ಬೆಂಗಳೂರು: ತೈವಾನ್ ಮೂಲದ ಮೆ: ವಿಸ್ಟ್ರನ್ ಟೆಕ್ನಾಲಜೀಸ್ ಸಂಸ್ಥೆಯು 3000 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಕರ್ನಾಟಕದಲ್ಲಿ ಆ್ಯಪಲ್ ಉತ್ಪನ್ನಗಳನ್ನು ತಯಾರಿಸಲು ಯೋಜಿಸಿದೆ. ದೇಶದಲ್ಲಿಯೇ ಅತಿದೊಡ್ಡ ಆ್ಯಪಲ್ ಉತ್ಪನ್ನ ತಯಾರಿಕಾ ಘಟಕವನ್ನು ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ತೆರೆಯಲು ನಿರ್ಧರಿಸಲಾಗಿದೆ.
ಮಂಗಳವಾರ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಸಂಸ್ಥೆಯ ಅಧಿಕಾರಿಗಳು ಕೋಲಾರ ಜಿಲ್ಲೆ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಮಂಜೂರಾತಿಗಾಗಿ ಮನವಿ ಸಲ್ಲಿಸಿದ್ದಾರೆ.
ಸಂಸ್ಥೆಯ ಈ ನಿರ್ಧಾರವನ್ನು ಸ್ವಾಗತಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಯೋಜನೆಗೆ ಅಗತ್ಯವಾಗಿರುವ ಸ್ಥಳದ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದಾರೆ. ಇದಾಗಲೇ ಬೆಂಗಳೂರಿನ ಪೀಣ್ಯದಲ್ಲಿ ಐಫೋನ್ ಎಸ್ ಇ, ಐಫೋನ್ 6S ತಯಾರಿಕಾ ಘಟಕ ಹೊಂದಿರುವ ಸಂಸ್ಥೆ ಇದೀಗ ಘಟಕದ ವಿಸ್ತರಣೆಗಾಗಿ ಎದುರು ನೋಡುತ್ತಿದೆ. ನರಸಪುರದಲ್ಲಿ ಪ್ರಾರಂಭವಾಗಲಿರುವ ಘಟಕದಲ್ಲಿ ಎಲ್ಲಾ ಬಗೆಯ ಆ್ಯಪಲ್ ಉತ್ಪನ್ನಗಳ ತಯಾರಿಕೆ ಪ್ರಾರಂಭಿಸಲಾಗುವುದು ಎಂದು ಸಂಸ್ಥೆ ಹೇಳಿದೆ.
ಸುಮಾರು 43 ಎಕರೆ ಪ್ರದೇಶದಲ್ಲಿ ಐಫೋನ್ ತಯಾರಿಕಾ ಘಟಕವನ್ನು ಸ್ಥಾಪಿಸಲಾಗುತ್ತದೆ, ಇದು ದೇಶದಲ್ಲಿಯೇ ಅತಿ ದೊಡ್ಡ ಯೋಜನೆಯಾಗಿದೆ. ಇದರಿಂದಾಗಿ 10,500 ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ.
ಮೊಬೈಲ್ ಫೋನ್ ಗಳ ದುರಸ್ತಿ ಮತ್ತು ನವೀಕರಣ ತಂತ್ರಜ್ಞಾನಕ್ಕೆ ಹೆಚ್ಚಿನ ಬೇಡಿಕೆ ಇದ್ದು ಈ ಸೌಲಭ್ಯ ಸ್ಥಾಪನೆಗಾಗಿ ಮುಖ್ಯಮಂತ್ರಿಗಳು ಸಂಸ್ಥೆಗೆ ಸಲಹೆ ನೀಡಿದ್ದಾರೆ.
ಕನ್ನಡಿಗರಿಗೆ ಉದ್ಯೋಗ ಒದಗಿಸುವುದಾಗಿ ಸಂಸ್ಥೆ ಭರವಸೆ ನಿಡಿದೆ.ಏಳು ದಿನಗಳಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.