ಮೋಡ ಬಿತ್ತನೆ ಮೂಲಕ ರೈತರನ್ನು ಉಳಿಸಿ: ಡಾ. ಬಸವರಾಜ ಕ್ಯಾವಟರ್ ಆಗ್ರಹ
Save farmers through cloud seeding: Dr. Basavaraja Kyavatar urges
ಕೊಪ್ಪಳ, ಜು.11: ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣವೇ ಮೋಡ ಬಿತ್ತನೆ (ಕ್ಲೌಡ್ ಸೀಡಿಂಗ್) ಕೈಗೊಂಡು ರೈತರ ಜೀವ ಮತ್ತು ಜೀವನೋಪಾಯವನ್ನು ರಕ್ಷಿಸಬೇಕು ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ತುಂಗಭದ್ರಾ ಜಲಾಶಯದಲ್ಲೂ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಆಡಳಿತ ವೈಫಲ್ಯದಿಂದ ಅಚ್ಚುಕಟ್ಟು ಪ್ರದೇಶಗಳ ರೈತರೂ ಮುಂಗಾರು ಬೆಳೆ ಬೆಳೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿರುವ ಅವರು, ಜಿಲ್ಲೆಯ ಹಲವು ಭಾಗಗಳಲ್ಲಿ ರೈತರು ಬಿತ್ತನೆ ಮಾಡದೇ ಉಳಿದಿದ್ದು, ಬಿತ್ತನೆ ಮಾಡಿದ ಬೆಳೆಗಳು ಮಳೆಯಿಲ್ಲದೆ ಒಣಗುತ್ತಿವೆ ಎಂದು ಹೇಳಿದ್ದಾರೆ.
ಸರ್ಕಾರ ಗ್ರಾಮವಾರು ಹಾಗೂ ಬೆಳೆವಾರು ಸಮೀಕ್ಷೆ ನಡೆಸಿ, ಬೆಳೆನಷ್ಟವನ್ನು ಅಂದಾಜಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೋಡ ಬಿತ್ತನೆಗೆ ಕೈಗೊಂಡಿರುವ ಕ್ರಮವನ್ನು ಕೊಪ್ಪಳ ಜಿಲ್ಲೆಯಲ್ಲೂ ಅನುಸರಿಸಬೇಕು ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳು ತಕ್ಷಣ ಸ್ಥಳೀಯ ಕೈಗಾರಿಕೆಗಳೊಂದಿಗೆ ಸಭೆ ನಡೆಸಿ, ಸಿಎಸ್ಆರ್ ನಿಧಿ ಹಾಗೂ ಇತರ ಮೂಲಗಳಿಂದ ಹಣ ಸಂಗ್ರಹಿಸಿ ಮೋಡ ಬಿತ್ತನೆ ಕಾರ್ಯ ಕೈಗೊಳ್ಳಬೇಕು. ಜೊತೆಗೆ, ಜಿಲ್ಲೆಯಲ್ಲಿ ಮಳೆ ಕೊರತೆ ಹಾಗೂ ಬೆಳೆನಷ್ಟದ ಸಮಗ್ರ ಸಮೀಕ್ಷೆ ನಡೆಸಿ, ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.
ರೈತರಿಗೆ ಪರಿಹಾರ, ಬೆಳೆ ಸಾಲ ಮರುಪಾವತಿಗೆ ಕಾಲಾವಕಾಶ, ಬಡ್ಡಿ ಮನ್ನಾ ಹಾಗೂ ಹೊಸ ಬೆಳೆ ಸಾಲದ ಸೌಲಭ್ಯ ಕಲ್ಪಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.
ಜಿಲ್ಲೆಯ ವಿವಿಧ ಗ್ರಾಮಗಳಿಗೆ ಬಿಜೆಪಿ ತಂಡ ಭೇಟಿ ನೀಡಿ, ಬಿತ್ತನೆಯಾಗದ ಜಮೀನುಗಳು ಹಾಗೂ ಒಣಗಿರುವ ಬೆಳೆಗಳ ಕುರಿತು ಸಮೀಕ್ಷೆ ನಡೆಸಿ ವರದಿಯನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಡಾ. ಬಸವರಾಜ ಕ್ಯಾವಟರ್ ತಿಳಿಸಿದ್ದಾರೆ.
ರೈತರ ಬಗ್ಗೆ ಕಾಳಜಿ ಇಲ್ಲವೇ?:
ಅಧಿಕಾರದ ಹಪಾಹಪಿಯಲ್ಲಿ ಇರುವ ಜನಪ್ರತಿನಿಧಿಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ ಎಂದು ಡಾ. ಬಸವರಾಜ ಕ್ಯಾವಟರ್ ಟೀಕಿಸಿದ್ದಾರೆ. ಸಂಸದ ರಾಜಶೇಖರ ಹಿಟ್ನಾಳ್ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಖಾಸಗಿ ಕಂಪನಿಗಳಿಂದ ಹಣ ಸಂಗ್ರಹಿಸಿ ಕ್ರೀಡಾಕೂಟ ಆಯೋಜಿಸುವ ಉತ್ಸಾಹ ಇರುವವರು, ರೈತರ ಸಂಕಷ್ಟ ನಿವಾರಣೆಗೆ ಸಹ ಅದೇ ರೀತಿಯ ಆಸಕ್ತಿ ತೋರಬೇಕು ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ರಾಜು ಬಾಕಳೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಹೆಸರೂರು ಉಪಸ್ಥಿತರಿದ್ದರು.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 