ನವದೆಹಲಿ, ಜ 29 : ದೆಹಲಿ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ವಿರುದ್ಧ ಕಿಡಿಕಾರಿರುವ ಬಿಜೆಪಿ ಸಂಸದ ಪರ್ವೇಶ್ ವರ್ಮಾ, ಅವರನ್ನು ಉಗ್ರಗಾಮಿ ಹಾಗೂ ನಕ್ಸಲ್ ಎಂದು ಕರೆದಿದ್ದಾರೆ.
ನಕ್ಸಲರು ಹಾಗೂ ಉಗ್ರಗಾಮಿಗಳು ಸರ್ಕಾರಿ ಆಸ್ತಿಯನ್ನು ಹಾಳುಗೆಡವಿದ ಮಾದರಿಯಲ್ಲೇ ಸಿಎಂ ಕೇಜ್ರೀವಾಲ್ ಕೆಲಸ ಮಾಡುತ್ತಿದ್ದಾರೆ ಎಂದು ಪರ್ವೇಶ್ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಇದರ ಜೊತೆಗೆ ಮಂಗಳವಾರ, ಶಹೀನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು 'ಅತ್ಯಾಚಾರಿಗಳು ಮತ್ತು ಕೊಲೆಗಡುಕರು' ಎಂಬ ಹೇಳಿಕೆ ನೀಡಿ ವರ್ಮಾ ವಿವಾದಕ್ಕೀಡಾಗಿದ್ದರು.
ಬುಧವಾರ ವರ್ಮಾ, 'ಕೇವಲ ಉಗ್ರಗಾಮಿಗಳು ಮತ್ತು ನಕ್ಸಲರು ಮಾತ್ರ ದೇಶಕ್ಕೆ ಹಾನಿ ಮಾಡಿ, ರಸ್ತೆಗಳು ಹಾಗೂ ಇತರ ಸರ್ಕಾರ ಆಸ್ತಿಗಳಿಗೆ ಹಾನಿಯುಂಟು ಮಾಡುತ್ತಾರೆ. ಅರವಿಂದ ಕೇಜ್ರೀವಾಲ್ ಕೂಡ ಅದನ್ನೇ ಮಾಡುತ್ತಿದ್ದಾರೆ' ಎಂದು ಹೇಳಿಕೆ ನೀಡಿದ್ದರು.
ಜೊತೆಗೆ, ತಮಗೆ ಅನಾಮಿಕ ಬೆದರಿಕೆ ಕರೆ ಬಂದಿರುವುದಾಗಿ ಹೇಳಿಕೆ ನೀಡಿರುವ ವರ್ಮಾ, ಈ ಕುರಿತು ಪೊಲೀಸರಿಗೆ ದೂರು ನೀಡುವುದಾಗಿ ಕೂಡ ತಿಳಿಸಿದ್ದಾರೆ.