ಕಿಂಗ್ ಕೊಹ್ಲಿ ದಾಖಲೆ ಪುಡಿ-ಪುಡಿ ಮಾಡಿದ ಯಶಸ್ವಿ ಜೈಸ್ವಾಲ್

ನವದೆಹಲಿ, ಜ 29 (ಯುಎನ್ಐ) ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಅವರು ವಿಶಿಷ್ಠ ದಾಖಲೆಯೊಂದನ್ನು ಮಾಡಿದ್ದಾರೆ. ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ಗೆಲುವು ಪಡೆಯುವ ಮೂಲಕ ಪ್ರಿಯಮ್ ಗರ್ಗ್ ಪಡೆ ಎರಡು ವಿಶಿಷ್ಠ ದಾಖಲೆಗಳನ್ನು ಬರೆಯಿತು. ಇದರ ಜತೆ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್ ಕೂಡ ಮಹತ್ವದ ದಾಖಲೆಯೊಂದನ್ನು ಬರೆದರು. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.

ಯಶಸ್ವಿ ಜೈಸ್ವಾಲ್ 25 ಯುವ ಏಕದಿನ ಇನಿಂಗ್ಸ್‌ ನಲ್ಲಿ 62.78 ಸರಾಸರಿಯಲ್ಲಿ 1,193 ರನ್ ಕಲೆಹಾಕುವ ಮೂಲಕ ರನ್ ಮಶೀನ್ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ವಿರಾಟ್, 25 ಯುವ ಏಕದಿನ ಇನಿಂಗ್ಸ್ ನಲ್ಲಿ  978 ರನ್ ಗಳಿಸಿ ಇದೀಗ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಮಂಗಳವಾರದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಅದ್ಭುತ ಬ್ಯಾಟಿಂಗ್‌ ಮಾಡಿದ ಯಶಸ್ವಿ ಜೈಸ್ವಾಲ್ ಅವರು 82 ಎಸೆತಗಳಲ್ಲಿ 6 ಬೌಂಡರಿ ಮತ್ತು ಎರಡು ಸಿಕ್ಸರ್‌ ಸಹಿತ 62 ರನ್‌ಗಳನ್ನು ಗಳಿಸಿದ್ದರು. ಇವರ ಮಹತ್ವದ ಅರ್ಧಶತಕದ ನೆರವಿನಿಂದ ಭಾರತ 200 ಗಡಿ ದಾಟಲು ಸಾಧ್ಯವಾಗಿತ್ತು. ಒಟ್ಟಾರೆ, ಆಸ್ಟ್ರೇಲಿಯಾ ತಂಡಕ್ಕೆ 234 ರನ್ ಗುರಿ ನೀಡಲಾಗಿತ್ತು.

ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ 42.4 ಓವರ್‌ಗಳಲ್ಲಿ 157ಕ್ಕೆ ಆಲ್‌ಔಟ್‌ ಆಗುವ ಮೂಲಕ 74 ರನ್‌ಗಳಿಂದ ಸೋಲು ಅನುಭವಿಸಿ ಗಂಟು ಮೂಟೆ ಕಟ್ಟಿತು. ಕಾಂಗರೂ ಬ್ಯಾಟ್ಸ್‌ಮನ್‌ಗಳ ಹೆಡೆಮುರಿಕಟ್ಟಿದ ಕಾರ್ತಿಕ್‌, 7.4 ಓವರ್‌ಗಳಲ್ಲಿ 24 ರನ್‌ ನೀಡಿ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಸ್ಪಿನ್ನರ್‌ ಆಕಾಶ್‌ ಸಿಂಗ್‌ 30ಕ್ಕೆ 3 ವಿಕೆಟ್‌ ಪಡೆದು ಉತ್ತಮ ಸಾಥ್‌ ನೀಡಿದರು. ರವಿ ಬಿಷ್ಣೋಯ್‌ 26ಕ್ಕೆ 1 ವಿಕೆಟ್‌ ಗಿಟ್ಟಿಸಿದರು.