ಬೇಸಿಗೆ ಸಮಯದಲ್ಲಿ ಬತ್ತುತ್ತಿರುವ ಕೃಷ್ಣೆ: ಜಾಗೃತಿ ಅಗತ್ಯ

ಲೋಕದರ್ಶನ ವರದಿ

ಅಥಣಿ 05: ಬೇಸಿಗೆ ಸಮಯದಲ್ಲಿ ಕೃಷ್ಣಾ ನದಿ ಬತ್ತುತ್ತಿರುವ ಪರಿಣಾಮ ಕೃಷಿ, ಕುಡಿಯುವ ನೀರು, ಉದ್ಯಮ ಕ್ಷೇತ್ರಕ್ಕೆ ಭಾರೀ ಹಿನ್ನಡೆಯುಂಟಾಗುತ್ತಿದ್ದು, ಈ ಸಂಬಂಧದಲ್ಲಿ ಜನಜಾಗೃತಿ ಮೂಡಿಸಿ ಸರಕಾರದ ಮಟ್ಟದಲ್ಲಿ ಈ ಭಾಗದ ಜನರ  ಸಮಸ್ಯೆಗಳನ್ನು ತಲುಪಿಸುವ ಉದ್ದೇಶ ಕೃಷ್ಣಾ ನದಿ ನೀರು ಹೋರಾಟ ಸಮಿತಿ, ಕೃಷ್ಣಾ ನದಿ ನೀರು ಹಾಗೂ ರೈತ ಅಭಿವೃದ್ಧಿ ಸಮಿತಿಯದ್ದಾಗಿದೆ ಎಂದು ಸಮಿತಿ ಅಧ್ಯಕ್ಷ ಬಸನಗೌಡಾ ಪಾಟೀಲ (ಬೊಮ್ಮನಾಳ) ತಿಳಿಸಿದರು. ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.  

      ಕಳೆದ ಅನೇಕ ದಶಕಗಳಿಂದ ಕೃಷ್ಣಾ ನದಿ ಪಾತ್ರದಲ್ಲಿ ಬೇಸಿಗೆ ಅವಧಿಯಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಮಹಾರಾಷ್ಟ್ರ ಸರಕಾರದೊಂದಿಗೆ ಒಪ್ಪಂದ  ಮಾಡಿಕೊಂಡು ಜನೇವರಿಯಿಂದ ಜೂನ್ ವರೆಗೆ 4 ಟಿಎಮ್ಸಿ ನೀರು ಹರಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎನ್ನುವುದೇ ನಮ್ಮ ಸಮಿತಿಯ ಉದ್ದೇಶವಾಗಿದೆ ಎಂದರು.  

ಕೃಷ್ಣಾ ನದಿ ನೀರಿನ ಮೇಲೆ ಅವಲಂಬಿತವಾಗಿ ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳ 800 ಕ್ಕೂ ಹೆಚ್ಚು ಗ್ರಾಮಗಳು ಹಾಗೂ ಹತ್ತಾರು ನಗರ ಮತ್ತು ಪಟ್ಟಣ ಪ್ರದೇಶಗಳಿವೆ ಎಂದ ಅವರು ಕಳೆದ ಬೇಸಿಗೆ ಅವಧಿಯಲ್ಲಿ 3 ತಿಂಗಳಿಗೂ ಹೆಚ್ಚು ಕಾಲ ಕೃಷ್ಣಾ ನದಿಯಲ್ಲಿ ನೀರು ಇರಲಿಲ್ಲ ಈ ಸಂಬಂಧದಲ್ಲಿ ನಮ್ಮ ಸಮಿತಿ ನೇತೃತ್ವದಲ್ಲಿ ಒಂದು ತಿಂಗಳವರೆಗೆ ಸತತ ಹೋರಾಟ ನಡೆಸಿದ್ದಲ್ಲದೆ  ಸರಕಾರಕ್ಕೆ ನಿಯೋಗದಲ್ಲಿ ತೆರಳಿ ಈ ಸಮಸ್ಯೆಯನ್ನೂ ಸರಕಾರದ ಮಟ್ಟದಲ್ಲಿ ತಲುಪಿಸುವ ಕಾರ್ಯವನ್ನು ಕೂಡ ಮಾಡಲಾಗಿತ್ತು ಎಂದು ಹೇಳಿದರು. ಆನಹಿತಕ್ಕಾಗಿ ಸಮಾಜದ ಏಳಿಗಾಗಿ ರಚನೆಯಾದ ಈ ಸಮಿತಿಯು ಕನ್ನಡ ಪರ, ರೈತ ಪರ, ದಲಿತ ಪರ ಹಾಗೂ ಪತ್ರಕರ್ತರ ಸಂಘದ ಪದಾಧಿಕಾರಿಗಳನ್ನು ಒಳಗೊಂಡಿದ್ದು, ಈ ಸಮಿತಿಯ ಉದ್ಘಾಟನಾ ಸಮಾರಂಭ ಮಾರ್ಚ 7 ಶನಿವಾರದಂದು ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ಡಾ.ಆರ್.ಎಚ್.ಕುಲಕರ್ಣಿ  ಸಭಾ ಭವನದಲ್ಲಿ ನಡೆಯಲಿದೆ. ಸಮಿತಿಯ ಉದ್ಘಾಟನೆಯನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ನೆರವೇರಿಸುವರು, ಅಧ್ಯಕ್ಷತೆಯನ್ನು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಹಿಸುವರು, ಮುಖ್ಯ ಅತಿಥಿಗಳಾಗಿ ಜವಳಿ ಹಾಗೂ ಅಲ್ಪಸಂಖ್ಯಾತ ಸಚಿವ ಶ್ರೀಮಂತ ಪಾಟೀಲ, ಶಾಸಕ ಮಹೇಶ ಕುಮಠಳ್ಳಿ ಹಾಗೂ ಅತಿಥಿಗಳಾಗಿ ಜೆ.ಇ.ಶಿಕ್ಷಣ ಸಂಸ್ಥೆಯ ಅರವಿಂದರಾವ ದೇಶಪಾಂಡೆ, ಮಾಜಿ ಶಾಸಕರಾದ ರಾಜು ಕಾಗೆ, ಶಹಜಹಾನ ಡೊಂಗರಗಾಂವ,  ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಜೆಡಿಎಸ್ ಮುಖಂಡ ಗಿರೀಶ ಬುಟಾಳಿ, ನ್ಯಾಯವಾದಿ ಸಂಘದ ಅಧ್ಯಕ್ಷ ಕೆ.ಎ.ವಣಜೋಳ ಆಗಮಿಸಲಿದ್ದಾರೆ ಎಂದು ತಿಳಿಸಿದರು.  

    ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಜವಳಿ ಹಾಗೂ ಅಲ್ಪಸಂಖ್ಯಾತ ಸಚಿವ ಶ್ರೀಮಂತ ಪಾಟೀಲ, ಶಾಸಕ ಮಹೇಶ ಕುಮಠಳ್ಳಿ ಇವರನ್ನು ಸತ್ಕರಿಸಲಾಗುವುದು ಎಂದು ಹೇಳಿದರು.

    ಸುದ್ದಿಗೋಷ್ಟಿಯಲ್ಲಿ ಸಮಿತಿ ಪ್ರಧಾನಿ ಕಾರ್ಯದಶರ್ಿ ವಿಜಯಕುಮಾರ ಅಡಹಳ್ಳಿ, ಇಮ್ರಾನ್ ಪಟೇಲ್, ಚಿದಾನಂದ ಶೇಗುಣಸಿ, ಶಬ್ಬೀರ ಸಾತಬಚ್ಚೆ, ದೀಪಕ ಶಿಂಧೆ, ಸಿದಗೌಡ ಹಿಪ್ಪರಗಿ ಉಪಸ್ಥಿತರಿದ್ದರು.