ಸ್ಥಳೀಯ ಮಟ್ಟದಲ್ಲಿ ಕ್ರೀಡಾಪಟುಗಳ ಆಯ್ಕೆಯಲ್ಲಿ ಸಂಪೂರ್ಣ ಪಾರದರ್ಶಕತೆ-ಕಿರಣ್‍ ರಿಜಿಜು

ನವದೆಹಲಿ, ಮಾರ್ಚ್ 19, ಸ್ಥಳೀಯ ಮಟ್ಟದಲ್ಲಿ ಕ್ರೀಡಾಪಟುಗಳ ಆಯ್ಕೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಪಾಡಿಕೊಳ್ಳಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್‍ ರಿಜಿಜು ಲೋಕಸಭೆಗೆ ಗುರುವಾರ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಬಹುಜನ ಸಮಾಜ ಪಕ್ಷ(ಬಿಎಸ್‍ಪಿ) ಸದಸ್ಯ ಶ್ಯಾಮ್‍ ಸಿಂಗ್‍ ಯಾದವ್ ಅವರ ಪೂರಕ ಪ್ರಶ್ನೆಗೆ ಉತ್ತರಿಸಿ ಸಚಿವರು ಈ ವಿಷಯ ತಿಳಿಸಿದ್ದಾರೆ.ಸ್ಥಳೀಯ ಮಟ್ಟದಲ್ಲಿ ಕ್ರೀಡಾಪಟುಗಳ ಆಯ್ಕೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಯಾದವ್ ಆರೋಪಿಸಿದರು. ಆರೋಪವನ್ನು ನಿರಾಕರಿಸಿದ ಸಚಿವರು, ಖೇಲೋ ಇಂಡಿಯಾ ಯೋಜನೆಯಡಿ ಸ್ಥಳೀಯ ಮಟ್ಟದಲ್ಲಿ ಪ್ರತಿಭಾವಂತರನ್ನು ಗುರುತಿಸಲಾಗುತ್ತಿದೆ. ಉದಯೋನ್ಮುಖ ಕ್ರೀಡಾ ಪಟುಗಳನ್ನು ಆಯ್ಕೆ ಮಾಡಿ ಭಾರತೀಯ ಕ್ರೀಡಾ ಪ್ರಾಧಿಕಾರ(ಎಸ್‍ಎಐ) ಕೇಂದ್ರಗಳಲ್ಲಿ ಇವರಿಗೆ ಪ್ರವೇಶ ಕಲ್ಪಿಸಲಾಗುತ್ತಿದೆ. ಕೇಂದ್ರಗಳಲ್ಲಿ ಆಯ್ಕೆಯಾದವರಿಗೆ ಸೂಕ್ತ ತರಬೇತಿ ಮತ್ತು ಪ್ರೋತ್ಸಾಹ ಧನ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.ಪ್ರಾಧಿಕಾರ ಕ್ರೀಡಾಪಟುಗಳ ಸಾಮರ್ಥ್ಯ ವೃದ್ಧಿಗೆ ಸಂಪೂರ್ಣ ಒತ್ತು ನೀಡುತ್ತಿದೆ. ಕ್ರೀಡಾ ಒಕ್ಕೂಟಗಳಿಗೆ ಕ್ರೀಡಾಪಟುಗಳ ಆಯ್ಕೆಯ ಸಂಪೂರ್ಣ ಸ್ವಾತಂತ್ರ್ಯವಿದೆ. ಯಾವುದೇ ಪಕ್ಷಪಾತವಿಲ್ಲದೆ, ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗದೆ ಈ ಒಕ್ಕೂಟಗಳು ಆಯ್ಕೆಯನ್ನು ಮಾಡುತ್ತಿವೆ ಎಂದು ಕಿರಣ್‍ ರಿಜಿಜು ಹೇಳಿದ್ದಾರೆ.