ಗಜಾನನ ಮಂಗಸೂಳಿ ನೇತೃತ್ವದಲ್ಲಿ ಅಥಣಿಯಲ್ಲಿ ಗಾಳಿಪಟ ಉತ್ಸವ

Kite festival at Athani led by Gajanana Mangasuli

ಅಥಣಿ 22: ಅಥಣಿ ರೋಟರಿ ಸಂಸ್ಥೆಯಡಿ  ಗಣರಾಜ್ಯೋತ್ಸವದ ಅಂಗವಾಗಿ ಅಥಣಿ ನಗರದಲ್ಲಿ ಪ್ರಥಮ ಬಾರಿಗೆ ಜಿಎಮ್ ಗಾಳಿಪಟ ಉತ್ಸವ ಜನೇವರಿ 26 ಮಧ್ಯಾಹ್ನ 2 ಗಂಟೆಗೆ ಆಯೋಜಿಸಲಾಗಿದೆ ಎಂದು ಅಥಣಿ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ತಿಳಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.       

ಗಾಳಿಪಟ ಉತ್ಸವದಲ್ಲಿ ಭಾಗವಹಿಸುವ ಎಲ್ಲರಿಗೂ ಸರ್ಟಿಫಿಕೇಟ್ ಕೊಡಲಾಗುವುದು, ಸ್ಪರ್ಧಾಳುಗಳಿಗೆ ಉಚಿತವಾಗಿ ಗಾಳಿಪಟ ಮತ್ತು ಧಾರ ಕೊಡಲಾಗುವುದು, ಗಾಳಿಪಟಗಳಿಗೆ ಮಾಂಜಾ ಧಾರ ಬಳಸುವಂತಿಲ್ಲ, ಸ್ಪರ್ಧಾಳುಗಳಿಗೆ ವಯಸ್ಸಿನ ಮಿತಿ ಇಲ್ಲ ಎಂದ ಅವರು ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು ಸೇರಿದಂತೆ ಅನೇಕ ಮಹಾನಗರಗಳಲ್ಲಿ ಗಾಳಿಪಟ ಉತ್ಸವ ನಡೆಯುತ್ತಿದ್ದು, ಇಲ್ಲಿಯವರೆಗೂ ಅಥಣಿಯಲ್ಲಿ ಒಂದು ಬಾರಿಯೂ ಗಾಳಿಪಟ ಉತ್ಸವ ನಡೆದಿರಲಿಲ್ಲ ಹೀಗಾಗಿ ನಾವು ಇದೇ ಪ್ರಥಮ ಬಾರಿಗೆ ಆಯೋಜಿಸಿದ್ದೇವೆ ಎಂದು ತಿಳಿಸಿದರು.       ಮೊಬೈಲ್, ಟಿವ್ಹಿ ಮಾಧ್ಯಮಗಳ ಪರಿಣಾಮ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವಾಗ ಗಾಳಿಪಟ ಉತ್ಸವ ಆಯೋಜಿಸುವ ಮೂಲಕ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹಿಸುತ್ತಿದ್ದೇವೆ ಎಂದ ಅವರು ಸ್ಥಳೀಯ ಉದ್ಯಮಿ ರಾವಸಾಹೇಬ ಐಹೊಳೆ ಮಾಲಿಕತ್ವದ ಆರ್‌.ಎನ್‌.ಎ ಲ್ಯಾಂಡ್ ಡೌಲಪರ್ಸ  ಗಾಳಿಪಟ ಉತ್ಸವದ ಪ್ರಾಯೋಜಕತ್ವ ಪಡೆದುಕೊಂಡಿದ್ದಾರೆ. ಉತ್ಸವದಲ್ಲಿ ಪಾಲ್ಗೊಳ್ಳುವವರಿಗೆ ಯಾವುದೆ ಶುಲ್ಕ ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.       

ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳುವ ಸ್ಪರ್ಧಾಳುಗಳಿಗೆ ಮಾರ್ಗದರ್ಶನ ನೀಡಲು ಮತ್ತು ವೀಕ್ಷಣೆ ಮಾಡಲು ದೊಡ್ಡ ಬಳ್ಳಾಪುರ, ರಾಣಿಬೆನ್ನೂರ, ಬೆಳಗಾವಿ ಸೇರಿದಂತೆ ಅನೇಕ ಸ್ಥಳಗಳಿಂದ ತಜ್ಞ ತರಬೇತುದಾರರು ಕೂಡ ಪಾಲ್ಗೊಳ್ಳುತ್ತಿದ್ದಾರೆ ಎಂದ ಅವರು ಮುಂದಿನ ವರ್ಷ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವ ಆಯೋಜಿಸುವ ಉದ್ದೇಶ ನಮ್ಮದಾಗಿದೆ ಎಂದು ಹೇಳಿದರು.         

ರೋಟರಿ ಸದಸ್ಯ ಅರುಣ ಯಲಗುದ್ರಿ ಮಾತನಾಡಿ, ರೋಟರಿ ಸಂಸ್ಥೆ ಆಯೋಜಿಸಿರುವ ಗಾಳಿಪಟ ಉತ್ಸವಕ್ಕೆ ಇನ್ನರ್ ವ್ಹೀಲ್ ಸಂಸ್ಥೆ, ಮಂಗಸೂಳಿ ಪ್ರತಿಷ್ಢಾನ, ರೋಟ್ರಾಕ್ಟ ಸಂಸ್ಥೆ, ಇಂಟ್ರಾಕ್ಟ ಸಂಸ್ಥೆ ಸಹಕಾರ ನೀಡಿದ್ದಾರೆ ಎಂದ ಅವರು ಈಗಾಗಲೇ 1000 ಕ್ಕೂ ಹೆಚ್ಚು ಸ್ಪರ್ಧಾಳುಗಳು ಹೆಸರು ನೊಂದಾಯಿಸಿದ್ದು, ಇನ್ನೂ ಹೆಚ್ಚು ಹೆಚ್ಚು ಸ್ಪರ್ಧಾಳುಗಳು ಹೆಸರು ನೊಂದಾಯಿಸಬೇಕು ಎಂದು ಮನವಿ ಮಾಡಿದರು.       ಸುದ್ದಿಗೋಷ್ಠಿಯಲ್ಲಿ ರೋಟರಿ ಸಂಸ್ಥೆಯ ಅರುಣ ಸೌದಾಗರ, ಡಾ.ಪಿ.ಪಿ.ಮೀರಜ, ಭರತ ಸೋಮಯ್ಯ, ಪ್ರಫುಲ್ ಪಡನಾಡ ಉಪಸ್ಥಿತರಿದ್ದರು.