ಕೃಷ್ಣೆಯ ಸಂಸ್ಕೃತಿ ಪುನರುತ್ಥಾನಕ್ಕೆ ಕೃಷ್ಣಾ ಆರತಿ ಮುನ್ನುಡಿ ಬರೆಯುತ್ತದೆ : ಸಂಗಮೇಶ ನಿರಾಣಿ

ಕೃಷ್ಣೆಯ ಸಂಸ್ಕೃತಿ ಪುನರುತ್ಥಾನಕ್ಕೆ ಕೃಷ್ಣಾ ಆರತಿ ಮುನ್ನುಡಿ ಬರೆಯುತ್ತದೆ : ಸಂಗಮೇಶ ನಿರಾಣಿ Krishna Aarti program

ಹಿಪ್ಪರಗಿಯಲ್ಲಿ ಮುರುಗೇಶ ನಿರಾಣಿ ಹುಟ್ಟುಹಬ್ಬದ ನಿಮಿತ್ಯ ಕೃಷ್ಣಾ ಆರತಿ ಽಪುಣ್ಯಸ್ನಾನದಲ್ಲಿ ನೂರಾರು ನಾಗಾ ಸಾಧುಗಳು ಭಾಗಿ. 

ಸಾಂಸ್ಕೃತಿಕ ಅಭಿಮಾನ ಶೂನ್ಯತೆಯಿಂದ ನಮ್ಮ ನೀರು ಸದ್ಬಳಕೆ ಮಾಡಿಕೊಳ್ಳುವಲ್ಲಿಯೂ ನಾವು ಹಿಂದೆ ಬಿದ್ದಿದ್ದೇವೆ. 

ಕೃಷ್ಣೆ ಉತ್ತರ ಕರ್ನಾಟಕದ ಜೀವನದಿ ಮಾತ್ರವಲ್ಲ, ಆಕೆ ದಕ್ಷಿಣ ಭಾರತದ ಗಂಗೆಯಾಗಿದ್ದಾಳೆ. ಉತ್ತರದಲ್ಲಿ ಗಂಗೆ, ಯಮುನೆಯರಿಗೆ ದೊರೆತ ಪ್ರಾಶಸ್ತ್ಯ, ದಕ್ಷೀಣ ಭಾರತದಲ್ಲಿ ಗೋದಾವರಿ, ಕಾವೇರಿಗೆ ದೊರೆತ ಮನ್ನಣೆ ಬಹುಷಃ ಕೃಷ್ಣೆಗೆ ಇಲ್ಲಿಯವರೆಗೂ ದೊರೆತಿಲ್ಲ. ಅದರಲ್ಲೂ ಕೃಷ್ಣೆಯನ್ನು ಆಂದ್ರ-ಮಹಾರಾಷ್ಟ್ರದವರು ಆದರಿಸಿದಷ್ಟು ಕೂಡ ನಾವು ಉತ್ತರ ಕರ್ನಾಟಕದವರು ಇಲ್ಲಿಯವರೆಗೂ ಆದರಿಸಿದರಿರುವುದು ನಮ್ಮ ಮಟ್ಟಿಗೆ ಸಾಂಸ್ಕೃತಿಕ ದುರಂತವಾಗಿದೆ. ಈ ಕಾರಣದಿಂದಾಗಿಯೇ ನಾವು ಆಕೆಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ತಿಳಿದುಕೊಳ್ಳುವುದರಲ್ಲಿಯೂ ಹಿಂದೆ ಬಿದ್ದಿದ್ದೇವೆ. ಸಾಮಾಜಿಕವಾಗಿ ನಮ್ಮ ಪಾಲಿನ ನೀರಾವರಿ ಯೋಜನೆಯನ್ನು ಪಡೆದುಕೊಳ್ಳುವುದರಲ್ಲಿ ಅಕ್ಷರಷಃ ಸೋತಿದ್ದೇವೆ. ಈ ಅಭಿಮಾನ ಶೂನ್ಯತೆಯಿಂದ ಹೊರ ಬರಲು ಹಾಗೂ ಜನಜಾಗೃತಿ ಮೂಡಿಸುವ ಮೂಲಕ ಕೃಷ್ಣಾ ನದಿ ಸಂಸ್ಕೃತಿಯ ಪುನರುತ್ಥಾನಕ್ಕೆ ಕೃಷ್ಣಾ ಆರತಿ ಕಾರ್ಯಕ್ರಮ ಮುನ್ನುಡಿ ಬರೆಯಲಿದೆ. 

ಕಳೆದ ಬಾರಿ ಅತ್ಯಂತ ಕಿರು ಅವಧಿಯಲ್ಲಿ ಆಯೋಜಿಸಿದ ಕೃಷ್ಣಾ ಆರತಿ ಕಾರ್ಯಕ್ರಮ ತುಂಬ ಯಶಸ್ವಿಯಾಗಿತ್ತು. ಇದು ನಮ್ಮ ರೈತರು ಹಾಗೂ ಜನತೆ ಕೃಷ್ಣೆಯ ಮೇಲೆ ಇಟ್ಟುಕೊಂಡಿರುವ ಅಭಿಮಾನವನ್ನು ಪ್ರತಿಬಿಂಬಿಸಿತ್ತು. ಹೀಗಾಗಿ ಈ ಬಾರಿಯೂ ಕೃಷ್ಣಜನ್ಮಾಷ್ಟಮಿ ಹಾಗೂ ಸಹೋದರರಾದ ಶ್ರೀ ಮುರುಗೇಶ ಆರ್‌. ನಿರಾಣಿಯವರ 60ನೇ ಹುಟ್ಟುಹಬ್ಬದ ನಿಮಿತ್ಯವಾಗಿ ಇದೇ ಆಗಷ್ಟ್‌ 16ರಂದು ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಸಂಗಮೇಶ್ವರ ಮಠದ ಆವರಣದ ಕೃಷ್ಣಾ ತೀರದಲ್ಲಿ ಕುಂಭಮೇಳ ಮಾದರಿಯಲ್ಲಿ ಕೃಷ್ಣಾ ಪುಣ್ಯಸ್ನಾನ ಹಾಗೂ ಕೃಷ್ಣಾ ಆರತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯು ಕಾಶಿಯ ವಿಶ್ವಪ್ರಸಿದ್ಧ ಗಂಗಾ ಆರತಿ ಮಾಡುವ ಪಂಡಿತರ ತಂಡದಿಂದಲೇ ಸಾಯಂಕಾಲ ಕೃಷ್ಣೆಗೆ ಭವ್ಯ ಆರತಿ ವೈಭವದಿಂದ ನಡೆಯುತ್ತದೆ. ಹಿಮಾಲಯದ ನೂರಕ್ಕೂ ಅಧಿಕ ಅಘೊರಿಗಳು ಹಾಗೂ ನಾಗಾ ಸಾಧುಗಳು ಈ ಬಾರಿ ಕೃಷ್ಣಾ ಪುಣ್ಯಸ್ನಾನದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಅಲ್ಲದೇ 3 ಜಿಲ್ಲೆಗಳ 250ಕ್ಕೂ ಅಧಿಕ ದೇವಸ್ಥಾನಗಳಿಂದ ಪಲ್ಲಕ್ಕಿಗಳು ಕೃಷ್ಣಾ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಮುರುಗೇಶ ನಿರಾಣಿಯವರ 60ನೇ ಹುಟ್ಟುಹಬ್ಬ ಆಚರಣೆ ಹಾಗೂ ರಾತ್ರಿ ಈಶಾ ಫೌಂಡೇಶನ್‌ನ ಮಹಾಶಿವರಾತ್ರಿ ಮಾದರಿಯಲ್ಲಿ ನಾಡಿನ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಇಡೀ ದಿನ ವಿಶೇಷ ಕಾರ್ಯಕ್ರಮಗಳು ನಡೆಯಲಿದ್ದು, ಒಂದು ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನೀರೀಕ್ಷೆ ಇದೆ. 

ಈ ಬಾರಿಯ ಕೃಷ್ಣಾ ಆರತಿಗೆ ನಮ್ಮ ನಾಡಿನ ಸಂತ-ಮಹಾಂತರು, ಸಾಹಿತಿಗಳು, ಪತ್ರಕರ್ತರು, ಹಿರಿಯರು ಹಾಗೂ ಜನಸಮೂಹದಿಂದ ಅದ್ಭುತ ಬೆಂಬಲ ದೊರೆಯುತ್ತಿದೆ. ಕೃಷ್ಣೆಯ ಸಂಸ್ಕೃತಿಕ ಶ್ರೀಮಂತಿಕೆಯನ್ನು ಜನ ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ. ಈ ಸಾಂಸ್ಕೃತಿಕ ಪ್ರಜ್ಞೆಯ ಜಾಗೃತಿ ನಮ್ಮ ಭಾಗದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಲಿದೆ. ಕೇವಲ ಕೃಷ್ಣೆ ಮಾತ್ರವಲ್ಲ, ನಮ್ಮ ಎಲ್ಲ ನದಿಗಳ ಸಾಂಸ್ಕೃತಿಕ ಅರಿವು ನಮಗೆ ಅವಶ್ಯವಾಗಿದೆ. ಗಂಗೆ ಇಡೀ ಭಾರತದ ಪಾಪನಾಶಿನಿಯಾದಳು. ಕೊಡವರು ಕಾವೇರಿಯನ್ನು ಕುಲದೈವವಾಗಿ ಕಂಡರು. ಶರಾವತಿ ಕನ್ನಡದ ಭಾಗಿರಥಿಯಾದಳು. ಆದರೆ ಸಾಕ್ಷಾತ್ ಮಹಾವಿಷ್ಣುವಿನ ದೇಹವೇ ಆಗಿರುವ ಮಹಾಮಾಯಿ ಕೃಷ್ಣೆಗೆ ಪ್ರಾತಿನಿಧ್ಯ ಕೊಡುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ.  

ಪ್ರಯಾಗರಾಜ್‌ದಲ್ಲಿ ಕುಂಭಮೇಳವನ್ನು ಉತ್ತರ ಪ್ರದೇಶ ಸರ್ಕಾರವೇ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವ ಜೊತೆಗೆ ಯಶಸ್ವಿಯಾಗಿ ಸಂಘಟಿಸಿ ವಿಶ್ವವೇ ಭಾರತದೆಡೆ ತಿರುಗಿ ನಿಲ್ಲುವಂತೆ ಮಾಡಿತು. 2026ರಲ್ಲಿ ಆರಂಭವಾಗುವ ಗೋದಾವರಿ ಪುಷ್ಕರೋತ್ಸವ ಆಯೋಜನೆಗೆ ಇಡೀ ಮಹಾರಾಷ್ಟ್ರ ಸರ್ಕಾರ ಸಜ್ಜಾಗಿದೆ. ಅಷ್ಟೆ ಏಕೆ ನಮ್ಮ ರಾಜ್ಯ ಸರ್ಕಾರವು ಗಂಗಾ ಆರತಿ ಮಾದರಿಯಲ್ಲಿ ಕಾವೇರಿಗೆ ಆರತಿ ಮಾಡಿ ಕಾವೇರಿ ಅಭಿಮಾನ ಮೆರೆಯಿತು. ಆದರೆ ಕೃಷ್ಣೆ ಮಾತ್ರ ಎಲ್ಲರಿಗೂ ಮರೆತು ಹೋದಳು. ಕೇವಲ ಆರತಿ ಮಾತ್ರವಲ್ಲ, ನಮ್ಮ 130 ಟಿಎಂಸಿ ನೀರು, ಕೃಷ್ಣಾ ಮೇಲ್ದಂಡೆ ಯೋಜನೆ, ಕೃಷ್ಣಾ ಕೊಳ್ಳದ ಏತ ನೀರಾವರಿ ಯೋಜನೆಗಳು ಎಲ್ಲವೂ ಆಳುವ ಸರ್ಕಾರದ ಸ್ಮೃತಿ ಪಟಲದಿಂದ ದೂರವಾಗಿವೆ. ಕೇವಲ 6 ಟಿಎಂಸಿ ನೀರು ಹರಿಸುವ ಎತ್ತಿನಹೊಳೆಗೆ ಕಳೆದ 2-3 ಸರ್ಕಾರಗಳು 25 ಸಾವಿರ ಕೊಟಿಗೂ ಹಣ ವ್ಯಯಿಸಿವೆ. ಆದರೆ ದಶಕದಿಂದ ಹರಿದು ಹೋಗುತ್ತಿರುವ ನಮ್ಮ 130 ಟಿಎಂಸಿ ಬಗ್ಗೆ ಎಲ್ಲರಿಗೂ ಅಸಡ್ಡೆಯ ಭಾವ ಮೂಡುತ್ತಿದೆ.  

ಶಿವಮೊಗ್ಗ ಜಿಲ್ಲೆಯ ಶರಾವತಿ ಹಿನ್ನೀರಿನ ಕೇವಲ 10 ಹಳ್ಳಿ ಜನರಿಗಾಗಿ 350 ಕೋಟಿ ಖರ್ಚು ಮಾಡಿ ದೇಶದ 2ನೇ ಅತಿದೊಡ್ಡ ಕೆಬಲ್ ಬ್ರಿಡ್ಜ್‌ ನಿರ್ಮಿಸಿರುವುದು ಸ್ವಾಗತಾರ್ಹವಾಗಿದೆ. ಅಲ್ಲಿಯ ಜನರ ಹೋರಾಟ ಹಾಗೂ ಜನಪ್ರತಿನಿಧಿಗಳ ಇಚ್ಚಾಶಕ್ತಿಗೆ ನನ್ನ ಅಭಿನಂದನೆಗಳು. ಆದರೆ ನಮ್ಮ ಹಿಪ್ಪರಗಿ ಬಳಿಯೂ ಒಂದು ಬ್ಯಾರೇಜ್ ಇದೆ. ಅದು ಎರಡು ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ. ಆದರೆ ನಿತ್ಯ ಸಾವಿರಾರು ಜನ ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಅದೇ ಚಿಕ್ಕದಾದ ಬ್ಯಾರೇಜ್ ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತಾರೆ. ನಮ್ಮ ಆಳುವ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಎರಡು ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿರುವ ರಸ್ತೆಗೊಂದು ಸೇತುವೆ ಕಟ್ಟಿಕೊಡಬೇಕೆಂದು ಅನಿಸಲಿಲ್ಲ. ಇಂತಹ ಅಸಂಖ್ಯ ಅನ್ಯಾಯಗಳು ನದಿ, ನೀರು, ಮೂಲಭೂತ ಸೌಕರ್ಯ ವಿಷಯದಲ್ಲಿ ನಮಗಾಗುತ್ತಿವೆ. 

ಈ ಎಲ್ಲವುದಕ್ಕೂ ಒಂದೇ ಪರಿಹಾರ ನಮ್ಮ ಜನ ಜಾಗೃತರಾಗಬೇಕು. ಪ್ರಜ್ಞಾವಂತರಾಗಬೇಕು ನಮ್ಮಲ್ಲಿ ಧಾರ್ಮಿಕ ಸಾಂಸ್ಕೃತಿಕ, ಹಾಗೂ ಸಾಮಾಜಿಕ ಅರಿವು ಮೂಡಬೇಕು. ಜವಾಬ್ದಾರಿಯುತರಾಗಿ ಎದ್ದು ನಿಲ್ಲಬೇಕು. ಅವರು ಕಾವೇರಿಗೆ ಹಾಡಿ-ಕುಣಿದಂತೆ, ಆರಾಧಿಸಿದಂತೆ ನಮ್ಮ ಸಾಹಿತಿಗಳು, ಕಲಾವಿದರು ಕೃಷ್ಣೆಯ ಕುರಿತು ಸಾಹಿತ್ಯ ಕೃಷಿ ಮಾಡಬೇಕು. ಮಾಧ್ಯಮವು ಕೇವಲ ಕೃಷ್ಣೆಯ ಕಣ್ಣೀರು, ಕೃಷ್ಣೆಯ ಗೋಳು, ಮುಳುಗಿದ ಕೃಷ್ಣೆ, ಬರಿದಾದ ಕೃಷ್ಣೆ, ಸಂತ್ರಸ್ತರ ಕಣ್ಣೀರು ಎಂದು ಬರೆಯುವ ಬದುಲು ಕೃಷ್ಣೆಯ ಗಹನತೆ, ವಿಶಾಲತೆ, ಸಮೃದ್ಧತೆ, ನೀರಾವರಿ ಅವಕಾಶಗಳ ಕುರಿತು ಬೆಳಕು ಚೆಲ್ಲಬೇಕು. ಆಗ ಮಾತ್ರ ಈ ಪ್ರಯತ್ನಕ್ಕೆ ಸಾರ್ಥಕತೆ ಬರುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಸೇರಿ ಈ ಪವಿತ್ರ ಕಾರ್ಯದಲ್ಲಿ ಶ್ರದ್ಧೆಯಿಂದ ತೊಡಗಿಕೊಳ್ಳೋಣ. ಬನ್ನಿ, ಭಾಗವಹಿಸಿ, ನಮ್ಮ ಅಸ್ಮಿತೆಯ ಪ್ರತೀಕವಾದ ಕೃಷ್ಣಾ ಉತ್ಸವವನ್ನು ಐತಿಹಾಸಿಕವಾಗಿ ಯಶಸ್ವಿಗೊಳಿಸಿ.