ಪುಣೆ, ಅ 11: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ವೃತ್ತಿ ಜೀವನದ ಏಳನೇ ದ್ವಿಶತಕ ಸಿಡಿಸಿದರು. ಆ ಮೂಲಕ ಅತಿ ಹೆಚ್ಚು ದ್ವಿಶತಕ ಸಿಡಿಸಿದ ಭಾರತದ ಮೊದಲನೇ ಬ್ಯಾಟ್ಸ್ ಮನ್ ಎಂಬ ನೂತನ ದಾಖಲೆಯನ್ನು ಬರೆದರು.
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ 63 ರನ್ ಗಳಿಂದ ಆಟ ಮುಂದುವರಿಸಿದ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಬೌಲರ್ ಗಳ ಎದುರು ಅತ್ಯದ್ಭುತ ಬ್ಯಾಟಿಂಗ್ ಮಾಡಿದರು. ಎಂದಿನಂತೆ, ತಮ್ಮ ಸ್ವಾಭಾವಿಕ ಶೈಲಿಯ ಬ್ಯಾಟಿಂಗ್ ಮಾಡಿದ ಕೊಹ್ಲಿ ಆಫ್ರಿಕಾ ಬೌಲರ್ ಗಳನ್ನು ಸುಲಲಿತವಾಗಿ ಎದುರಿಸಿದರು. 315 ಎಸೆತಗಳಿಗೆ ಅಜೇಯ 230 ರನ್ ಗಳಿಸಿದರು.
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ದ್ವಿಶತಕ ಸಚಿನ್ ತೆಂಡೂಲ್ಕರ್ (6) ಹಾಗೂ ವಿರೇಂದ್ರ ಸೆಹ್ವಾಗ್ (6), ರಾಹುಲ್ ದ್ರಾವಿಡ್(5) ಹಾಗೂ ಸುನೀಲ್ ಗವಾಸ್ಕರ್ ಅವರ ದಾಖಲೆಯನ್ನು ಪುಡಿ-ಪುಡಿ ಮಾಡಿದರು. ವಿಶ್ವದಲ್ಲೇ ಏಳು ದ್ವಿಶತಕ ಸಿಡಿಸಿರುವ ವ್ಯಾಲ್ಲಿ ಹ್ಯಾಮೋಂಡ್ ಹಾಗೂ ಮಹೇಲಾ ಜಯವರ್ಧನೆ ಅವರೊಂದಿಗೆ ನಾಲ್ಕನೇ ಸ್ಥಾನವನ್ನು ಕೊಹ್ಲಿ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾ ದಂತಕತೆ ಡಾನ್ ಬ್ರಾಡ್ಮನ್ 12 ದ್ವಿಶತಕ ಸಿಡಿಸಿ ಅಗ್ರ ಸ್ಥಾನದಲ್ಲಿದ್ದರೆ, ಕುಮಾರ ಸಂಗಕ್ಕಾರ 11 ಹಾಗೂ ಬ್ರಿಯನ್ ಲಾರಾ 9 ದ್ವಿಶತಕ ಗಳಿಸಿ ನಂತರದ ಸ್ಥಾನಗಳಲ್ಲಿದ್ದಾರೆ.
ದ್ವಿಶತಕ ಸಿಡಿಸಿ ನೂತನ ದಾಖಲೆ ಮಾಡಿದ ವಿರಾಟ್ ಕೊಹ್ಲಿ ಅವರು ಟೆಸ್ಟ್ ವೃತ್ತಿ ಜೀವನದಲ್ಲಿ 7,000 ರನ್ ಪೂರೈಸಿದರು. ಅತಿ ವೇಗವಾಗಿ 7,000 ರನ್ ದಾಖಲಿಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು. ಕೊಹ್ಲಿ ಈ ಸಾಧನೆ ಮಾಡಲು 138 ಇನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ, ಗ್ಯಾರಿ ಸೋಬರ್ಸ್ ಹಾಗೂ ಕುಮಾರ ಸಂಗಕ್ಕಾರ ಅವರೊಂದಿಗೆ ಕೊಹ್ಲಿ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ. 131 ಇನಿಂಗ್ಸ್ ಗಳಲ್ಲಿ 7,000 ರನ್ ಪೂರೈಸಿರುವ ವ್ಯಾಲ್ಲಿ ಹ್ಯಾಮೋಂಡ್ ಅವರು ಅಗ್ರ ಸ್ಥಾನದಲ್ಲಿದ್ದಾರೆ. ವಿರೇಂದ್ರ ಸೆಹ್ವಾಗ್(134) ಹಾಗೂ ಸಚಿನ್ ತೆಂಡೂಲ್ಕರ್(136) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಒಟ್ಟಾರೆ ಭಾರತ 150 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 551 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದೆ. ಜಡೇಜಾ ಅಜೇಯ 65 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.