ಕಿತ್ತೂರು ಇತಿಹಾಸ ಶೋಧಕ: ತಲ್ಲೂರು ರಾಯನಗೌಡ ಸಿ ಡಾ. ರಾಜಶೇಖರ ಬಿರಾದಾರ

ಕಿತ್ತೂರು ಇತಿಹಾಸ ಶೋಧಕ: ತಲ್ಲೂರು ರಾಯನಗೌಡ ಸಿ ಡಾ. ರಾಜಶೇಖರ ಬಿರಾದಾರ Kittur History Researcher: Tallur Rayanagowda C Dr. Rajashekar Biradar

ಕಿತ್ತೂರು ಇತಿಹಾಸ ಶೋಧಕ: ತಲ್ಲೂರು ರಾಯನಗೌಡ ಸಿ ಡಾ. ರಾಜಶೇಖರ ಬಿರಾದಾರ 

 ಕನ್ನಡದ ಮೊದಲ ಉಪಲಬ್ಧ ಕೃತಿಯಾಗಿರುವ ಕವಿರಾಜಮಾರ್ಗದಲ್ಲಿನ ಈ ಸಾಲುಗಳು 9ನೆಯ ಶತಮಾನದ ಕನ್ನಡಿಗರ ಗುಣ-ಸ್ವಭಾವ, ಸ್ವಾಭಿಮಾನ ಪರಂಪರೆಯನ್ನು ಬಿಂಬಿಸುತ್ತವೆ. ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಕಥನಗಳನ್ನು ಮೆಲುಕುಹಾಕಿದರೆ ಶ್ರೀವಿಜಯನ ಈ ಮಾತುಗಳು ಬೆಳಗಾವಿಯ ವೀರಪರಂಪರೆಯನ್ನು ಉದ್ದೇಶಿಯೇ ಹೇಳಿದವು ಎನಿಸುತ್ತವೆ. ಬೆಳಗಾವಿಯು ಕಿತ್ತೂರು ರಾಣಿ ಚನ್ನಮ್ಮ, ಸರದಾರ ಗುರುಸಿದ್ಧಪ್ಪ, ಅಮಟೂರು ಬಾಳಪ್ಪ, ಗಜವೀರ, ಬಿಚ್ಚುಗತ್ತಿ ಚೆನ್ನಬಸಪ್ಪ, ವಡ್ಡರ ಯಲ್ಲಣ್ಣ, ಸಂಗೊಳ್ಳಿ ರಾಯಣ್ಣ, ಗಂಗಾಧರರಾವ ದೇಶಪಾಂಡೆ, ಹೂಲಿ ವೆಂಕಟರೆಡ್ಡಿ, ಶಿವಾಪುರದ ಸಾತಪ್ಪ ಟೋಪಣ್ಣವರ ಸೇರಿದಂತೆ ಹಲವು ವೀರ ಸ್ವಾಭಿಮಾನದ ಕಲಿಗಳ ನೆಲೆವೀಡಾಗಿದೆ. ಈ ಸ್ವಾಭಿಮಾನ ಪರಂಪರೆಯಲ್ಲಿ ತಲ್ಲೂರು ರಾಯನಗೌಡರದು ಬಹುಮುಖ ಪ್ರತಿಭೆಯ ವಿಶಿಷ್ಟವಾದ ಹೆಸರು. ಅವರು ಏಕಕಾಲಕ್ಕೆ ಸ್ವಾತಂತ್ರ್ಯ ಹೋರಾಟಗಾರ, ಏಕೀಕರಣದ ರೂವಾರಿ, ಇತಿಹಾಸ ಸಂಶೋಧಕ, ಸಾಹಿತ್ಯಾರಾಧಕ, ಉತ್ತಮ ವಾಗ್ಮಿ, ಅಮೂಲ್ಯ ಕೃತಿಗಳ ಲೇಖಕ, ಸಂಪಾದಕ, ಸಮಾಜ ಸುಧಾರಕ ಮತ್ತು ಅಪ್ಪಟ ಕನ್ನಡಪ್ರೇಮಿಯಾಗಿದ್ದರು. 

ಬೆಳಗಾವಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಮಹನೀಯರು ತಮ್ಮನ್ನು ತೊಡಗಿಸಿಕೊಂಡು ತಮ್ಮದೇ ಆದ ವೈಶಿಷ್ಟ್ಯತೆಯ ಬದುಕಿನೊಂದಿಗೆ ಹೋರಾಡುವ ಮೂಲಕ ಹೆಸರುವಾಸಿಯಾಗಿರುವರು. ಅಂಥವರಲ್ಲಿ ತಲ್ಲೂರ ರಾಯನಗೌಡರ ಹೆಸರು ಕೂಡ ಪ್ರಮುಖವಾಗಿದೆ. ಅವರು ಗಾಂಧೀಜಿಯವರ ಭಾಷಣದಿಂದ ಪ್ರಭಾವಿತರಾಗಿ ತಮ್ಮ ಎಲ್‌.ಎಲ್‌.ಬಿ. ಶಿಕ್ಷಣವನ್ನು ಮೊಟಕುಗೊಳಿಸಿ ಸ್ವಂತ ಊರಾದ ತಲ್ಲೂರಲ್ಲಿ ನೆಲೆಸಿ ಹತ್ತಿರದ ಮುರಗೋಡದ ಗುಡ್ಡದಲ್ಲಿ ಭೂಗತರಾಗಿದ್ದುಕೊಂಡು ತಮ್ಮ ಸಹಚರರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೈಲುವಾಸ ಅನುಭವಿಸಿದವರು. ಸ್ವಾತಂತ್ರ್ಯ ನಂತರ ಕರ್ನಾಟಕ ಏಕೀಕರಣ ಮತ್ತು ಕಿತ್ತೂರು ಸಂಸ್ಥಾನದ ಇತಿಹಾಸ ಸಂಶೋಧನೆ, ಬರೆವಣಿಗೆ, ಸೈದ್ಧಾಂತಿಕ ರಾಜಕಾರಣ, ಸಮಾಜ ಸುಧಾರಣೆಯಂತಹ ಹಲವು ರಚನಾತ್ಮಕ ಉಪಯುಕ್ತ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. 

     ಹಿಂದಿನ ಸವದತ್ತಿ ತಾಲೂಕಿನ ಈಗಿನ ಯರಗಟ್ಟಿ ತಾಲೂಕಿನ ತಲ್ಲೂರು ಗ್ರಾಮದ ಗೌಡರ ಮನೆತನದ ಲಿಂಗನಗೌಡ ಮತ್ತು ಬಸಮ್ಮ ದಂಪತಿಗಳ ಎರಡನೆಯ ಮಗನಾಗಿ ರಾಯನಗೌಡರು ಜನಿಸಿದರು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಇವರು ಅಜ್ಜಿ ಸಿದ್ದಲಿಂಗಮ್ಮನವರ ಆರೈಕೆಯಲ್ಲಿ ಬೆಳೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು, ಎಲ್‌.ಎಲ್‌.ಬಿ. ವ್ಯಾಸಂಗಕ್ಕೆ ಮುಂಬೈಗೆ ತೆರಳಿದರು. ಮಹಾತ್ಮಾ ಗಾಂಧೀಜಿಯವರ ಹೋರಾಟ, ಸತ್ಯಾಗ್ರಹ, ಬರೆವಣಿಗೆ ಹಾಗೂ ಭಾಷಣಗಳಿಂದ ಪ್ರೇರೇಪಿತರಾಗಿ ವ್ಯಾಸಾಂಗವನ್ನು ತ್ಯಜಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. 1937ರಿಂದ 1942ರವರೆಗೆ ಹಲವು ಹೋರಾಟಗಳಲ್ಲಿ (ಅಸ್ಪೃಶ್ಯತೆ ನಿವಾರಣೆ ಚಳವಳಿ, ಅಸಹಕಾರ ಚಳವಳಿ, ಭಾರತ ಬಿಟ್ಟು ತೊಲಗಿ ಚಳವಳಿ ಹಾಗೂ ವೈಯಕ್ತಿಕ ಸತ್ಯಾಗ್ರಹ) ಸಕ್ರಿಯವಾಗಿ ತೊಡಗಿಸಿಕೊಂಡರು. 1940ರಲ್ಲಿ ಮಹಾತ್ಮಾ ಗಾಂಧೀಜಿಯವರ ಕರೆಯ ಮೇರೆಗೆ ವೈಯಕ್ತಿಕ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಮುರಗೋಡದಲ್ಲಿ ಸತ್ಯಾಗ್ರಹದಲ್ಲಿ ತೊಡಗಿದ್ದಾಗ ಪೋಲೀಸರಿಂದ ಬಂಧಿತರಾದರು. ಗಾಂಧೀಜಿಯವರ ಕರೆಗೆ ಮನ್ನಣೆಯಿತ್ತು ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಬ್ರಿಟಿಷರ ವಿರುದ್ಧ ಬುಡಮೇಲು ಕೃತ್ಯಗಳ (ಭೂಗತ ಚಟುವಟಿಕೆಗಳು) ಹೋರಾಟ ನಡೆಸಿದರು. ರಾಯನಗೌಡರನ್ನು ಸೆರೆಹಿಡಿಯುವಲ್ಲಿ ವಿಫಲರಾದ ಪೋಲೀಸರು ತಲ್ಲೂರಿಗೆ ಬಂದು ಇವರ ವಯೋವೃದ್ಧ ತಂದೆಯವರಿಗೆ ಹಿಂಸೆ ಕೊಟ್ಟರು. ಇದರಿಂದ ವಿಚಲಿತರಾಗದ ರಾಯನಗೌಡರು ತಮ್ಮ ಭೂಗತ ಚಟುವಟಿಕೆಗಳನ್ನು ನಿಲ್ಲಿಸಲಿಲ್ಲ. ಪಟ್ಟುಬಿಡದ ಬ್ರಿಟಿಷರು ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡರು. ಮತ್ತೊಮ್ಮೆ ಬಂಧಿತರಾದ ರಾಯನಗೌಡರು ಹಿಂಡಲಗಾ, ಯರವಾಡ ಜೈಲುಗಳಲ್ಲಿ ಸೆರೆವಾಸ ಅನುಭವಿಸಿದರು. ರಾಯನಗೌಡರ ತಂದೆಯವರು ನಿಧನರಾದಾಗ ಅವರ ಶವಸಂಸ್ಕಾರಕ್ಕೂ ಬ್ರಿಟಿಷರು ಅನುಮತಿಯನ್ನು ನೀಡಲಿಲ್ಲ. ಇಂತಹ ಕ್ಲಿಷ್ಟ ಪರಿಸ್ಥಿತಿಯ ಮಧ್ಯೆಯೂ ಶಿವಾಪುರದ ಫಕೀರಯ್ಯ ವಸ್ತ್ರದ, ಸಾತಪ್ಪ ಟೋಪಣ್ಣವರ ಸೇರಿದಂತೆ ಅನೇಕ ಯುವಕರಿಗೆ ಮಾರ್ಗದರ್ಶನ ಮಾಡಿದರು. ಜೈಲಿನಿಂದ ಮರಳಿದ ನಂತರವೂ ಭೂಗತರಾಗಿ ಹೋರಾಟವನ್ನು ಮುಂದುವರೆಸಿದರು.  

‘ಸೋಲಿಲ್ಲದ ಸರದಾರರು’ ಎಂದು ಬೀಗುತ್ತಿದ್ದ ಬ್ರಿಟಿಷರಿಗೆ ಮೊದಲ ಸೋಲಿನ ರುಚಿ ತೋರಿಸಿದ ಕಿತ್ತೂರು ಸಂಸ್ಥಾನದ ಮಹತ್ವವನ್ನು ಅರಿತಿದ್ದ ರಾಯನಗೌಡರು ಅದರ ಇತಿಹಾಸವನ್ನು ಮುಂದಿನ ತಲೆಮಾರಿಗೆ ತಿಳಿಸಿಕೊಡಲು ಸಮಾನಮನಸ್ಕರ ಜೊತೆಗೂಡಿದರು. ನಾಡು-ನುಡಿಗೆ ಶ್ರಮಿಸುತ್ತಿದ್ದ ಬಸರಿಗಿಡದ ವೀರ​‍್ಪನವರ ಮಾರ್ಗದರ್ಶನ, ಕಿತ್ತೂರು ಸಂಸ್ಥಾನದ ಸಾಹಿತ್ಯದ ಸಂಗ್ರಹಣೆಯ ಭಾರಹೊತ್ತು ಮನೆಮಠ ಮರೆತು ದುಡಿಯುತ್ತಿದ್ದ ಬೈಲಹೊಂಗಲದ ದೊಡ್ಡಭಾವೆಪ್ಪ ಮೂಗಿಯವರ ಸಹಯೋಗ, ವೀರಭದ್ರ​‍್ಪ ಸೀಗೀಹಳ್ಳಿ ಹಾಗೂ ಕಲ್ಮೇಶ್ವರ(ಕಲ್ಲಪ್ಪ) ಶೆಟ್ಟರ ಅವರ ಸಹಕಾರದೊಂದಿಗೆ ಬೈಲಹೊಂಗಲದ ಕಲ್ಮಠದ ಆವರಣದಲ್ಲಿ 1946ರಲ್ಲಿ ರಾಣಿ ಚೆನ್ನಮ್ಮ ಇತಿಹಾಸ ಮಂಡಲವನ್ನು ಸ್ಥಾಪಿಸಿದರು. ಸರಕಾರದ ಒಪ್ಪಿಗೆ ಪಡೆದು ಕಿತ್ತೂರಿನ ಹಳೆಯ ಕೋಟೆಯ ಆವರಣ, ಹಾಳಾದ ಅರಮನೆ ಮತ್ತು ಕಿತ್ತೂರಿನ ದೊರೆಗಳ, ಗುರುಗಳ, ಕಲ್ಮಠದ ಶೋಧ ಕಾರ್ಯವನ್ನು ಕೈಗೊಂಡರು. ಇದರಿಂದ ಕಿತ್ತೂರು ಅರಸರ ನಾನೆ(ಖಡ್ಗ, ಡಾಲು) ಇತ್ಯಾದಿ ಲಭ್ಯವಾದವು.  ಬೈಲಹೊಂಗಲದ ಕಲ್ಮಠವನ್ನು ಗುರುತಿಸಿ, ಇತಿಹಾಸ ಮಂಡಲದ ಪರವಾಗಿ ಅದರ ಜೀರ್ಣೋದ್ಧಾರವನ್ನು ಕೈಗೊಂಡರು. ಬೈಲಹೊಂಗಲದಲ್ಲಿಯೇ ನೆಲೆನಿಂತು, ಚನ್ನಮ್ಮ ತಾಯಿಯ ಸಮಾಧಿಯನ್ನು ಕಟ್ಟಿಸಿ, ಅದರ ಮೇಲೆ ಆಕೆಯ ಪುತ್ಥಳಿಯನ್ನು ಪ್ರತಿಷ್ಠಾಪಿಸಿದರು. ಆ ಮೂಲಕ ಕಿತ್ತೂರು ಚನ್ನಮ್ಮಳ ವೀರ ಹೋರಾಟದ ಬದುಕನ್ನು ಜಗತ್ತಿಗೆ ಸಾರಿದರು. ಕಿತ್ತೂರು ಅರಮನೆಯಲ್ಲಿದ್ದ ಮದ್ದಿನ ಸಂಗ್ರಹದ ಕೋಣೆ, ಆಯುಧ ಸಂಗ್ರಹದ ಕೋಣೆ, ತೋಪುಖಾನೆ, ಹಯಶಾಲೆ, ಗಜಶಾಲೆ ಮತ್ತು ಅರಸರ ಪೂರ್ವಜರ ಸಮಾಧಿಗಳನ್ನು ಕಂಡುಹಿಡಿದು ಕಿತ್ತೂರಿನ ಇತಿಹಾಸದ ಮೇಲೆ ಬೆಳಕುಚೆಲ್ಲಿದರು. 

ಇಂಗ್ಲೆಂಡಿಗೆ ಪ್ರಯಾಣ: 

ಕಿತ್ತೂರಿನ ಇತಿಹಾಸಕ್ಕೆ ಸಂಬಂಧಿಸಿದಂತೆ ಆಕರ ಸಾಮಗ್ರಿಗಳ ಸಂಗ್ರಹಕ್ಕಾಗಿ ಲಂಡನ್‌ವರೆಗೂ ಹೋಗಿ ಅಲ್ಲಿನ ಕಿತೂರು ಸಂಸ್ಥಾನಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಭಾರತಕ್ಕೆ ತಂದ ಶ್ರೇಯಸ್ಸು ರಾಯನಗೌಡರಿಗೆ ಸಲ್ಲುತ್ತದೆ. ‘ಕಿತ್ತೂರಿನ ಇತಿಹಾಸಕ್ಕೆ  ಸಂಬಂಧಿಸಿದ ಮಹತ್ವದ ದಾಖಲೆಗಳು ಇಂಗ್ಲೆಂಡಿನಲ್ಲಿ ದೊರೆಯುತ್ತವೆ’ ಎಂಬ ಮಾಹಿತಿಯನ್ನು ಪಡೆದ ರಾಯನಗೌಡರು ‘ಅವುಗಳನ್ನು ಹೇಗಾದರೂ ತರಬೇಕು’ ಎಂದು ಆಲೋಚಿಸುತ್ತಾರೆ. 1948ರಲ್ಲಿ ಬಸರಿಗಿಡದ ವೀರ​‍್ಪನವರ ಜೊತೆಗೂಡಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು. ಯುರೋಪ್ ಖಂಡದ ಹಾಲಂಡ್, ನಾರ್ವೆ, ಇಟಲಿ, ಫ್ರಾನ್ಸ್‌, ಸ್ವೀಡನ್ ದೇಶಗಳ ಸಂಸ್ಕೃತಿ ಪರಂಪರೆಯನ್ನು ಅಧ್ಯಯನ ಮಾಡಿ, ಲಂಡನ್ ನಗರಕ್ಕೆ ಬಂದರು. ಆಗ ಬಸರಿಗಿಡದ ವೀರ​‍್ಪನವರ ಆರೋಗ್ಯ ಹದಗೆಟ್ಟ ಕಾರಣ ರಾಯನಗೌಡರಿಗೆ ಹಣದ ವ್ಯವಸ್ಥೆ ಮಾಡಿ, ಅವರು ಭಾರತಕ್ಕೆ ಮರಳಿದರು. ತಲ್ಲೂರ ರಾಯನಗೌಡರು ಲಂಡನ್ನಿನಲ್ಲಿರುವ ಇಂಡಿಯಾ ಹೌಸ್ ಮತ್ತು ಬ್ರಿಟಿಷ್ ಮ್ಯುಜಿಯಂನಲ್ಲಿರುವ ಕಿತ್ತೂರ ಸಂಸ್ಥಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹುಡುಕಲು ಪ್ರಾರಂಭಿಸಿದರು. ಥೇಮ್ಸ್‌ ನದಿ ಸೇತುವೆ, ಬಕಿಂಗ್ ಹ್ಯಾಮ್ ಅರಮನೆಗಳನ್ನು ನೋಡಿ, ಇಂಡಿಯಾ ಹೌಸ್ ಗ್ರಂಥಾಲಯಕ್ಕೆ ಭೇಟಿ ಕೊಡಲು ಹೋದಾಗ ಅವರಿಗೆ ಪ್ರವೇಶವನ್ನು ನಿರಾಕರಿಸಲಾಯಿತು. ರಾಯನಗೌಡರು ಅಲ್ಲಿಗೆ ಸರಕಾರದ ಪ್ರತಿನಿಧಿಗಳಾಗಿ ಹೋಗಿರದೆ ಖಾಸಗಿ ವ್ಯಕ್ತಿಯಾಗಿ ಲಂಡನ್ ಪ್ರಯಾಣ ಕೈಗೊಂಡಿದ್ದರಿಂದ ಮ್ಯೂಜಿಯಂನ ಭೇಟಿ ಸಾಧ್ಯವಾಗಲಿಲ್ಲ. 

ಇಂಗ್ಲೆಂಡ್‌ನ ರಾಣಿ ಎಲಿಜೆಬೆತ್ ಭೇಟಿ: 

ಇಂಡಿಯಾ ಹೌಸ್ ಗ್ರಂಥಾಲಯಕ್ಕೆ ಭೇಟಿಗೆ ಅವಕಾಶ ನಿರಾಕರಿಸಿದಾಗ ಪಟ್ಟು ಸಡಿಲಿಸದ ರಾಯನಗೌಡರು ನೇರವಾಗಿ ಬ್ರಿಟನ್‌ನ ರಾಣಿ ಎಲಿಜಬೆತ್ ಅವರನ್ನು ಸಂಪರ್ಕಿಸಿದರು. ಕಿತ್ತೂರಿನ ಇತಿಹಾಸ ಕುರಿತು ಮನವರಿಕೆ ಮಾಡಿದಾಗ ರಾಣಿಯು ಅವರಿಗೆ ಇಂಡಿಯಾ ಹೌಸ್ ಮತ್ತು ಬ್ರಿಟಿಷ ಮ್ಯುಜಿಯಂ ನೋಡಲು ಅವಕಾಶ ಕಲ್ಪಿಸಿದ್ದಲ್ಲದೆ ಕಿತ್ತೂರಿನ ಇತಿಹಾಸಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪಡೆಯಲು ಅನುಕೂಲ ಮಾಡಿಕೊಟ್ಟರು. ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಕಾಗದ-ಪತ್ರಗಳು, ಸಂಗೊಳ್ಳಿ ರಾಯಣ್ಣ ಬ್ರಿಟಿಷರೊಡನೆ ಹೋರಾಡಿದ ಸಂಗತಿಗಳ ದಾಖಲೆಗಳನ್ನಲ್ಲದೆ ಕೈಪಿಯತ್ತುಗಳು, ಆಯುಧಗಳು, ತಾಳೆಗರಿಗಳು, ವೇಷಭೂಷಣಗಳು, ಕಿತ್ತೂರಿನ ಸಾಹಿತ್ಯ - ಎಲ್ಲವನ್ನು ತೆಗೆದುಕೊಂಡು ಭಾರತಕ್ಕೆ ಮರಳಿದರು.  

ಕಿತ್ತೂರು ಸಂಶೋಧನಾ ಸಾಹಿತ್ಯ: 

ಇಂಗ್ಲೆಂಡಿನಿಂದ ತಂದ ಮಹತ್ವದ ದಾಖಲೆಗಳನ್ನು ಪರೀಶೀಲಿಸಿ, ತಲ್ಲೂರು ರಾಯನಗೌಡರು ಭಾಷಣ, ಬರೆವಣಿಗೆಗಳ ಮೂಲಕ ಕಿತ್ತೂರು ಸಂಸ್ಥಾನದ ಇತಿಹಾಸವನ್ನು ದಾಖಲಿಸುವ ಮಹತ್ವದ ಕಾರ್ಯವನ್ನು ಮಾಡಿದರು. ಇವರ ಬರೆಹಗಳು ಸಂಯುಕ್ತ ಕರ್ನಾಟಕ, ಕರ್ಮವೀರ ವಾರಪತ್ರಿಕೆ, ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ರಾಣಿ ಚೆನ್ನಮ್ಮ ಇತಿಹಾಸ ಮಂಡಲದ ಮೂಲಕ ಹಲವು ಉಪಯುಕ್ತ ಕೃತಿಗಳನ್ನು ಪ್ರಕಟಿಸಿದರು. 

ಮಲ್ಲಸರ್ಜ ಕಾವ್ಯ 

      ರುದ್ರಕವಿಯು ಬರೆದ ‘ಮಲ್ಲಸರ್ಜ ಕಾವ್ಯ’ವನ್ನು ತಲ್ಲೂರು ರಾಯನಗೌಡರು ಸಂಪಾದಿಸಿದರು. ಮಲ್ಲಸರ್ಜ ಪ್ರಭುವೇ ಈ ಕಾವ್ಯದ ಕಥಾನಾಯಕ. ‘ಆತನು ಕಿತ್ತೂರು ಆಳುತ್ತಿರುವಾಗ ಪೇಶ್ವೆ ಭಾಜೀರಾಯನು ಕರ್ನಾಟಕಕ್ಕೆ ದಂಡೆತ್ತಿ ಬಂದನು. ಮಲ್ಲಸರ್ಜ ಪ್ರಭುವು ಪೇಶ್ವೆ ಭಾಜೀರಾಯನ ಸಾಮಂತನಾಗಿ ಅವನಿಗೆ ಕಪ್ಪ-ಕಾಣಿಕೆಗಳನ್ನು ಕೊಡಲು ನಿರಾಕರಿಸುತ್ತಾನೆ. ಶೇಗುಣಸಿ ಗೌಡರು ಸಂಧಾನಕಾರರಾಗಿ ಬಂದು ರಾಜನನ್ನು ಪೇಶ್ವೆಯ ಬಿಡಾರಕ್ಕೆ ಕರೆತಂದರು. ಕೂಡಲೇ ಪೇಶ್ವೆ ಸರಕಾರವು ರಾಜಬಂಧಿಯಾಗಿಸಿ ಮಲ್ಲಸರ್ಜನನ್ನು ಪುಣೆಗೆ ಕರೆದೊಯ್ದರು. ಅಲ್ಲಿಯ ಸೆರೆಮನೆಯಲ್ಲಿ ಮಲ್ಲಸರ್ಜನಿಗೆ ಕ್ಷಯ ರೋಗವು ಅಂಟಿಕೊಂಡಿತು. ಮರಳಿ ಕಿತ್ತೂರಿಗೆ ಬರುವಷ್ಟರಲ್ಲಿ ರೋಗವು ಮತ್ತಷ್ಟು ಉಲ್ಬಣಗೊಂಡಿತು. ರಾಜವಾಡೆಗೆ ಬಂದಿಳಿದ ಮೂರು-ನಾಲ್ಕು ದಿನಗಳಲ್ಲಿ ಮಲ್ಲಸರ್ಜ ದೊರೆಯು ಮೃತಪಟ್ಟನು’ ಎಂಬ ಸಂಗತಿಯನ್ನು ಈ ಕಾವ್ಯವು ಒಳಗೊಂಡಿದೆ. ಕಿತ್ತೂರಿನ ಇತಿಹಾಸದ ಮೇಲೆ ವಿಶೇಷ ಬೆಳಕು ಚೆಲ್ಲುವ ಈ ಕೃತಿಯು ಕಾವ್ಯಾತ್ಮಕವಾಗಿ ರಚಿತವಾಗಿದೆ. 

 1948ರಲ್ಲಿ ಪ್ರಕಟವಾದ ಈ ಕಾವ್ಯವು ‘ಶರಣರ ನಾಡು ಕಿತ್ತೂರು’ ಎಂಬ ದುಂಧುಬಿಯಿಂದ ಆರಂಭವಾಗುತ್ತದೆ. ಈ ಕಾವ್ಯವು ‘ಪೇಶ್ವೆ ದಂಡಿನ ಪಯಣ’, ‘ಬಾಜಿರಾಯನ ಪಯಣ’, ‘ಮಲ್ಲಭೂಪನ ಸೈನ್ಯ ಸಿದ್ಧತೆ’, ‘ಸೇಗುಣಿಸಿ ಗೌಡರ ಕುಟಿಲ ರಾಯಭಾರ’, ‘ಮಲ್ಲಭೂಪನ ಮೇಲೆ ಕಾವಲು’, ‘ಬಾಜಿರಾಯನ ಮೇಜವಾನಿ’, ‘ಮಲ್ಲಭೂಪನಿಗೆ ಓತಣ’, ‘ಅತ್ತೆಯ ಮರಣ ವಾರ್ತೆ’, ‘ಮಲ್ಲಭೂಪನ ಹೃದ್ರೋಗ’, ‘ಮಲ್ಲಭೂಪನ ವ್ಯವಸ್ಥಾ ಪತ್ರ’, ‘ಮಲಭೂಪನ ಬಿಡುಗಡೆ’, ‘ಮಲ್ಲಭೂಪನ ಕಾಯಿಲೆ ಹಾಗೂ ಮರಣ’, ‘ಚೆನ್ನಮ್ಮ ರಾಣಿಯ ಪ್ರಲಾಪ’ ಮತ್ತು ‘ಸ್ಮಶಾನ ಯಾತ್ರೆ’ ಎಂಬ ಒಟ್ಟು 13 ಭಾಗಗಳನ್ನು ಒಳಗೊಂಡಿದೆ.  

ಕಿತ್ತೂರು ಬಂಡಾಯ 

1947ರಲ್ಲಿ ಚೆನ್ನಮ್ಮ ರಾಣಿ ಇತಿಹಾಸ ಮಂಡಲ, ಬೈಲಹೊಂಗಲದಿಂದ ಪ್ರಕಟವಾದ ಈ ಕೃತಿಯು ಚನ್ನಮ್ಮನ ಲಾವಣಿಯಿಂದ ಪ್ರಾರಂಭವಾಗುತ್ತದೆ. ಕಿತ್ತೂರಿನ ಇತಿಹಾಸಕ್ಕೆ ಸಂಬಂಧಿಸಿದಂತೆ ರಾಯನಗೌಡರು ವಿವಿಧ ಲೇಖಕರಿಂದ ಬರೆಸಿದ ಕನ್ನಡ ಮತ್ತು ಇಂಗ್ಲಿಷ್ ಲೇಖನಗಳನ್ನು ಸಂಪಾದಿಸಿ ‘ಕಿತ್ತೂರು ಬಂಡಾಯ’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ‘ಕನ್ನಡ ನಾಡಿನ ರಾಣಿ ಕಿತ್ತೂರು ಚನ್ನಮ್ಮ’ (ತಲ್ಲೂರು ರಾಯನಗೌಡರು), ‘ಕಿತ್ತೂರು ಸಂಸ್ಥಾನದ ಇತಿಹಾಸ’ (ಕಲ್ಮೇಶ್ವರ ಚನ್ನಮಲ್ಲಪ್ಪ ಶ್ರೇಷ್ಠಿ), ‘ಕಿತ್ತೂರು ಅರಸರು’ (ಶೇ.ಗಿ. ಕಟ್ಟಿ), ‘ಕಿತ್ತೂರು ರಾಜಮನೆತನಗಳು’ (ವೀರ​‍್ಪ ಬಸರಿಗಿಡದ), ‘ಕಿತ್ತೂರು ಚಿನ್ನವ್ವ’ (ಸರಸ್ವತಿದೇವಿ ಗೌಡರ), ‘ವೀರರಾಣಿ ಕಿತ್ತೂರು ಚಿನ್ನವ್ವ’ (ಕೀರ್ತನಕೇಸರಿ ಬಿ. ಶಿವಮೂರ್ತಿ ಶಾಸ್ತ್ರೀ), ‘ಕನ್ನಡತಿಯ ಕ್ರಾಂತಿ ಕಿಡಿಯು’ (ಪದ್ಮಾವತಿದೇವಿ ಅಂಗಡಿ), ‘ಐತಿಹಾಸಿಕ ಕಾಗದ ಪತ್ರಗಳು’ (ದೊಡ್ಡಭಾವೆಪ್ಪ ಮೂಗಿ), ‘ವೀರ ಕನ್ನಡಿಗರ ಬೀಡು ಕಿತ್ತೂರು’ (ಎಂ.ಪಿ. ವಾಲಿ), ‘ಕಿತ್ತೂರ ದೇಸಗತಿ’ (ರಾಜ ಪುರೋಹಿತರು), ‘ಕಿತ್ತೂರ ದೇಶಗತಿ’ (ನರಸಿಂಹಾಚಾರ‌್ಯ ಪುಣೇಕರ), ‘ಚನ್ನವ್ವನ ಕಿತ್ತೂರು ನಾಟಕ’ (ಬಸವರಾಜ ಕಟ್ಟೀಮನಿ), ‘ಚಿನ್ನವ್ವ’ (ದೇಸಾಯಿ ಪಾಂಡುರಂಗರಾವ), ‘ಕಿತ್ತೂರಿನ ಕೊನೆಯ ಕಾಳಗ’ (ಹೀರೇಮಠ ರಾಮಯ್ಯ ಚನಬಸಯ್ಯ), ‘ಕಿತ್ತೂರಿನ ಕೊನೆಯು’ (ಶೇ.ಗಿ. ಕಟ್ಟಿ), ‘ಮಲ್ಲಸರ್ಜ ದೇಸಾಯರ ಸ್ಥಾನಬದ್ದತೆ’ (ಮಲಿಕಸಾಹೇಬ), ‘ಕಿತ್ತೂರು ರಾಜೇಂದ್ರ’ (ಅಮೃತೇಶ), ‘ಮಲ್ಲಸರ್ಜ’ (ಕಾಸೀರಾಜ ಕವಿ), ‘ಕಿತ್ತೂರ ಗೀತೆ’ (ರುದ್ರಕವಿ), ‘ಕಿತ್ತೂರು ಕೋಟೆಯ ನೋಟ’ (ಆನಂದ ಕವಿ), ‘ಕಳೆದ ಕಿತ್ತೂರು’ (ಎಸ್‌.ಡಿ. ಇಂಚಲ), ‘ಕಿತ್ತೂರ ರಾಣಿಯ ಸಮಾಧಿ ನೋಡಿ’ (ಎಸ್‌.ಡಿ. ಇಂಚಲ), ‘ಸೂಳೆ ಸರ್ಜರ ಪ್ರಣಯ’ (ರುದ್ರಕವಿ) ಮತ್ತು ‘ಸಂಗೊಳ್ಳಿ ರಾಯನಾಯಕನ ಬಂಡು’ (ಶೇ.ಗಿ. ಕಟ್ಟಿ) ಎಂಬ ಮಹತ್ವದ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.  

1961ರಲ್ಲಿ ಬಿ.ಆರ್‌. ಪಂತುಲು ಅವರಿಗೆ ಕಿತ್ತೂರು ರಾಣಿ ಚನ್ನಮ್ಮಳ ಸಾಹಸಗಾಥೆಯನ್ನು ಪರಿಚಯಿಸಿ ಸಿನಿಮಾ ಆಗಿಸುವಲ್ಲಿ ತಲ್ಲೂರು ರಾಯನಗೌಡರು ಮಹತ್ವದ ಪಾತ್ರವಹಿಸಿದರು. ಜೊತೆಗೆ ಕಿತ್ತೂರು ರಾಣಿಯ ಸಾಹಸಗಳ ಪ್ರತೀಕವಾಗಿ ಹೆಣ್ಣುಮಕ್ಕಳಿಗಾಗಿ ‘ಕಿತ್ತೂರು ಚನ್ನಮ್ಮ ಶಾಲೆ’ಯನ್ನು ಆರಂಭಿಸಿ, ಆಗಿನ ಪ್ರಧಾನ ಮಂತ್ರಿಗಳಾದ ಇಂದಿರಾ ಗಾಂಧಿಯವರಿಂದ ಉದ್ಘಾಟನೆ ಮಾಡಿಸಿದರು. 

     “ಪರಂಪರೆಯಲ್ಲಿ ಪ್ರಜ್ಞೆಯಿಲ್ಲದವನಿಗೆ ಈ ದೇಶವೂ ಅಷ್ಟೇ, ಪರದೇಶವೂ ಅಷ್ಟೇ. ಈ ಭಾಷೆಯೂ ಅಷ್ಟೇ, ಪರಭಾಷೆಯೂ ಅಷ್ಟೇ. ಅಂಥವನಿಗೆ ಉಪಜೀವನ ಮುಖ್ಯವಾಗಿರುತ್ತದೆಯೇ ಹೊರತು, ಜೀವನವಲ್ಲ. ವ್ಯಕ್ತಿಕೇಂದ್ರಿತವಾಗಿ ಬದುಕುವುದು ಉಪಜೀವನ, ಪರಂಪರೆಕೇಂದ್ರಿತವಾಗಿ ಬದುಕವುದು ಜೀವನ. ವ್ಯಕ್ತಿಕೇಂದ್ರಿತವಾದವನು ಪರಂಪರೆಗೆ ವಿಮುಖನಾಗಿ ಬೆಳೆಯುವುದರಿಂದ, ಅವನಿಗೆ ಸ್ವಂತ ಮನೆಯೂ ಅಷ್ಟೇ, ಬಾಡಿಗೆಮನೆಯೂ ಅಷ್ಟೇ. ಅವನು ತನ್ನ ಮನೆಯನ್ನು ಸಹ ಭೌತಿಕ ನೆಲೆಯಿಂದ ನೋಡುವವನೇ ಹೊರತು, ಅದರಾಚೆಯ ಸಾಂಸ್ಕೃತಿಕ ಮೌಲ್ಯದಿಂದ ನೋಡುವುದಿಲ್ಲ”(ಮಾರ್ಗ-6, ಪು. 66). ತಲ್ಲೂರು ರಾಯನಗೌಡರು ಪರಂಪರೆಯ ಪ್ರಜ್ಞೆಯುಳ್ಳ ವ್ಯಕ್ತಿಯಾದ್ದರಿಂದ ವೈಯಕ್ತಿಕ ಹಿತಾಸಕ್ತಿಗಿಂತ ನಾಡು-ನುಡಿಯ ಇತಿಹಾಸ-ಪರಂಪರೆಗಳ ಪಾಲನೆ-ಪೋಷಣೆಯ ಮಹತ್ವದ ಜವಾಬ್ದಾರಿಯನ್ನು ನೆರವೇರಿಸಿದರು. ಸ್ವಾತಂತ್ರ್ಯ ಹೋರಾಟಗಾರಾಗಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ಉತ್ತಮ ವಾಗ್ಮಿಗಳಾಗಿ, ಸಂಶೋಧಕ ಲೇಖಕರಾಗಿ, ಸಾಮಾಜಿಕ ಚಿಂತನಶೀಲರಾಗಿ, ತತ್ತ-್ವನಿಷ್ಠ ರಾಜಕೀಯ ಧುರೀಣರಾಗಿ ಬಾಳಿ ಬದುಕಿದ ತಲ್ಲೂರು ರಾಯನಗೌಡರ ಸಾಧನೆಯ ಹಾದಿಯು ಇಂದಿನ ಪೀಳಿಗಗೆ ತಲುಪಬೇಕಾಗಿದೆ.