ಮಂಡ್ಯ, ನ. 29 -ನಾನು ಸುಮ್ಮನೆ ಕುಳಿದುಕೊಳ್ಳುವ ವ್ಯಕ್ತಿಯಲ್ಲ, ಜೀವನದಲ್ಲಿ ಇನ್ನೂ ಹೋರಾಟ ಮುಂದುವರಿಸುತ್ತೇನೆ ಎಂದು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ತಿಳಿಸಿದ್ದಾರೆ.
ಕೆ ಆರ್ ಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಆನೆಗೊಳದ ರೋಡ್ ಶೋ ನಲ್ಲಿ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ತುಳಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜ್ಯದ ನೀರಾವರಿ ವಿಚಾರದಲ್ಲಿಯೂ ಎರಡೂ ಪಕ್ಷಗಳು ನಿರ್ಲಕ್ಷ್ಯ ತೋರಿವೆ. 2016 ರಲ್ಲಿ ಕಾವೇರಿ ವಿಚಾರದಲ್ಲಿ ಇದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ತಜ್ಞರು ಮನೆಗೆ ಬಂದು ನಿಮ್ಮ ಸಲಹೆ ಬೇಕು ಬನ್ನಿ ಹೋರಾಟಕ್ಕೆ ಎಂದಿದ್ದರು.
1999 ರಲ್ಲಿ ದೇವೇಗೌಡ ಅವರ ಕಥೆ ಮುಗಿಯಿತು. ಇನ್ನೇನಿದರೂ ಬಂದು ಹೊಲದ ಕಡೆ ಇರಬೇಕು ಎಂದು ನನ್ನ ಸಂಬಂಧಿಕರೇ ಮಾತನಾಡಿದರು ಎಂದು ಸ್ಮರಿಸಿಕೊಂಡ ಅವರು, ರಾಜ್ಯದ ರೈತರ ಪರ ಹೋರಾಟ ಮಾಡುವ ಕೆಚ್ಚಿದೆ. ತಮ್ಮಲ್ಲಿ ಇನ್ನೂ ಶಕ್ತಿ ಇದ್ದು, ಹೋರಾಟ ಮಾಡುವುದಾಗಿ ಅವರು ತಿಳಿಸಿದರು.
ಜೆಡಿಎಸ್ ಅಭ್ಯರ್ಥಿ ದೇವರಾಜ್‌ಗೆ ಕೊಡುವ ಒಂದೊಂದು ಓಟು ತುಮಕೂರಿನಲ್ಲಿ ಸೋತ ದೇವೇಗೌಡನಿಗೆ ಕೊಡುವ ಓಟು. ದಯಮಾಡಿ ದೇವರಾಜ್ ಅವರನ್ನು ಗೆಲ್ಲಿಸಿಕೊಡಿ ಎಂದು ಅವರು ಮತದಾರರಲ್ಲಿ ವಿನಂತಿಸಿದರು.
ನಾನು ಸೋತರೂ ಪ್ರಚಾರಕ್ಕೆ ಬಂದು ಮತ ಕೇಳುತ್ತೇನೆ. ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವ ವ್ಯಕ್ತಿ ನಾನಲ್ಲ. ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.
ಹಳ್ಳಿ ಹಳ್ಳಿ ಸುತ್ತಿ ಮಾಜಿ ಸ್ಪೀಕರ್ ಕೃಷ್ಣ ಅವರನ್ನು ಗೆಲ್ಲಿಸಿದೆ. ಅಂದು ಮುಂಬರುವ ಲೋಕಸಭೆಗೆ ನಿಮ್ಮನ್ನು ನಿಲ್ಲಿಸುತ್ತೇನೆ, ದೇವರಾಜುಗೆ ಟಿಕೆಟ್ ಕೊಡುವುದಾಗಿ ಹೇಳಿದ್ದೆ. ನಾನು ಎಲ್ಲಿ ಹೋದರೂ ಅಲ್ಲಿಗೆ ದೇವರಾಜ್ ಬಂದಿದ್ದಾನೆ ಎಂದರು.
ಅವರೊಬ್ಬನಿಷ್ಠಾವಂತ ಕಾರ್ಯಕರ್ತ. ಆತನ ಮನೆಯಲ್ಲೇ ನಾನು ಊಟ ಮಾಡಿದ್ದೇನೆ. ದೇವರಾಜ್ ಗಡಸಾಗಿ ಮಾತನಾಡುವುದಿಲ್ಲ. ಮೃದು ಸ್ವಭಾವದವರು. ಮನುಷ್ಯನ ಪ್ರತಿಭೆ ಆ ಸ್ಥಾನದಲ್ಲಿ ಕೂರಿಸಿದಾಗ ಪ್ರತಿಭೆ ಹೊರ ಬರುತ್ತದೆ ಎಂದರು.
ದೇವರಾಜ್ ಶಾಸಕರಾಗಬೇಕು ಎಂಬುದು ನನ್ನ ಆಸೆ.ಹೀಗಾಗಿ ಆತನಿಗೆ ಮತ ನೀಡಿ ಗೆಲ್ಲಿಸಿ ಎಂದು ವಿನಂತಿಸಿದರು.