ಕೊವಿಡ್-19: ಒಂದೇ ದಿನದಲ್ಲಿ ಅತಿ ಹೆಚ್ಚು ಪ್ರಕರಣಗಳು ದೃಢ, ದೇಶದಲ್ಲಿ 37 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ನವದೆಹಲಿ, ಮೇ ೨,ಒಂದೇ ದಿನದಲ್ಲಿ ಅತಿಹೆಚ್ಚು ಪ್ರಕರಣಗಳು ದೃಢಪಡುವುದರೊಂದಿಗೆ ಭಾರತದಲ್ಲಿ ಕೊವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆ 37 ಸಾವಿರ ದಾಟಿದೆ ಎಂದು ಸರ್ಕಾರದ ಮಾಹಿತಿ ಶನಿವಾರ ತಿಳಿಸಿದೆ. ದೇಶದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 37,336 ಕ್ಕೆಏರಿದೆ. ದೇಶದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 26,167 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ ೨೪ ತಾಸಿನಲ್ಲಿ ದೇಶದಲ್ಲಿ 2,293 ಪ್ರಕರಣಗಳು ದೃಢಪಟ್ಟಿದ್ದು, 71 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಸರ್ಕಾರದ ಮಾಹಿತಿ ತಿಳಿಸಿದೆ. ಶನಿವಾರದ ವೇಳೆಗೆ ಸಾವನ್ನಪ್ಪಿದವರ ಸಂಖ್ಯೆ 1218ಕ್ಕೆ ಏರಿದೆ. ಸೋಂಕಿನಿ0ದ ಗುಣಮುಖರಾದವರ ಪ್ರಮಾಣದಲ್ಲಿ ಸುಧಾರಣೆ ಕಂಡು ಬಂದಿದ್ದು, ಇದುವರೆಗೆ 9950 ಮಂದಿ ಚೇತರಿಸಿಕೊಂಡಿದ್ದಾರೆ. ಕಳೆದ 24 ತಾಸಿನಲ್ಲಿ 1062 ಸೋಂಕಿತರು ಗುಣಮುಖರಾಗಿದ್ದು, ದೇಶದಲ್ಲಿ ಚೇತರಿಕೆ ಪ್ರಮಾಣ ಶೇ 25.37ರಷ್ಟಿದೆ.
ಅತಿಹೆಚ್ಚು ಬಾಧಿತ ಮಹಾರಾಷ್ಟದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 11,506ಕ್ಕೆ ಏರಿದ್ದು, ಸಾವಿನ ಸಂಖ್ಯೆ 458ಕ್ಕೆ ಏರಿದೆ. ನಂತರದ ಸ್ಥಾನದಲ್ಲಿರುವ ಗುಜರಾತ್‌ನಲ್ಲಿ ಇದುವರೆಗೆ 4721 ಪ್ರಕರಣಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 236ಕ್ಕೇರಿದೆ. ಮೂರನೇ ಸ್ಥಾನದಲ್ಲಿರುವ ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ 3738ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 61ಕ್ಕೆ ಏರಿದೆ. ಮಧ್ಯಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ 2719ಕ್ಕೆ ಹಾಗೂ ಸಾವಿನ ಸಂಖ್ಯೆ145ಕ್ಕೆ ಏರಿದೆ.