ತಿರುವಂತಪುರಂ, ಆಗಸ್ಟ್ 12 ದೇವರ ನಾಡಿನಲ್ಲಿ ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದ ಮೃತಪಟ್ಟವರ ಸಂಖ್ಯೆ 78 ಕ್ಕೆ ಏರಿಕೆಯಾಗಿದೆ. ಇದುವರೆಗೆ 58 ಮಂದಿ ಕಾಣೆಯಾಗಿದ್ದಾರೆ.ಪರಿಹಾರ ಕಾರ್ಯಾಚರಣೆಯೇ ರಾಜ್ಯ ಸರಕಾರಕ್ಕೆ ದೊಡ್ಡ ತಲೆನೋವಾಗಿದೆ.
ಆದರೆ ಮುಂದಿನ ಎರಡು ಮೂರು ದಿನ ಮತ್ತೆ ಮಳೆಯ ಕಾಟ ಎದುರಾಗಲಿದೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆ ಆತಂಕಕ್ಕೆ ಕಾರಣವಾಗಿದೆ.
ಈಗ ಸದ್ಯ ಮಳೆಯ ಆರ್ಭಟವೆನೋ ಕಡಿಮೆಯಾಗುತ್ತಿದೆ ಆದರೆ ಪರಿಹಾರ ಕಾರ್ಯಾಚರಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.ಸುಮಾರು ಮೂರು ಲಕ್ಷ ಜನರಿಗೆ ಪರಿಹಾರ ಮತ್ತು ಪುನವರ್ಸತಿ ಕಲ್ಪಿಸುವುದೇ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮಳೆ ಮತ್ತು ಪ್ರವಾಹದಿಂದ ಸಿಕ್ಕಿಕೊಂಡಿರುವ ಜನರು ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಮನೆ ಮಠ ತಮ್ಮ ಸಾಕು ಪ್ರಾಣಿ, ಜಾನುವಾರುಗಳನ್ನು ಕಳೆದುಕೊಂಡು ಕೆಲವರು ಬೀದಿಯಲ್ಲಿ ನಿಂತಿದ್ದಾರೆ. ಹೀಗಾಗಿ ಕೆಲವರು ಬಕ್ರೀದ್ ಹಬ್ಬ ಆಚರಿಸಲು ನಿರಾಕರಿಸಿದ್ದಾರೆ.
ರಾಜ್ಯದ ಜನತೆ ತುತ್ತು ಅನ್ನಕ್ಕಾಗಿ ಪರದಾಡುತ್ತಿರುವಾಗ ಮತ್ತು ಮನೆ ಮಠ ಕಳೆದುಕೊಂಡಿರುವಾಗ ಬಕ್ರೀದ್ ಹಬ್ಬ ಆಚರಿಸಲು ಹೇಗೆ ತಾನೆ ಸಾಧ್ಯ ಎಂದು ಅನೇಕ ಮುಸ್ಲಿಂ ಸಮುದಾಯದ ಜನರು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಂಡಿದ್ದಾರೆ.
ಕಳೆದ ವರ್ಷ ಸುರಿದ ಧಾರಾಕಾರ ಮಳೆ, ಭೂಕುಸಿತ ಮತ್ತು ಇತರೆ ನೈಸರ್ಗಿಕ ಹಾನಿಯಿಂದ 400 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿತ್ತು . ಅದರ ಕರಾಳ ನೆನಪು ಮಾಸುವ ಮೊದಲೇ ದೇವರನಾಡಿಗೆ ಮತ್ತೆ ಜಲಕಂಠಕ ಎದುರಾಗಿದೆ.