ಪುಣೆ, ಏಪ್ರಿಲ್ 18, ಮಹಾರಾಷ್ಟ್ರದ ಪುಣೆ ನಗರದಲ್ಲಿ 43 ವರ್ಷದ ಪೊಲೀಸ್ ಸಿಬ್ಬಂದಿ ಮತ್ತು ಅವರ ಪತ್ನಿಗೆ ಕೊರೋನಾ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಅವರ ಪತ್ನಿಯಲ್ಲಿ ಶುಕ್ರವಾರ ಸಂಜೆ ಕೊರೋನವೈರಸ್ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಅವರನ್ನು ಪಿಂಪ್ರಿ-ಚಿಂಚ್‌ವಾಡ್ ಪ್ರದೇಶದಲ್ಲಿ ಪ್ರತ್ಯೇಕ ತಡೆ ವ್ಯವಸ್ಥೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಪೊಲೀಸ್ ಕಾನ್‌ಸ್ಟೆಬಲ್, ಪುಣೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದು, ಪಿಂಪ್ರಿ ಎಂಬಲ್ಲಿ ವಾಸಿಸುತ್ತಿದ್ದರು. ಈ ದಂಪತಿಯೊಂದಿಗೆ ಸಂಪರ್ಕ ಹೊಂದಿರುವವರ ಪತ್ತೆಗೆ ಈಗ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.ಆರೋಗ್ಯ ಅಧಿಕಾರಿಗಳ ಪ್ರಕಾರ, ಪುಣೆ ಜಿಲ್ಲೆಯಲ್ಲಿ ಈವರೆಗೆ 565 ಜನರಿಗೆ ಕೋವಿಡ್-19 ಪಾಸಿಟಿವ್ ಇರುವುದು ತಿಳಿದುಬಂದಿದೆ. ಈ ಪೈಕಿ 48 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.ಈ ಮಧ್ಯೆ ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳು ಶನಿವಾರ ಬೆಳಿಗ್ಗೆ 14,000 ದಾಟಿದೆ, ಒಟ್ಟು ಪ್ರಕರಣಗಳ ಸಂಖ್ಯೆ ಈಗ 14,378 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಮಹಾರಾಷ್ಟ್ರ ಅತ್ಯಂತ ಭೀಕರವಾದ ಕೋವಿಡ್-19 ಹೆಚ್ಚು ಬಾಧಿತ ರಾಜ್ಯವಾಗಿದ್ದು, ಈಗ ಇಲ್ಲಿ 201 ಸಾವು ಸಂಭವಿಸಿದ್ದು, ಸೋಂಕಿತರ ಸಂಖ್ಯೆ 3,323 ಕ್ಕೆ ತಲುಪಿದೆ. ನಂತರದ ಸ್ಥಾನದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ ಇದ್ದು, ಇಲ್ಲಿ 1,707 ಸೋಂಕು ಪ್ರಕರಣ ಹಾಗೂ 42 ಸಾವು ಸಂಭವಿಸಿದೆ.