ಶಾಸಕ ತನ್ವೀರ್ ಸೇಠ್ ಮೇಲೆ ಚಾಕು ಇರಿತ: ಐವರ ಬಂಧನ

ಮೈಸೂರು, ನ.18 :      ಮೈಸೂರಿನ ನರಸಿಂಹರಾಜ (ಎನ್ಆರ್ ಕ್ಷೇತ್ರ) ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಫರ್ಹಾನ್ ಪಾಷ  ಈಗಾಗಲೇ ಪೊಲೀಸರ ವಶದಲ್ಲಿದ್ದು, ಈ ಹಿಂದೆಯೂ ಶಾಸಕರ ಮೇಲೆ ಮೂರು ಬಾರಿ ದಾಳಿಗೆ ವಿಫಲ ಯತ್ನ ನಡೆಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಸಂಸದ ಪ್ರತಾಪ್ ಸಿಂಹ, ಮಾಜಿ ಸಂಸದ ಆರ್.ಧ್ರುವನಾರಾಯಣ ಸೇರಿದಂತೆ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಶಾಸಕರ ಆರೋಗ್ಯ ವಿಚಾರಿಸಿದ್ದಾರೆ.

ತನ್ವೀರ್ ಸೇಠ್ ಅವರು ಪ್ರಣಾಪಾಯದಿಂದ ಪಾರಾಗಿದ್ದಾರೆ. ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಂಸದ ಧ್ರುವನಾರಾಯಣ ಒತ್ತಾಯಿಸಿದ್ದಾರೆ.

ಕಳೆದ ರಾತ್ರಿ ಸುಮಾರು 11.30 ರ ಸುಮಾರಿಗೆ  ಬನ್ನಿಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ತನ್ವೀರ್ ಸೇಠ್ ಕೂಡ ಇದ್ದರು. ಈ ವೇಳೆ ಫರಾನ್ ( 24 ) ಎಂಬ ಯುವಕ ಏಕಾಏಕಿ ತನ್ವೀರ್ ಕತ್ತಿಗೆಗೆ ಚಾಕುವಿನಿಂದ ಇರಿದಿದ್ದ. 

ಆರೋಪಿ ಫರಾನ್ನ್ನು ಪೊಲೀಸರುಮತ್ತು ಸ್ಥಳೀಯರು ತಕ್ಷಣ ವಶಕ್ಕೆ ಪಡೆದಿದ್ದರು. ಈತ ಕೊಲೆ ಯತ್ನ ಮಾಡಿರುವುದಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.