ಕೂಡ್ಲಿಗಿ: ತೊಗಲುಗೊಂಬೆಯಾಟಕ್ಕೆ ಪ್ರೋತ್ಸಾಹ ಅಗತ್ಯ

ಲೋಕದರ್ಶನ ವರದಿ 

ಕೂಡ್ಲಿಗಿ 16: ಹಳ್ಳಿಗಾಡಿನಲ್ಲಿ ಅನಕ್ಷರಸ್ಥ ರೈತರು ಪ್ರತಿವರ್ಷ ತಮ್ಮ ಊರಿನ ಹಬ್ಬ ಉತ್ಸವಗಳಲ್ಲಿ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ನಾಟಕಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಅಪೂರ್ವ ಕಲೆಯನ್ನು ಪ್ರದರ್ಶಿಸುತ್ತಾರೆ. ಆದರೆ ಗ್ರಾಮೀಣ ಕಲೆಯಾಗಿರುವ ತೊಗಲುಗೊಂಬೆಯಾಟ ಕಲೆಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ರಾಜ್ಯ ನಾಟಕ ಅಕಾಡೆಮಿ ಸದಸ್ಯ ಹಗರಿಬೊಮ್ಮನಹಳ್ಳಿಯ ರಾಜರಾವ್ ತಿಳಿಸಿದರು. 

ಅವರು ತಾಲ್ಲೂಕಿನ ಬಡೇಲಡಕು ಗ್ರಾಮದಲ್ಲಿ ಬಳ್ಳಾರಿಯ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ ಮತ್ತು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಗ್ರಾಮೀಣ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ನಮ್ಮ ನಾಡಿನ ಸಾಂಪ್ರದಾಯಿಕ ಕಲೆ, ಆಧುನಿಕ ಮಾಧ್ಯಮಗಳಿಂದ, ಸಾಮಾಜಿಕ ಜಾಲತಾಣಗಳಿಂದ ನಲುಗುತ್ತಿದೆ. ಇಂತಹ ಕಲೆಯನ್ನು ಉಳಿಸಿಕೊಂಡು ಹೋಗುತ್ತಿರುವ ಸಂಘ ಸಂಸ್ಥೆಗಳಿಗೆ ಸಕರ್ಾರದಿಂದ ಪ್ರೋತ್ಸಾಹ ನೀಡಬೇಕಾಗಿದೆ. ಕೂಡ್ಲಿಗಿ ತಾಲ್ಲೂಕಿನ ಬಡೇಲಡಕು ಗ್ರಾಮದಲ್ಲಿ ಅನೇಕ ರಂಗಕಲಾವಿದರು, ಜನಪದ ಕಲಾವಿದರು ನೆಲೆಸಿದ್ದಾರೆ. ಇಲ್ಲಿನ ಪ್ರೌಢಶಾಲಾ ಮಕ್ಕಳು ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪಧರ್ೆಯಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಷಯ ಎಂದರು. 

ಬಡೇಲಡಕು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಶ್ರೀನಿವಾಸ ಮಾತನಾಡಿ ಗ್ರಾಮದಲ್ಲಿ ತೊಗಲುಗೊಂಬೆ ಕಲಾವಿದರು, ಕಾಡುಸಿದ್ದರು ತಮ್ಮ ಕಲೆಯನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ಆದರೆ ಇಂತಹ ಜನಪದ ಕಲೆಗಳು ನಶಿಸುವ ಹಂತಕ್ಕೆ ತಲುಪಿರುವುದು ವಿಪರ್ಯಾಸ ಎಂದು ನುಡಿದರು. 

ಬಡೇಲಡಕು ಗ್ರಾಮದ ಯುವ ಮುಖಂಡ ಸತೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯ ಹಂಪಜ್ಜರ ಕೊಟ್ರೇಶ್, ರಂಗ ನಿರ್ದೇಶಕ ಶಿವುನಾಯಕ ದೊರೆ, ಗ್ರಾ.ಪಂ. ಸದಸ್ಯರಾದ ಕಾಶಿವಿಶ್ವನಾಥ, ಎಚ್.ನಿಂಗಪ್ಪ, ತೊಗಲುಬೊಂಬೆ ಕಲಾವಿದ ತಿಪ್ಪೇಸ್ವಾಮಿ, ಬಜನಾ ಕಲಾವಿದ ಅಂಜಿನಪ್ಪ, ಬಳ್ಳಾರಿ ಯರ್ರಿಸ್ವಾಮಿ, ರಾಘವೇಂದ್ರ ಅಂಗೂರು ಪರಶುರಾಮ, ಸ್ಥಳೀಯ ಕೇಸರಿ ಯುವ ಪಡೆಯ ಕೆ.ಕರಿಯಪ್ಪ, ಎಚ್.ಕೆ. ರಾಘವೇಂದ್ರ ಮುಂತಾದವರು ಹಾಜರಿದ್ದರು. 

 ಬಳ್ಳಾರಿಯ ತೊಗಲುಗೊಂಬೆ ಕಲಾ ತಂಡದ ಹೊನ್ನೂರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಪ್ಪಾಲ್ ಕೊಟ್ರೇಶ್ ನಿರೂಪಿಸಿದರು. ಕಾಟ್ರಳ್ಳಿ ಕೊಟ್ರೇಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರಿಂದ ತೊಗಲುಗೊಂಬೆ ಪ್ರದರ್ಶನ, ನಾಟಕ, ಸಮೂಹ ನೃತ್ಯ ನಡೆದವು.