ಬೆಂಗಳೂರು, ಏ.7,ಕೊರೋನಾ ಸೋಂಕು ಲಾಕ್ ಡೌನ್ ಸಂದರ್ಭವನ್ನು ಕೇರಳ ಸರಕಾರದ ಮಾದರಿಯಲ್ಲಿ ಎಲ್ಲಾ ಅಗತ್ಯ 16 ಸಾಮಾನುಗಳನ್ನು ಬಿಪಿಎಲ್ ಹಾಗೂ ಎಪಿಎಲ್, ಮತ್ತಿತತ ಪಡಿತರ ಅವಶ್ಯಕತೆ ಇರುವವರಿಗೆ ಅಗತ್ಯನುಸಾರ ಒದಗಿಸಬೇಕು ಎಂದು ಸಿಪಿಐಎಂ ಕಾರ್ಯದರ್ಶಿ ಯು.ಬಸವರಾಜ ಒತ್ತಾಯಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರಕಾರ ಪಡಿತರ ವಿತರಣೆಗೆ ಕ್ರಮ ವಹಿಸಿದೆ. ಆದರೆ ಅದರಲ್ಲಿ ಕೆಲವು ದೋಷಗಳು ಮತ್ತು ಕೊರತೆಗಳಿವೆ. ಕೂಡಲೇ ಈ ಕೊರತೆಯನ್ನು ನಿವಾರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.ಇದೀಗ ರಾಜ್ಯ ಸರಕಾರ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ದಾರರಿಗೆ ಪಡಿತರ ವಿತರಣೆ ಮಾಡುತ್ತಿದೆ. ಅದು ಕೇವಲ ಬಿಪಿಎಲ್ ಕಾರ್ಡ ದಾರರಿಗೆ ತಲಾ ವ್ಯಕ್ತಿಗೆ 5 ಕೆ.ಜಿ. ಅಕ್ಕಿಯನ್ನು ವಿತರಿಸುತ್ತಿದೆ. ಇದರೊಂದಿಗೆ 2 ಕೆ.ಜಿ. ಗೋದಿ ವಿತರಿಸುತ್ತಿದೆ. ಪ್ರತಿ ದಿನ ತಲಾ ವ್ಯಕ್ತಿಗೆ ಸರಾಸರಿ 400 ಗ್ರಾಂ ಅಕ್ಕಿ ಎಂದರೂ ತಿಂಗಳಿಗೆ ಕನಿಷ್ಠ ತಲಾ ವ್ಯಕ್ತಿಗೆ 12 ಕೆ.ಜಿ. ಅಕ್ಕಿ ವಿತರಿಸಬೇಕು. ಈ ಹಿಂದೆ ರಾಜ್ಯದಲ್ಲಿ ಬಜೆಟ್ ಪೂರ್ವದಂತೆ ತಲಾ ವ್ಯಕ್ತಿಗೆ 7 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುತ್ತಿತ್ತು. ಅದೇ ರೀತಿ, ಕೇಂದ್ರ ಸರಕಾರ ಘೋಷಿಸಿದ ಒಂದು ಕೆ.ಜಿ. ಬೇಳೆ ಮತ್ತು ಕೆ.ಜಿ. ಅಡುಗೆ ಎಣ್ಣೆಯನ್ನು ಈಗ ವಿತರಿಸುತ್ತಿಲ್ಲ. ಕೇಂದ್ರ ಸರಕಾರದ ಈ ಘೋಷಣೆಯು ಸಮರ್ಪಕವಾಗಿಲ್ಲ. ಕನಿಷ್ಠ ಐದು ಲೀಟರ್ ಅಡುಗೆ ಎಣ್ಣೆ ಮತ್ತು ಐದು ಕೆ.ಜಿ. ಬೆಳೆಯಾದರೂ ಘೋಷಿಸಬೇಕಿತ್ತು. ರಾಜ್ಯ ಸರಕಾರ ಕೇರಳದ ಮಾದರಿಯಲ್ಲಿ ಎಲ್ಲಾ ಕನಿಷ್ಠ 16 ಅಗತ್ಯ ಆಹಾರ ಸಾಮಗ್ರಿಗಳು ಮತ್ತು ಆರೋಗ್ಯ ಸುರಕ್ಷತಾ ಪರಿಕರಗಳು ಮಹಿಳೆಯರಿಗೆ ಋತುಮಾನದ ಪ್ಯಾಡ್ ಗಳನ್ನು ಒದಗಿಸಲು ಮತ್ತು ಈ ಲಾಕ್ ಡೌನ್ ಅವಧಿಗೆ ಈ ಎಲ್ಲಾ ವಯಸ್ಕರಿಗೆ ಪ್ರತಿ ದಿನಕ್ಕೆ ತಲಾ 500ರೂ. ಗಳಂತೆ ನಿರುದ್ಯೋಗ ಭತ್ಯೆಯನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಗ್ರಾಮ ಹಾಗೂ ನಗರಗಳ ಸ್ಲಂಗಳಲ್ಲಿರುವ ಅನಾಥರು, ನಿರ್ಗತಿಕರು, ಮಕ್ಕಳಿರದ ವಯೋವೃದ್ಧರು ಹಾಗೂ ಅನಾರೋಗ್ಯ ಪೀಡಿತ ಕುಟುಂಬಗಳನ್ನು ಗುರುತಿಸಿ ಅವರಿಗೆ ಮನೆ ಮನೆಗೆ ಆಹಾರ ಸರಬರಾಜು ಮಾಡುವ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಪ್ರಾಥಮಿಕ ಶಾಲೆಗಳ ಅಕ್ಷರ ದಾಸೋಹ ಸಿಬ್ಬಂದಿಯನ್ನು ಬಳಸಬೇಕು. ಹಾಸ್ಟೆಲ್ ಇರುವೆಡೆ ಅವುಗಳನ್ನು ಮತ್ತು ಅವುಗಳ ಸಿಬ್ಬಂದಿಯನ್ನು ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಆಶಾ ಕಾರ್ಯಕರ್ತರು, ಅಂಗನವಾಡಿ ನೌಕರರು, ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಆರೋಗ್ಯ ಇಲಾಖೆಯ ಸಿಬ್ಬಂದಿ, ಶುಚಿತ್ವದ ಕಾರ್ಯದಲ್ಲಿ ತೊಡಗಿರುವ ಮುನ್ಸಿಪಲ್ ಕಾರ್ಮಿಕರು ಅದೇ ರೀತಿ, ಹಾಸ್ಟೆಲ್ ಮತ್ತು ಅಕ್ಷರ ದಾಸೋಹ ಕೆಲಸಗಾರರು ಎಲ್ಲರಿಗೂ ಆರೋಗ್ಯ ಸುರಕ್ಷ ಪರಿಕರಗಳು ಮತ್ತು ವಿಮಾ ಸೌಲಭ್ಯವನ್ನು ಕೂಡಲೇ ಒದಗಿಸಬೇಕು. ಈ ಎಲ್ಲದಕ್ಕೂ ಅಗತ್ಯ ನೆರವನ್ನು ಕೇಂದ್ರ ಸರಕಾರದಿಂದ ಪಡೆಯಬೇಕು ಎಂದು ಯು.ಬಸವರಾಜ ತಿಳಿಸಿದ್ದಾರೆ.