ನವದೆಹಲಿ, ಏ 2 (ಯುಎನ್ಐ) ಭಾರತದಲ್ಲಿ ಕೊರೊನಾ ವೈರಾಣು ಸೋಂಕಿನ 298 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1965 ಕ್ಕೆ ತಲುಪಿದೆ ಎಂದು ಸರ್ಕಾರ ತಿಳಿಸಿದೆ.ಕೊರೊನಾ ಸೋಂಕಿಗೆ ಮತ್ತೆ 12 ಜನರು ಬಲಿಯಾಗಿದ್ದು ಒಟ್ಟು ಈ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ. ಗುರುವಾರ ಬೆಳಗಿನ ವೇಳೆಗೆ 1764 ಜನರು ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಒಂದೇ ದಿನದಲ್ಲಿ ಮಂಗಳವಾರದಿಂದ ಬುಧವಾರದ ನಡುವೆ 386 ಹೊಸ ಪ್ರಕರಣಗಳು ವರದಿಯಾಗಿದ್ದು ಮರ್ಕಾಜ್ ಗೆ ಪ್ರಯಾಣವೇ ಮುಖ್ಯ ಕಾರಣ ಎಂದು ಸಚಿವಾಲಯ ಹೇಳಿದೆ.
ರಾಷ್ಟ್ರ ರಾಜಧಾನಿಯ ಮರ್ಕಾಜ್ ನಿಜಾಮುದ್ದೀನ್ ಕೊರೊನಾ ವೈರಾಣು ಸೋಂಕು ಹರಡಿದ ತಾಣವಾಗಿದೆ. ಕಳೆದ ತಿಂಗಳು ಇಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾದವರಲ್ಲಿ ಈ ಸೋಂಕು ಪತ್ತೆಯಾಗಿದೆ.ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 335 ಪ್ರಕರಣಗಳು ವರದಿಯಾಗಿದ್ದು 13 ಜನರು ಮೃತಪಟ್ಟಿದ್ದಾರೆ. ಕೇರಳದಲ್ಲಿ 265 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲೂ 152 ಜನರು ಸೋಂಕಿನಿಂದ ಬಳಲುತ್ತಿದ್ದು ಇಬ್ಬರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ 113 ಜನರಲ್ಲಿ ಸೋಂಕು ದೃಢಪಟ್ಟಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ 234 ಪ್ರಕರಣಗಳು ವರದಿಯಾಗಿದ್ದು ಓರ್ವ ವ್ಯಕ್ತಿ ಈ ಸೋಂಕಿಗೆ ಬಲಿಯಾಗಿರುವುದಾಗಿ ವರದಿಯಾಗಿದೆ. ಕರ್ನಾಟಕದಲ್ಲಿ 110 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಮೂವರು ಮೃತಪಟ್ಟಿದ್ದಾರೆ.