ಕೆವ್ಹಿಜಿ ಬ್ಯಾಂಕ್ ಆಡಳಿತ ವೈಖರಿ ಖಂಡಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಬೈಲಹೊಂಗಲ 04: ಇಲ್ಲಿಯ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನ ಸಿಬ್ಬಂದಿಗಳ ವರ್ತನೆ ಖಂಡಿಸಿ ಗ್ರಾಹಕರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಬ್ಯಾಂಕಿಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

    ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನಲ್ಲಿ ಕೂಡಿಟ್ಟಿರುವ ಹಣ ಪಡೆಯಲು ಗ್ರಾಹಕರು ಪದೇ, ಪದೇ ಅಲೆಯುವಂತಾಗಿದೆ. ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರುವ ಆಂದ್ರ ಮೂಲದ ಸಿಬ್ಬಂದಿಗಳಿಂದ ಗ್ರಾಹಕರು ದಿನನಿತ್ಯ ಹಿಂಸೆ ಅನುಭವಿಸುವಂತಾಗಿದೆ. ಕಷ್ಟಪಟ್ಟು ದುಡಿದು ಕೂಡಿಟ್ಟಿರುವ ಹಣವನ್ನು ಸಕಾಲಕ್ಕೆ ಬಳಸಿಕೊಳ್ಳಲು ಪರದಾಡುವಂತಾಗಿದೆ. ಕ್ಯಾಶಿಯರ್ ಸುರೇಶ ಬಾಬು ಗ್ರಾಹಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ರೈತರು, ಕೃಷಿ, ಕೂಲಿ ಕಾರ್ಮಿಕರು ಯಾರೇ ಹೋದರು ಏರು ಧ್ವನಿಯಲ್ಲಿ ಮಾತನಾಡಿ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ವಕೀಲ ಎಫ್.ಎಸ್.ಸಿದ್ಧನಗೌಡರ ಮಾತನಾಡಿ, ರೈತರ ಹಿತಕ್ಕಾಗಿ ಆರಂಭವಾದ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನಲ್ಲಿ ರೈತರ ಮೇಲಿಯೇ ದಬ್ಬಾಳಿಕೆ ನಡೆಸಲಾಗುತ್ತಿದೆ. ಒಬ್ಬ ಆಂದ್ರ ಸಿಬ್ಬಂದಿ ತಪ್ಪುಗಳ ಬಗ್ಗೆ ಪ್ರಶ್ನೇ ಮಾಡಿದರೆ ಉಳಿದ ಆಂದ್ರ ಸಿಬ್ಬಂದಿ ಒಗ್ಗಟ್ಟಾಗಿ ಸೇರಿ ಗ್ರಾಹಕರ ಮೇಲೆ ಮುಗಿ ಬಿಳುತ್ತಿದ್ದಾರೆ. ಉಳಿದೆಲ್ಲ ಕನ್ನಡ ಸಿಬ್ಬಂದಿ ತಮಗೆ ಸಂಬಂಧವಿಲ್ಲದ ರೀತಿಯಲ್ಲಿ ಕುಳಿತಿರುತ್ತಾರೆ. ಇದನ್ನೆಲ್ಲ ಗಮನಿಸಿದರೆ ಕೆವ್ಹಿಜಿ ಬ್ಯಾಂಕ್ ಕರ್ನಾಟಕದಲ್ಲಿದೆಯೋ, ಆಂದ್ರದಲ್ಲಿದೆಯೋ ಎಂಬ ದುಗುಡ ಮನೆ ಮಾಡಿದೆ. ಕೂಡಲೇ ಮೇಲಾಧಿಕಾರಿಗಳು ಬ್ಯಾಂಕ್ ಸಿಬ್ಬಂದಿ ದೌರ್ಜನ್ಯ ಸರಿಪಡಿಸಿ ಗ್ರಾಹಕರಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು. ಇಲ್ಲವಾದರೆ ಬ್ಯಾಂಕ್ನ್ನು ಸಂಪೂರ್ಣವಾಗಿ ಮುಚ್ಚಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಕರವೇ ಜಿಲ್ಲಾ ಸಂಚಾಲಕ ಶಿವು ಕೋಲಕಾರ ಮಾತನಾಡಿ, ಕರ್ನಾಟಕ ಸರ್ಕಾರದ ಆಧಿನದಲ್ಲಿರುವ ಬ್ಯಾಂಕು ಗ್ರಾಮೀಣ ಮಟ್ಟದಲ್ಲಿ ಹೆಚ್ಚಾಗಿ ಶಾಖೆಗಳಿರುವುದರಿಂದ ಸ್ಥಳೀಯ ಕನ್ನಡಿಗ ಸಿಬ್ಬಂದಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು. ಪಕ್ಕದ ಆಂಧ್ರ ಭಾಷಿಕರು ಬ್ಯಾಂಕಿನಲ್ಲಿ ಕನ್ನಡ ಭಾಷೆ ಬಾರದಿರುವುದರಿಂದ ಗ್ರಾಹಕರೊಂದಿಗೆ ಸಂಹವರಿಸಲು ತೀವ್ರ ತೊಂದರೆಯಾಗುತ್ತಿದೆ. ಅಂತವರಿಗೆ ಕನ್ನಡ ಮಾತನಾಡಲು ತಿಳಿಸಿ ಗ್ರಾಹಕರಿಗೆ ತೊಂದರೆ ಕೊಡದೆ ನೋಡಿಕೊಳ್ಳಬೇಕು ಎಂದರು. 

  ಗ್ರಾಹಕ ಮಂಜುನಾಥ ಜ್ಯೋತಿ, ಸಚಿನ ಬೊಂಗಾಳೆ ಮಾತನಾಡಿ, ಬ್ಯಾಂಕಿಗೆ ಬಂದು ಖಾತೆಯಲ್ಲಿರುವ ಹಣ ಪಡೆಯಬೇಕೆಂದರೆ ಕ್ಯಾಶೀಯರ್, ಸಿಬ್ಬಂದಿ ಹಣವಿಲ್ಲ ನಾಳೆ, ನಾಡಿದ್ದು ಬನ್ನಿ ಎಂದು ಒಂದುವಾರ, ತಿಂಗಳು ಗಟ್ಟಲೆ ಬ್ಯಾಂಕಿಗೆ ಅಲೆಯುವಂತೆ ಮಾಡುತ್ತಿದ್ದಾರೆ. ಇದರಿಂದ ಗ್ರಾಹಕರು ರೋಸಿ ಹೋಗಿದ್ದಾರೆ. 

ಒಬ್ಬ ಗ್ರಾಹಕರಿಗೆ ಮಾತ್ರ 5 ಸಾವಿರ ನೀಡಲಾಗುತ್ತಿದೆ. ಉಳದವರು ಬರಿಗೈಯಲ್ಲಿ ಮನೆಗೆ ಹಿಂತಿರುಗುವಂತಾಗಿದೆ. ಬ್ಯಾಂಕಿಗೆ ಸಂಬಂಧಪಟ್ಟ ಪ್ರತಿಯೊಂದು ಅರ್ಜಿಗಳನ್ನು ಗ್ರಾಹಕರಿಂದ ಝರಾಕ್ಸ್ ಮಾಡಿಸಿಕೊಂಡು ತರಿಸಿಕೊಳ್ಳಲಾಗುತ್ತಿದೆ. ಅದರ ಹಣವನ್ನು ಗ್ರಾಹಕರೇ ಭರಿಸಬೇಕಾಗಿದೆ. 

ರೈತರು, ಬಡ, ಕೃಷಿ, ಕೂಲಿ ಕಾರ್ಮಿಕರೊಂದಿಗೆ ಸಿಬ್ಬಂದಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ಮ್ಯಾನೇಜರ ಗ್ರಾಹಕರ ತೊಂದರೆಗಳನ್ನು ಆಲಿಸದೆ ಬ್ಯಾಂಕಿನಲ್ಲಿ ಏನೇ ವಾಗ್ವಾದ ನಡೆಯುತ್ತಿದ್ದರೂ ನೋಡಿಯೂ ನೋಡದಂತೆ, ಕೇಳಿಯೂ ಕೇಳಿಸದಂತೆ ತಮ್ಮಗೆ ಸಂಬಂಧವಿಲ್ಲದ ರೀತಿಯಲ್ಲಿ ಕುಳಿತಿರುತ್ತಾರೆ ಎಂದು ಆರೋಪಿಸಿದರು.

     ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕ ಅಧ್ಯಕ್ಷ ವಿಠ್ಠಲ ಹಂಪಿಹೊಳಿ, ಶ್ರೀಶೈಲ ಹಂಪಿಹೊಳಿ, ಸಣ್ಣಮಡಿವಾಳಪ್ಪ ಹೋಟಿ, ಬಸವರಾಜ ದೊಡಮನಿ, ಬಸವರಾಜ ತಿಗಡಿ, ರವಿ ವನ್ನೂರ, ಪ್ರಕಾಶ ಹೋಟಿ, ರಾಜು ಬೋಳನ್ನವರ, ಚೇತನ ಪೂಜೇರ, ಫಾರುಕ್ ಮುಲ್ಲಾ, ಮಲ್ಲಿಕಾರ್ಜುನ ಹುಬ್ಬಳ್ಳಿ, ಅಜಯ ದೊಡವಾಡ, ರಫೀಕ ವನ್ನೂರ, ಅಭಿಷೇಕ ಹರಕುಣಿ, ಮಂಜುನಾಥ ಹೊಂಗಲ, ಈರಣ್ಣಾ ನಾಗನೂರ, ಚೇತನ ಜಂಬಗಿ ಹಾಗೂ ಅನೇಕರು ಇದ್ದರು. ಶಾಖಾ ವ್ಯವಸ್ಥಾಪಕ ಮಹಾಲೆ ಮನವಿ ಸ್ವೀಕರಿಸಿ ಇನ್ಮೂಂದೆ ಗ್ರಾಹಕರಿಗೆ ತೊಂದರೆ ಆಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.