ಜಂತುಹುಳು ನಿವಾರಣಾ ಮಾತ್ರೆಯಿಂದ ಸೋಂಕು ಮುಕ್ತರನ್ನಾಗಿಸಿ

ಹಾವೇರಿ01:     ಒಂದರಿಂದ 19 ವರ್ಷದೊಳಗಿನ ಮಕ್ಕಳನ್ನು ಜಂತುಹುಳು ಸೋಂಕು ಮುಕ್ತರನ್ನಾಗಿ ಮಾಡಲು  ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವಾದ ಫೆ.10 ರಂದು ಜಂತುಹುಳು ನಿವಾರಣಾ ಮಾತ್ರೆಯನ್ನು ತಪ್ಪದೇ ಕೊಡಿಸಬೇಕು. ಜಂತು ಹುಳು ಮುಕ್ತಮಕ್ಕಳು ಆರೋಗ್ಯವಂತ ಮಕ್ಕಳಾಗಿರುತ್ತಾರೆ.

ಜಂತುಹುಳು 1 ರಿಂದ 19 ವರ್ಷದ ಮಕ್ಕಳು ಕರುಳಿನ ಹುಳುಗಳ ಸೋಂಕಿನಿಂದ ಬಳಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ಮಣ್ಣಿನಿಂದ ಹರಡುವ ಸೋಂಕಾಗಿದೆ. ಸ್ವಚ್ಚತೆಯಿಲ್ಲದಿರುವುದು, ಅನೈರ್ಮಲ್ಯ ಮತ್ತು ಕೊಳಚೆ ಪ್ರದೇಶಗಳಲ್ಲಿ ಈ ಸೋಂಕು ಹರಡುತ್ತದೆ. ಕೊಕ್ಕೆಹುಳು, ಚಾಟಿ ಹುಳು ಮತ್ತು ದುಂಡು ಹಳುಗಳು ಸೇರಿದಂತೆ ಜಂತುಹುಳಗಳಲ್ಲಿ ಮೂರು ವಿಧಗಳಿವೆ.

ಜಂತುಹುಳುವಿನಿಂದಾಗುವ ಪರಿಣಾಮಗಳು: ಜಂತುಹುಳುವಿನಿಂದ ರಕ್ತಹೀನತೆ, ಅಪೌಷ್ಠಿಕತೆ ಬಳಲುವಿಕೆ, ವ್ಯಕ್ತಿಯ ಬೌದ್ಧಿಕ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. 

ಮುನ್ನೆಚ್ಚರೀಕಾ ಕ್ರಮಗಳು : ಮನೆಯ ಸುತ್ತಲೂ ನೈರ್ಮಲ್ಯ ಕಾಪಾಡುವುದು, ಸುತ್ತಮುತ್ತಲಿನ ಪರಿಸರದ ಸ್ವಚ್ಚತೆಯಿಂದ ಕೂಡಿರುವಂತೆ ನೋಡಿಕೊಳ್ಳುವುದು. ಶುದ್ಧ ನೀರಿನ ಸೇವನೆ, ಮುಚ್ಚಿಟ್ಟ ಆಹಾರ ಬಳಸಬೇಕು, ಹಣ್ಣು ಮತ್ತು ತರಕಾರಿಗಳನ್ನು ಸ್ವಚ್ಛವಾದ ನೀರಿನಿಂದ ತೊಳೆದು ಸೇವಿಸಬೇಕು. ಕೈಗಳ ಉಗುರುಗಳನ್ನು ಕತ್ತರಿಸಬೇಕು,  ಪಾದರಕ್ಷೆ ಧರಿಸಿ ಹೊರಗಡೆ ಓಡಾಡಬೇಕು, ಶೌಚಾಲಯದಲ್ಲೇ ಶೌಚ ಮಾಡುವುದು, ಶೌಚದ ಬಳಿಕ ಸಾಬೂನುಗಳಿಂದ ಕೈಕಾಲು ತೊಳೆಯುವುದು ಈ ರೀತಿಯಾಗಿ ಜಂತುಹುಳು ಸೋಂಕನ್ನು ತಡೆಗಟ್ಟಬಹುದು. 

ಜಂತುಹುಳು ನಿವಾರಣಾ ಮಾತ್ರೆ ಸಂಪೂರ್ಣ ಸುರಕ್ಷಿತ: ಜಂತುಹುಳು ನಿವಾರಣಾ ಮಾತ್ರೆಯು (ಅಲ್ಬೆಂಡಾಜೋಲ್ 400 ಎಂ.ಜಿ.) ಉಚಿತವಾಗಿ ದೊರೆಯುತ್ತದೆ. 1 ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೇ ಮಾತ್ರೆಯನ್ನು ನೀಡಬೇಕು. ಮಾತ್ರೆಯು ಮಕ್ಕಳಿಗೆ ಹಾಗೂ ವಯಸ್ಕರಿಅಗೆ ಸಂಪೂರ್ಣ ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ. ಅಲ್ಬೆಂಡಾಜೋಲ್ 400 ಎಂ.ಜಿ. ಮಾತ್ರೆಯನ್ನು 1 ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಮಾತ್ರೆ ಹಾಗೂ 2 ರಿಂದ 19 ವರ್ಷದ ಎಲ್ಲ ಮಕ್ಕಳಿಗೂ ಪೂರ್ಣ ಪ್ರಮಾಣದ ಮಾತ್ರೆಯನ್ನು ತಿನ್ನಿಸಬೇಕು.

ಮಾತ್ರೆಯಿಂದ ಆಗುವ ಉಪಯೋಗಗಳು: 

ಮಕ್ಕಳಲ್ಲಿ ಆಗುವ ರಕ್ತ ಹೀನತೆಯನ್ನು ನಿಯಂತ್ರಿಸುತ್ತದೆ. ಪೌಷ್ಟಿಕಾಂಶದ ಕೊರತೆಯನ್ನು ನಿವಾರಿಸುತ್ತದೆ. ಮಕ್ಕಳ ಏಕಾಗ್ರತೆ ಹೆಚ್ಚಿಸುತ್ತದೆ. ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ವೃದ್ಧಿಯಾಗುತ್ತದೆ. 

5,60,794 ಮಕ್ಕಳ ಗುರಿ: 

 ಈ ವರ್ಷದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವಾದ ಫೆಬ್ರುವರಿ 10 ಮತ್ತು  ಮಾಫ್ ಅಪ್ ದಿನ ಪೆಬ್ರುವರಿ 17 ರಂದು ಜಿಲ್ಲೆಯಲ್ಲಿ ಏಳು ತಾಲೂಕಿನ  1 ರಿಂದ 19 ವರ್ಷದೊಳಗಿನ ಒಟ್ಟು 5,60,794 ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ನೀಡಲು ಗುರಿಹಾಕಿಕೊಳ್ಳಲಾಗಿದೆ.

ಜಿಲ್ಲೆಯ ಶೇ 99 ರಷ್ಟು ಸಾಧನೆ  : ಕಳೆದ ವರ್ಷದ ಸಪ್ಟಂಬರ್ 2019 ರ ತಿಂಗಳಿನ ಜಂತುಹುಳು ನಿವಾರಣಾ ದಿನದಂದು ಜಿಲ್ಲೆಯು ಶೇ 99 ರಷ್ಟು ಸಾಧನೆಮಾಡಿದೆ. ಜಿಲ್ಲೆಯಲ್ಲಿ 4,64,297 ಮಕ್ಕಳು ಜಂತುಹುಳು ಮುಕ್ತರಾಗಿದ್ದಾರೆ. 1 ರಿಂದ 19 ವರ್ಷದೊಳಗಿನ 4,72,294 ಮಕ್ಕಳ ಗುರಿಯನ್ನು ಹಾಕಿಕೊಳ್ಳಲಾಗಿತ್ತು.

    1 ರಿಂದ 12 ನೇ ತರಗತಿ ದಾಖಲಾದ 323083 ಶಾಲಾ ಮಕ್ಕಳು, 1 ರಿಂದ 5 ವರ್ಷದೊಳಗಿನ ಅಂಗನವಾಡಿಗಳಲ್ಲಿ ನೊಂದಾಯಿತ 1,22,410 ಮಕ್ಕಳು, ಅಂಗನವಾಡಿಗಳಲ್ಲಿ ನೋಂದಾಯಿಸಲ್ಪಡದ 1 ರಿಂದ 5 ವರ್ಷದೊಳಗಿನ 1143 ಮಕ್ಕಳು, ಶಾಲೆಯಿಂದ ಹೊರಗುಳಿದ  6 ರಿಂದ 19 ವರ್ಷದೊಳಗಿನ 17,661 ಮಕ್ಕಳು ಜಂತುಹುಳು ಸೋಂಕು ಮುಕ್ತರಾಗಿದ್ದಾರೆ. 

     ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಜಿಲ್ಲಾಡಳಿತ ಭವನ-ದೇವಗಿರಿ (ದೂರವಾಣಿ ಸಂಖ್ಯೆ-08375-249127, 9449843054) ಸಂಪಕರ್ಿಸಿ ಮಾಹಿತಿ ಪಡೆಯಬಹುದು.