ಬಳ್ಳಾರಿ, ಮೇ.19,ಗಡಿನಾಡು ಬಳ್ಳಾರಿಯ ಸತ್ಯನಾರಾಯಣಪೇಟೆಯ ಇದೇ ಮೊದಲ ಬಾರಿಗೆ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ 61 ವರ್ಷದ ವೃದ್ಧರೋರ್ವರು ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.ಬೆಂಗಳೂರಿನಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮೇ. 4ರಂದು ಬಳ್ಳಾರಿಗೆ ವಾಪಸಾಗಿದ್ದ ಅವರು ಉಸಿರಾಟದ ಸಮಸ್ಯೆ ಎದುರಾದ್ದರಿಂದ ವಿಮ್ಸ್‌ಗೆ ದಾಖಲಾಗಿದ್ದರು.ನಂತರ ಅವರನ್ನು ಕೋವಿಡ್-19 ಪರೀಕ್ಷೆ ಗೆ ಒಳಪಡಿಸಿದಾಗ ಮೇ. 17 ರಂದು ಅವರಿಗೆ ಸೋಂಕಿರುವುದು ಪತ್ತೆಯಾಗಿತ್ತು. ಅಲ್ಲದೆ, ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಸೋಮವಾರ ಸಂಜೆಯಿಂದಲೇ ಗಾಳಿ ಸುದ್ದಿಯೊಂದು ವಾಟ್ಸ್‌ಅಪ್ ಗ್ರೂಪ್‌ಗಳಲ್ಲೂ ಹರಿದಾಡಿತ್ತು.ಆದರೆ, ರಾತ್ರಿಯೂ ಅವರ ಆರೋಗ್ಯ ಸ್ಥಿರವಾಗಿತ್ತು. ಆದರೆ, ನಸುಕಿನ ಜಾವ 5ರ ಸುಮಾರಿಗೆ ಅವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.