ನವದೆಹಲಿ, ಆ 10 ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಿದ್ದು ಇಂದು ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ಅವರ ಉತ್ತರಾಧಿಕಾರಿ ಆಯ್ಕೆ ನಡೆಯಲಿದೆ.
ಲಭ್ಯವಿರುವ ಖಚಿತ ಮಾಹಿತಿಯ ಪ್ರಕಾರ ಮುಕುಲ್ ವಾಸ್ನಿಕ್, ಸಚಿನ್ ಪೈಲಟ್, ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರುಗಳ ಪೈಕಿ ಒಬ್ಬರು ನೂತನ ಕಾಂಗ್ರೆಸ್ ಅಧ್ಯಕ್ಷರಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.
ಇಂದು ನೂತನ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂಬಂಧ ಹಿರಿಯ ನಾಯಕರಾದ ಮನ್ಮೋಹನ್ ಸಿಂಗ್, ಎ.ಕೆ.ಆಂಟನಿ ಮತ್ತು ಗುಲಾಂ ನಬಿ ಆಜಾದ್ ಅವರುಗಳು ಹೊಸ ಅಧ್ಯಕ್ಷರ ಆಯ್ಕೆ ಮತ್ತು ಪಕ್ಷದ ಸಂಘಟನೆ ಮತ್ತಿತರ ವಿಷಯಗಳ ಬಗ್ಗೆ ದೀರ್ಘ ಸಮಾಲೋಚನೆ ನಡೆಸಲಿದ್ದಾರೆ. ಇನ್ನೊಂದು ಕಡೆ ಈ ಹುದ್ದೆಯನ್ನು ಯುವನಾಯಕರಿಗೆ ಕಟ್ಟಬೇಕೆಂಬ ಒತ್ತಡವೂ ಪಕ್ಷದ ನಾಯಕರಲ್ಲಿ ಪ್ರಬಲವಾಗಿ ಕೇಳಿ ಬರುತ್ತಿದೆ.
ಈ ನಡುವೆ ಪಕ್ಷಕ್ಕೆ ಕಡೆಪಕ್ಷ ಹಂಗಾಮಿ ಅಧ್ಯಕ್ಷರನ್ನಾದರೂ ನೇಮಕ ಮಾಡಬೇಕೆಂದು ಸಂಸದ ಶಶಿ ತರೂರ್, ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ ಅವರುಗಳು ಒತ್ತಾಯ ಮಾಡಿದ್ದಾರೆ.
ಇದಕ್ಕೂ ಮುನ್ನ ಈ ಹುದ್ದೆಯನ್ನು ಪಕ್ಷದ ಯುವ ನಾಯಕರಿಗೆ ಕಟ್ಟಬೇಕು ಎಂದು ಪಂಜಾಬ್ ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಶಶಿ ತರೂರ್, ಮಿಲಿಂದಾ ದಿಯೋರಾ ಮೊದಲಾದ ನಾಯಕರು ಪ್ರಬಲ ಒತ್ತಡ ಹಾಕಿದ್ದರು.
ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಕಳೆದ ಮೇ 25 ರಂದು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಆದರೆ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ತಿರಸ್ಕರಿಸಿತ್ತು. ಈ ನಡುವೆ ರಾಹುಲ್ ಗಾಂಧಿ ಅವರ ರಾಜೀನಾಮೆ ವಿರೋಧಿಸಿ ಕೆಲವು ನಾಯಕರು ತಾವೂ ಸಹ ರಾಜೀನಾಮೆ ನೀಡುವುದಾಗಿ ಹೇಳಿ ರಾಹುಲ್ ಅವರು ರಾಜೀನಾಮೆ ವಾಪಸ್ ಪಡೆದು ಹಾಲಿ ಹುದ್ದೆಯಲ್ಲಿ ಮುಂದುವರಿಯಬೇಕು ಎಂದು ನಾಯಕರು ಆಗ್ರಹಿಸಿದ್ದರು.
ಆದರೆ ಸೋಲಿನ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ, ರಾಜೀನಾಮೆ ತೀರ್ಮಾನ ಅಚಲವಾಗಿದೆ. ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ರಾಹುಲ್ ಗಾಂಧಿ ಬಿಗಿಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎನ್ನಲಾಗಿದೆ
ಮುಕುಲ್ ವಾಸ್ನಿಕ್, ಸಚಿನ್ ಪೈಲಟ್ ಹಾಗೂ ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಪೈಕಿ ಯಾರಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಈ ನಡುವೆ ಈ ಹುದ್ದೆಯನ್ನು ಅಲಂಕರಿಸಲು ಸಿದ್ಧಳಿಲ್ಲ ಎಂದು ಪ್ರಿಯಾಂಕಾ ವಾದ್ರಾ ಪಕ್ಷದ ನಾಯಕರ ಕೋರಿಕೆಯನ್ನು ನಯವಾಗಿಯೇ ತಿರಸ್ಕರಿಸಿದ್ದರು. ಪ್ರಿಯಾಂಕಾ ಹುದ್ದೆ ಅಲಂಕರಿಸಿದರೆ ಪಕ್ಷಕ್ಕೆ ಹೆಚ್ಚಿನ ಗೌರವ ಮೂಡಲಿದೆ ಮತ್ತು ಸಂಘಟನೆಗೂ ಅನುಕೂಲವಾಗಲಿದೆ ಎಂಬ ಕೂಗು ಹಿರಿಯ ಮತ್ತು ಕಿರಿಯ ನಾಯಕರಲ್ಲಿ ಕೇಳಿ ಬಂದಿತ್ತು. ಈ ಎಲ್ಲ ಬೆಳವಣಿಗೆಗೆಳ ಹಿನ್ನೆಲೆಯಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರೂ ಈ ಹುದ್ದೆಯನ್ನು ಅಲಂಕರಿಸಲು ಸಿದ್ಧರಿಲ್ಲದ ಕಾರಣ ಹೊಸ ಅಧ್ಯಕ್ಷರ ಆಯ್ಕೆ ಅನಿವಾರ್ಯವಾಗಿದೆ.