ನವದೆಹಲಿ, ಏಪ್ರಿಲ್ 17 (ಯುಎನ್‌ಐ) ಕೊವಿಡ್ -19 ಹರಡುವಿಕೆ ತಡೆಯಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ (ಎಎಫ್‌ಎಂಎಸ್) ಕಾರ್ಯವೈಖರಿ ಮತ್ತು ಈ ಸೇವೆಗಳು ನಾಗರಿಕ ಆಡಳಿತಗಳಿಗೆ ಸಹಾಯವಾಗುತ್ತಿರುವುದರ ಬಗ್ಗೆ ಪರಿಶೀಲಿಸಿದ್ದಾರೆ. ದೆಹಲಿಯಲ್ಲಿಂದು ಕರೆಯಲಾಗಿದ್ದ ಸಭೆಯಲ್ಲಿ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್, ಎಎಫ್‌ಎಂಎಸ್ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅನುಪ್ ಬ್ಯಾನರ್ಜಿ, ಎಎಫ್‌ಎಂಎಸ್ ಮಹಾನಿರ್ದೇಶಕ (ಸಂಸ್ಥೆ ಮತ್ತು ಸಿಬ್ಬಂದಿ) ಲೆಫ್ಟಿನೆಂಟ್ ಜನರಲ್ ಎ.ಕೆ.ಹುಡಾ, ನೌಕಾ ಪಡೆ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕ (ನೌಕಾಪಡೆಯ) ವೈಸ್ ಅಡ್ಮಿರಲ್ ಎಂ.ವಿ.ಸಿಂಗ್ ಮತ್ತು ವಾಯುಪಡೆ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎಂ ಎಸ್ ಬುಟೊಲ ಭಾಗವಹಿಸಿದ್ದರು. ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಸಲಹೆಗಳನ್ನು ನೀಡುವುದು, ಸಂಪರ್ಕತಡೆ ಸೌಲಭ್ಯಗಳಿಗೆ ಸಂಬಂಧಿಸಿದಂತೆ ನಾಗರಿಕ ಅಧಿಕಾರಿಗಳಿಗೆ ನೆರವು ನೀಡುವುದು, ಸದ್ಯದ ಪರಿಸ್ಥಿತಿಯಲ್ಲಿ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಒದಗಿಸುವುದು ಮುಂತಾದ ವಿವಿಧ ಕ್ರಮಗಳ ಬಗ್ಗೆ ಉನ್ನತ ಆಧಿಕಾರಿಗಳು ಸಚಿವರಿಗೆ ವಿವರಿಸಿದರು ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮನವಿ ಮೇರೆಗೆ ನಾಗರಿಕರಿಗಾಗಿ ಸಂಪರ್ಕತಡೆ ಸೌಲಭ್ಯ ಕಲ್ಪಿಸಲಾಗಿದೆ. ಸದ್ಯ, ಇಟಲಿ, ಇರಾನ್, ಚೀನಾ, ಮಲೇಷ್ಯಾ ಮತ್ತು ಜಪಾನ್ ದೇಶಗಳಿಂದ ಸ್ಥಳಾಂತರಗೊಂಡ ನಾಗರಿಕರಿಗೆ ಆರು ಸಂಪರ್ಕತಡೆ ಕೇಂದ್ರಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಇತರ ಸಶಸ್ತ್ರ ಪಡೆಗಳ ವೈದ್ಯಕೀಯ ಕೇಂದ್ರಗಳಲ್ಲೂ ಸಂಪರ್ಕತಡೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಫೆಬ್ರವರಿ 1 ರಿಂದ ಈ ಕೇಂದ್ರಗಳಲ್ಲಿ 1,738 ಜನರನ್ನು ಇರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.