ್ರಾಕ್ಷಿ ಧಾರಣೆ ಮಾಡುತ್ತಿದ್ದಾರೆ. ಶಾಸಕ ಜನಾರ್ದನ ರೆಡ್ಡಿ ಸೇರಿ ಪ್ರಮುಖ ಗಣ್ಯರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ನಿಕಟಪೂರ್ವ ತಾಲೂಕಾಧ್ಯಕ್ಷ ಅಶೋಕಸ್ವಾಮಿ ಹೇರೂರು, ಮುಖಂಡರಾದ ತಿಪ್ಪೇರುದ್ರಸ್ವಾಮಿ, ವಿರೂಪಾಕ್ಷಪ್ಪ ಸಿಂಗನಾಳ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಮುದಗಲ್ ಮಾತನಾಡಿದರು.

ಮಹಾಸಭಾ ಮುಖಂಡರಾದ ಮನೋಹರಗೌಡ ಹೇರೂರು, ಜಿ.ಶ್ರೀಧರ, ಮಹಾಂತೇಶ ಶಾಸ್ತ್ರಿಮಠ, ಸಂದ್ಯಾ ಹೇರೂರು, ಮಹಿಳಾ ಘಟಕದ ಕಾರ್ಯದರ್ಶಿ ಶಿಲ್ಪ ಶ್ರೀನಿವಾಸ, ಕವಿತಾ ಗುರುಮೂರ್ತಿ, ಮಹಾಂತಾ ಪಾಟೀಲ್, ಯುವ ಘಟಕದ ಅಧ್ಯಕ್ಷ ಶರಣಬಸವ ಹುಲಿಹೈದರ, ಸಂಗಯ್ಯಸ್ವಾಮಿ ಸಂಶಿಮಠ, ಮಹಾಂತಗೌಡ ಇದ್ದರು.