ನವದೆಹಲಿ, ಏಪ್ರಿಲ್ ೨, ಕೊರೊನಾ ವೈರಸ್ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು, ರಾಜ್ಯ ಸರ್ಕಾರಗಳು ಹಾಗೂ ಜಿಲ್ಲಾಡಳಿತಕ್ಕೆ ನೆರವಾಗುವಂತೆ ಮಾಜಿ ಯೋಧರ ಸೇವೆ ಸಜ್ಜುಗೊಳಿಸಲು ರಕ್ಷಣಾ ಸಚಿವಾಲಯ ಮುಂದಾಗಿದೆ. ಸೋಂಕಿತರ ಪತ್ತೆ, ಸಮುದಾಯ ಕಣ್ಗಾವಲು, ಕ್ವಾರಂಟೈನ್ ಸೌಲಭ್ಯಗಳ ನಿರ್ವಹಣೆ ಮತ್ತಿತರ ಚಟುವಟಿಕೆಗಳಿಗೆ ಮಾಜಿ ಸೇನಾ ಯೋಧರ ಸೇವೆ ಬಳಸಿಕೊಳ್ಳಲು ರಾಜ್ಯ ಸೈನಿಕ್ ಮಂಡಳಿಗಳು ಹಾಗೂ ಜಿಲ್ಲಾ ಸೈನಿಕ್ ಮಂಡಳಿಗಳು ಸಕ್ರೀಯವಾಗಿ ತೊಡಗಿಸಿಕೊಂಡಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಮಾಜಿ ಸೈನಿಕರು ಕೊರೊನಾ ವೈರಸ್ ಸವಾಲನ್ನು ಎದುರಿಸಲು ಸ್ಥಳೀಯ ಆಡಳಿತಕ್ಕೆ ನೆರವಾಗುವ ಮೂಲಕ ದೇಶ ಸೇವೆಗೆ ಮುಂದಾಗಲಿದ್ದಾರೆ. ಶಿಸ್ತು, ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸಲು ಸೂಕ್ತ ತರಬೇತಿ ಹೊಂದಿರುವ ಮಾಜಿ ಯೋಧರು ದೇಶದ ಎಲ್ಲ ಜಿಲ್ಲೆ ಹಾಗೂ ಗ್ರಾಮಗಳಲ್ಲಿ ನೆಲೆಸಿದ್ದು, ಈ ಸಂಕಷ್ಟದ ಸಮಯದಲ್ಲಿ ಅವರು ಆಡಳಿತಗಳಿಗೆ ನೆರವಾಗಲಿದ್ದಾರೆ ಎಂದು ಸಚಿವಾಲಯ ಹೇಳಿದೆಪಂಜಾಬ್ ನಲ್ಲಿ “ಆಡಳಿತ ಸಂರಕ್ಷಕರು” ಎಂಬ ಸಂಘಟನೆ ರಚಿಸಿಕೊಂಡಿದ್ದು, ಈ ಸಂಘಟನೆಯಲ್ಲಿ ೪,೨೦೦ ಮಾಜಿ ಯೋಧರಿದ್ದು, ಗಾಮಗಳ ದತ್ತಾಂಶ ಸಂಗ್ರಹದಲ್ಲಿ ಸ್ಥಳೀಯ ಆಡಳಿತಕ್ಕೆ ನೆರವಾಗುತ್ತಿದ್ದಾರೆ. ಚತ್ತೀಸ್ ಗಡ ರಾಜ್ಯ ಸರ್ಕಾರ ಕೆಲ ಮಾಜಿ ಯೋಧರನ್ನು ಪೊಲೀಸರಿಗೆ ನೆರವಾಗಲು ನೇಮಿಸಿಕೊಂಡಿದೆ. ಉತ್ತರ ಪ್ರದೇಶದ ಎಲ್ಲ ಜಿಲ್ಲಾ ಸೈನಿಕ್ ಕಲ್ಯಾಣ್ ಮಂಡಳಿ ಅಧಿಕಾರಿಗಳು ಜಿಲ್ಲಾ ನಿಯಂತ್ರಣ ಕೇಂದ್ರಗಳೊಂದಿಗೆ ಸಂಪರ್ಕದಲ್ಲಿದ್ದು, ನಿವೃತ್ತ ಸೇನಾ ವೈದ್ಯಕೀಯ ಸಿಬ್ಬಂದಿಯನ್ನು ಗುರುತಿಸಿ, ಅವರನ್ನು ಸನ್ನದ್ದ ಸ್ಥಿತಿಯಲ್ಲಿಸಲಾಗಿದೆ ಉತ್ತರ್ ಖಂಡದಲ್ಲಿ ಅಗತ್ಯ ಬಿದ್ದರೆ ಸೈನಿಕ್ ವಿಶ್ರಾಂತಿ ಗೃಹಗಳನ್ನು ಐಸೋಲೇಷನ್ ವಾರ್ಡ್ ಗಳನ್ನು ಪರಿವರ್ತಿಸಲು ಪ್ರಕ್ರಿಯೆಗಳು ನಡೆಯುತ್ತಿವೆ.