ಅರಿವೇ ಪ್ರಮಾಣು ಒಂದು ರೂಪಕ ಕಥನ: ಯಾಕೊಳ್ಳಿ

ಧಾರವಾಡ 28: ವಚನ ಸಾಹಿತ್ಯದ ತೀರ ಅಲಕ್ಷಿತ ಮಹಿಳೆ ಶರಣೆ ಅಕ್ಕನಾಗಮ್ಮನ ಬದುಕು ಮತ್ತು ಚಿಂತನೆಗಳನ್ನು ಒಂದು ವ್ಯಾಪಕ ಭಿತ್ತಿಯಲ್ಲಿ ಕಟ್ಟಿಕೊಡುವ ಹಾಗೆಯೇ ಅದರ ಒಟ್ಟೊಟ್ಟಿಗೇ ಬಸವಣ್ಣನೂ ಸೇರಿದಂತೆ ಸಮಕಾಲೀನ ಸಕಲ ಶರಣರ ಬದುಕನ್ನು ಒಳಗೊಂಡ ಮಹಾಂತಪ್ಪ ನಂದೂರ ಅವರ ``ಅರಿವೇ ಪ್ರಮಾಣು'' ಕಾವ್ಯಕೃತಿಯು ಒಂದು ರೂಪಕ ಕಥನವಾಗಿ ಹೊರಹೊಮ್ಮಿದೆ. ಎಂದು ಸವದತ್ತಿಯ ಸರಕಾರಿ ಪದವೀ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ವಾಯ್.ಎಮ್. ಯಾಕೊಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತ್ಯಿಕ ಸಂಘಟನೆ ಅನ್ವೇಷಣಕೂಟದ ಆಶ್ರಯದಲ್ಲಿ ದಿ. 27ರಂದು ಸಾಧನಕೇರಿಯ `ಚೈತ್ರದ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ``ಪುಸ್ತಕಾವಲೋಕನ'' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. 

ಕ್ಷೀಪ್ರಕ್ರಾಂತಿಯ ಮಧ್ಯೆ ಶರಣರು ಉಳವಿಯತ್ತ ಹೊರಟು ನಿಂತಾಗ ಅತ್ಯಮೂಲ್ಯ ವಚನಗಳ ಕಟ್ಟನ್ನು ತಲೆಯ ಮೇಲೆ ಹೊತ್ತು ಅವುಗಳನ್ನು ಸಂರಕ್ಷಿಸಿದ ಅಕ್ಕನಾಗಮ್ಮನ ಸಂಕಲ್ಪ ಶಕ್ತಿ ಮತ್ತು ಅರಿವಿನ ಪ್ರಖರತೆ ಅಚ್ಚರಿ ಮೂಡಿಸುವಂತಹದು. ಎದೆಗುಂದದ, ಅವಿರತ ಶ್ರಮದ ಅಕ್ಕನಾಗಮ್ಮನೇನಾದರೂ ಆ ಕಾಲಕ್ಕೆ ಇರದಿದ್ದರೆ ಈ ಹೊತ್ತು ನಾವು ಓದುತ್ತಿರುವ ಶರಣ ಸಾಹಿತ್ಯ ನಮಗೆ ದಕ್ಕುತ್ತಲೇ ಇರಲಿಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ ಬಳಸಿದ ಭಾಷಾವೈವಿಧ್ಯತೆಯ ಸ್ವರೂಪ ಸೌಂದರ್ಯ ಪಡೆದ ಪದ್ಯಗಂಧೀ ಗದ್ಯರೂಪದ ನಂದೂರರ ಈ ಕೃತಿ ಮರೆತು ಹೋಗುವ ಒಂದು ಯುಗವನ್ನು ಈಗ ಮತ್ತೆ ನೆನಪಿಸುವಂಥ ಒಂದು ಅಪರೂಪದ ಗ್ರಂಥವಾಗಿದೆ ಎಂದು ಪ್ರೊ. ವಾಯ್.ಎಮ್. ಯಾಕೊಳ್ಳಿ ಅದರ ಅಂತಃಸತ್ವವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ಈ ಕಾವ್ಯದ ಲೇಖಕ ಮಹಾಂತಪ್ಪ ನಂದೂರ ಪ್ರಸ್ತುತ ಗ್ರಂಥದ ರಚನೆಯ ಹಿಂದಿನ ಪ್ರೇರಣೆ ಮತ್ತು ಹುಡುಕಾಟಗಳನ್ನು ಸ್ಮರಸಿಕೊಂಡರು. 

ಅಧ್ಯಕ್ಷತೆ ವಹಿಸಿದ್ದ ಹಿರಿಯ ಲೇಖಕಿ ನಿವೃತ್ತ ಪ್ರಾಧ್ಯಾಪಕಿ ಡಾ. ಶಾಂತಾ ಇಮ್ರಾಪುರ ಅವರು ಮಾತನಾಡಿ ಒಬ್ಬ ಕವಿಯಿಂದ ಒಂದು ಸಾರ್ಥಕ ಕೃತಿ ಬರಬೇಕೆಂದರೆ ಆ ಕವಿಗೆ ದಾರ್ಶನಿಕ ಮನಸ್ಸಿರಬೇಕು. ಬದುಕಿನಾಚೆಯ ಬೆಳಕಿನ ಕುರಿತು ತಹತಹವಿರಬೇಕು. ಶರಣರ ಬದುಕನ್ನು ಕೇಂದ್ರವಾಗಿಟ್ಟುಕೊಂಡು ಬರೆದ ಸಾಹಿತ್ಯಕ್ಕೆ ಹರಿಹರನಿಂದ ಹಿಡಿದು ಇಂದಿನವರೆಗೆ ಕನ್ನಡದಲ್ಲಿ ಸುದೀರ್ಘ ಪರಂಪರೆಯಿದೆ. ಆ ದೃಷ್ಟಿಯಲ್ಲಿ ಮಹಾಂತಪ್ಪ ನಂದೂರರ ಈ ಕೃತಿ ಔಚಿತ್ಯಪೂರ್ಣವಾದ ಹಂದರವನ್ನು ಹೊಂದಿರುವ ಒಂದು ಸಾರ್ಥಕ ಪ್ರಯೋಗವಾಗಿದೆ ಎಂದರು. 

ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಚೆನ್ನಪ್ಪ ಅಂಗಡಿ, ಪ್ರೊ. ಎ.ಜಿ.ಸಬರದ, ಪ್ರೊ. ಸಿ.ಆರ್.ಜೋಶಿ, ಪ್ರೊ. ಬಿ.ಎಸ್.ಶಿರೋಳ, ರಾಮಚಂದ್ರ ಧೋಂಗಡೆ, ಬಸೂ ಬೇವಿನಗಿಡದ, ರಮೇಶ ಇಟ್ನಾಳ, ಎಚ್.ಎಮ್. ಪಾಟೀಲ, ಎಸ್.ಜಿ. ಭಾಗವತ, ಎಸ್. ಗುರುನಾಥ, ಎಸ್.ಎಚ್. ಕೆರೂರ, ಕೆ.ಎನ್. ಹಬ್ಬು, ಎಂ.ಎಲ್.ವಿಜಾಪುರ, ಬಿ.ಜಿ. ಹೊಂಬಳ, ಎಸ್.ಬಿ.ದ್ವಾರಪಾಲಕ, ಎಸ್.ಎಂ.ದೇಶಪಾಂಡೆ ರಾಜೀವ ಪಾಟೀಲಕುಲಕಣರ್ಿ, ಕೆ.ವಿ.ಹಾವನೂರ, ಎಸ್.ಎಸ್.ಬಂಗಾರಿಮಠ, ಡಾ. ಮಂದಾಕಿನಿ ಪುರೋಹಿತ, ವಿನುತಾ ಹಂಚಿನಮನಿ, ಸರಸ್ವತಿ ಭೋಸಲೆ ಮುಂತಾದವರು ಉಪಸ್ಥಿತರಿದ್ದರು.