ನವದೆಹಲಿ, ಮಾ 27,ಸಾಂಕ್ರಮಿಕ ರೋಗ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ದೇಶದ ನಾಗರಿಕರಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೃದಯ ಪೂರ್ವಕ ಮನವಿ ಮಾಡಿದ್ದಾರೆ.ಕಳೆದ ಕೆಲವು ದಿನಗಳಿಂದ, ಕೆಲವು ಜನರು ಇನ್ನೂ ಬೀದಿಗಿಳಿಯುವುದನ್ನು ನೋಡಿರುವ ಕೊಹ್ಲಿ, ಇಂತವರು ದೇಶದ ಬಗ್ಗೆ ಪ್ರಾಮಾಣಿಕತೆ ಹೊಂದಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವೀಟರ್ ನಲ್ಲಿ ಶುಕ್ರವಾರ ಸಣ್ಣದೊಂದು ವಿಡಿಯೊ ಹಂಚಿಕೊಂಡಿರುವ ಕೊಹ್ಲಿ, '' ದಯವಿಟ್ಟು ಪರಿಸ್ಥಿತಿಯ ವಾಸ್ತವತೆ ಮತ್ತು ಗಂಭೀರತೆಗೆ ಎಚೆತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳಿ. ರಾಷ್ಟ್ರಕ್ಕೆ ನಮ್ಮ ಬೆಂಬಲ ಮತ್ತು ಪ್ರಾಮಾಣಿಕತೆ ಬೇಕಿದೆ " " ಇಂದು, ನಾನು ನಿಮ್ಮೊಂದಿಗೆ ದೇಶದ ಪ್ರಜೆಯಾಗಿ ಮಾತನಾಡುತ್ತಿದ್ದೇನೆ. ಕಳೆದ ಕೆಲವು ದಿನಗಳಿಂದ ನಾನು ಹಲವು ಘಟನೆಗಳನ್ನು ನೋಡಿದ್ದೇನೆ, ಜನರು ಲಾಕ್‌ಡೌನ್ ಅನುಸರಿಸದಿರುವುದನ್ನು ಕಂಡಿದ್ದೇನೆ, ಕೆಲವರು ಕೋವಿಡ್-19 ವಿರುದ್ಧದ ಹೋರಾಟವನ್ನು ಬಹಳ ಲಘುವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ. ದಯವಿಟ್ಟು ಸಾಮಾಜಿಕ ಅಂತರವನ್ನು ಪಾಲಿಸಲು ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ, ಸರ್ಕಾರ ನಿಮ್ಮಿಂದ ಏನು ಆಪೇಕ್ಷಿಸುತ್ತದೆಯೋ ಅದನ್ನು ದಯವಿಟ್ಟು ಮಾಡಿ, ಎಂದು ಕೊಹ್ಲಿ ಹೇಳಿದ್ದಾರೆ.