ಕಾಯಕ ಯೋಗಿ ಸಾಹಿತಿ : ಈರಯ್ಯ ಕಿಲ್ಲೇದಾರ

ಕೃಷಿಯ ಜೊತೆ ಜೊತೆಗೆ ಅಗಾಧವಾದ ಸಾಹಿತ್ಯದ ಕೃಷಿ ಮಾಡಿದವರು ಬಹಳ ವಿರಳ. ಸಾಹಿತ್ಯದಲ್ಲಿ ಕೃಷಿ ಮಾಡುವುದಕ್ಕಿಂತ ಕೃಷಿಯ ಸೊಗಡಿನಲ್ಲೆ ಸಾಹಿತ್ಯದ ರಚನೆಯತ್ತ ಗಮನಹರಿಸಿದವರು ಸಾಹಿತಿ ಈರಯ್ಯ ಕಿಲ್ಲೇದಾರ ಅವರು. ಕೋಟಿ ವಿದ್ಯೆಗಿಂತಲೂ ಮೇಟಿ ವಿದ್ಯೆಯೇ ಮೇಲು ಎಂದು ನಂಬಿ ಸಾವಯವ ಕೃಷಿಕರಾದ ಈರಯ್ಯನವರು ಕೃಷಿಯಲ್ಲಿ ಹೊಸ ಪ್ರಯೋಗ, ಹೊಸ ಚಿಂತನೆ ಮಾಡುತ್ತಾ, ಅದನ್ನು ಅಕ್ಷರ ಲೋಕಕ್ಕೆ ಧಾರೆಯೆರೆಯುತ್ತಾ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧಿ ಪಡೆದವರು.  

ಈರಯ್ಯ ಕಿಲ್ಲೇದಾರ ಅವರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬುಡಕರಟ್ಟಿಯಲ್ಲಿ 1955ರ ಡಿಸೆಂಬರ 2ರಂದು ಜನಿಸಿದರು. ತಂದೆ ನಿಂಗಯ್ಯ, ತಾಯಿ ಗಂಗಮ್ಮ. ಈರಯ್ಯನವರು ಅತೀ ಕಡುಬಡತನದಲ್ಲಿಯೇ ಗುಡಿಕಟ್ಟಿ ಗ್ರಾಮದಲ್ಲಿ ಬೆಳೆದರು. ಅವರು ಪ್ರಾಥಮಿಕ ಶಿಕ್ಷಣವನ್ನು ಗೋವನ ಕೊಪ್ಪದಲ್ಲಿ ಮತ್ತು ಪ್ರೌಢ ಶಿಕ್ಷಣವನ್ನು ದೊಡ್ಡವಾಡದಲ್ಲಿ ಪೂರೈಸಿದರು. ಈರಯ್ಯನವರು ಮೂರು ಕಿ.ಮೀ. ನಡೆದುಕೊಂಡು ಹೋಗಿ ಶಿಕ್ಷಣವನ್ನು ಪೂರೈಸಿದರು. ನಂತರ 1974ರಲ್ಲಿ ಬೈಲಹೊಂಗಲದ ಪದವಿ ಕಾಲೇಜಿನಿಂದ ಅರ್ಥಶಾಸ್ತ್ರ ವಿಷಯದೊಂದಿಗೆ ಶೇ.52ರಷ್ಟು ಅಂಕಗಳನ್ನು ಪಡೆದು ಪದವಿಯನ್ನು ಪಡೆದರು.  

ಈರಯ್ಯನವರು ಸರಕಾರಿ ನೌಕರಿಗೆ ಹೋಗದೇ ಕೃಷಿಯಲ್ಲಿನ ಪ್ರೀತಿಯಿಂದ ಕೃಷಿಯನ್ನೇ ಮುಖ್ಯ ವೃತ್ತಿಯನ್ನಾಗಿ ಮಾಡಿಕೊಂಡರು. ಅವರು ಕೇವಲ ಒಂದೂವರೆ ಎಕರೆಯಲ್ಲಿ ಸಾವಯವ ಪದ್ಧತಿಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿಕೊಂಡರು. ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಭರಾಟೆಯಲ್ಲಿ ಸಾವಯವ ಕೃಷಿ ಮಾಡುವುದೆಂದರೆ ಪ್ರವಾಹದ ವಿರುದ್ಧ ಈಜಿದಂತೆ. ಅವರು ಹೆದರದೇ ದಿಟ್ಟತನದಿಂದ ಕೃಷಿಯಲ್ಲಿಯೇ ಸಾಧಿಸಿ, ಜಿಲ್ಲೆಯ ರೈತರಿಗೆ ಪ್ರೇರಣೆಯಾದರು. ಈರಯ್ಯ ಕಿಲ್ಲೇದಾರ ಅವರು ಶಾಂತಾ ಅವರನ್ನು ಮದುವೆಯಾದರು. ಮೂವರು ಮಕ್ಕಳು ಪ್ರಭು, ಪ್ರಸಾದ ಮತ್ತು ಪೂರ್ಣಿಮಾ. ಅವರು ನಾಲ್ಕು ಎಕರೆ ಮೂವತ್ತು ಗುಂಟೆ ಜಮೀನಿನಲ್ಲಿ ಸಾವಯವ ಕೃಷಿಕರಾಗಿ ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ.  

ಈರಯ್ಯನವರು ಚಿಕ್ಕವರಿದ್ದಾಗ ಅವರ ಅಜ್ಜ ತಿಂಡಿ ತಿನಿಸು ತರದೇ ಬದಲಾಗಿ ನೀತಿ ಪುಸ್ತಕಗಳನ್ನು ತಂದು ಕೊಡುತ್ತಿದ್ದರು. ಹೀಗಾಗಿ ಅವರು ಬಾಲ್ಯದಲ್ಲಿಯೇ ಶರಣರ ಚರಿತ್ರೆ, ಹರಿಶ್ಚಂದ್ರನ ಕಥೆಗಳು, ವಚನಗಳು ಮುಂತಾದ ಪುಸ್ತಕಗಳನ್ನು ಅಜ್ಜನಿಂದ ತಿಳಿದುಕೊಂಡಿದ್ದರು. ಅವರು ಪದವಿ ಅಧ್ಯಯನದಲ್ಲಿದ್ದಾಗ ಗ್ರಂಥಪಾಲಕರಾದ ಚಂಬಯ್ಯ ಪೂಜಾರವರು ಪಠ್ಯಪುಸ್ತಕಗಳ ಜೊತೆಗೆ ಕಥೆ, ಕಾದಂಬರಿ, ರಾಮಾಯಣ, ಮಹಾಭಾರತ, ತತ್ವಶಾಸ್ತ್ರ, ಶರಣ ಸಾಹಿತ್ಯಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಓದಲು ಮನೆಗೆ ಕೊಡುತ್ತಿದ್ದರು. ಅವರು ಕಾಲೇಜಿನಲ್ಲಿದ್ದಾಗಲೇ ಪ್ರಬಂಧ ಸ್ಪರ್ಧೆಯಲ್ಲಿ ಡಾ.ಶಿವರಾಮ ಕಾರಂತರ ‘ಅಳಿದ ಮೇಲೆ’ ಕಾದಂಬರಿಯನ್ನು ಮೊದಲ ಬಹುಮಾನವನ್ನಾಗಿ ಪಡೆದುಕೊಂಡಿದ್ದರು. ಹೀಗಾಗಿ ಸಾಹಿತ್ಯದಲ್ಲಿ ಆಸಕ್ತಿ ಬೆಳೆದು ಕವನಗಳನ್ನು, ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು.   

1981ರಲ್ಲಿ ಧಾರವಾಡದ ತಪೋವನದಲ್ಲಿ ಜರುಗಿದ ಯೋಗಾಸನ ಶಿಬಿರದಲ್ಲಿ ಈರಯ್ಯನವರು ಪಾಲ್ಗೊಂಡಿದ್ದರು. ಈ ಶಿಬಿರದಲ್ಲಿ ಇಂಗ್ಲೆಂಡ್ ದಿಂದ ರಿಚರ್ಡ್‌ ಮೆಥ್ಯೂ, ರೋಸಾ ಲಿಂನ್ ಎಮರ​‍್ಸ‌ನ್ ಹಾಗೂ ಆಖಮೇಲಾ ಅವರು ಬಂದಿದ್ದರು. ಅವರಿಗೆ ಶಿವಾನಂದ ತರ್ಲಗಟ್ಟಿಯವರು ಸಿತಾರ ಕಲಿಸುತ್ತಿದ್ದರು. ಒಂದು ದಿನ ತರ್ಲಗಟ್ಟಿಯವರು ಈರಯ್ಯ ಕಿಲ್ಲೇದಾರ ಅವರ ಕವನವನ್ನು ಸುಶ್ರಾವ್ಯವಾಗಿ ಹಾಡಿದರು. ಅವರೆಲ್ಲ ಓಹ್ ಈರಯ್ಯ ಪೋಯೆಟ್! ಎಂದು ಆಶ್ಚರ್ಯಪಟ್ಟು ಶುಭ ಕೋರಿದ್ದರು. ಅಷ್ಟೇ ಅಲ್ಲದೇ ಅವರ ಪ್ರಥಮ ಕವನಸಂಕಲನ ‘ಶರಣ’ ಕೃತಿಯನ್ನು ಇಂಗ್ಲೆಂಡನ ಮಿತ್ರರು ಸಮಾಜ ಪುಸ್ತಕಾಲಯದಿಂದ ಪ್ರಕಟಿಸಿ, ತಪೋವನದ ಪೂಜ್ಯ ಕುಮಾರಸ್ವಾಮಿಗಳಿಂದ ಬಿಡುಗಡೆಗೊಳಿಸದರು. ನಂತರ ಶರಣ ತ್ರೆಮಾಸಿಕ ಪತ್ರಿಕೆ, ಬಸವಪಥ, ಸಿದ್ಧ ಗಂಗಾ, ಅನುಭಾವಪಥ ಮೊದಲಾದ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾದವು.  

ಹೊಲದ ದುಡಿಮೆಯ ಜೊತೆಗೆ ಬರವಣಿಗೆಯ ಹವ್ಯಾಸವನ್ನು ಅವರು ಬೆಳೆಸಿಕೊಂಡಿದ್ದಾರೆ. ಸಾಹಿತಿ ಈರಯ್ಯ ಕಿಲ್ಲೇದಾರ ಅವರು 6 ಕವನ ಸಂಕಲನ, 2 ಕಾದಂಬರಿ, 12 ಕೃಷಿಕರ ಬದುಕ ಬವಣೆ ಕುರಿತ ಕೃತಿಗಳನ್ನು ಮತ್ತು ಒಂದು ಜಾನಪದ ಕೃತಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ಸಮರ​‍್ಿಸಿದ್ದಾರೆ. ಶರಣು, ದುರ್ಗಿಯು ಬರುತಿಹಳು, ಮತ್ಯಾಕ ಬಂದಿರಿ? ಹಂಗಾಮು, ಹಕ್ಕಿ ಕುಂತ ರೆಂಬೆ, ದನಿಯಾಗದ ಹನಿಗಳು ಕವನ ಸಂಕಲನಗಳು, ಕೊಳ್ಳಿಯ ಬೆಳಕು, ಹೂ ಹುಡುಗಿ ಕಾದಂಬರಿಗಳು, ಹಿಂದಕ ನೋಡಿ ಮುಂದಕ ನಡಿ ಜಾನಪದ ಕೃತಿ, ದೇವರು ಮತ್ತು ದಲಿತರು, ಮುರಿದ ಮುಳ್ಳು, ಸ್ಥಾವರದಿಂದ ಜಂಗಮದೆಡೆಗೆ, ಬದನೆ ಪುರಾಣ ಲಲಿತ ಪ್ರಬಂಧಗಳು, ಸಾಂಪ್ರದಾಯಿಕ ಒಕ್ಕಲುತನ, ಸಾವಯವ ಹಾದಿ, ತ್ರಿಶಂಕು ಸ್ಥಿತಿಯಲ್ಲಿ ರೈತ, ಮೇಟಿಯ ನೆರಳು, ಗುಮಾನಿ ಬೀಜ, ರೈತ ತೀರ​‍್ು, ಅನ್ನದಾತನ ಅಂಗಳದಲ್ಲಿ, ರೈತ ಪ್ರಹಸನಗಳು, ಬರೀ ಮಾಡ ಉರಿಯಿತ್ತು, ಉರಿಯ ಪೇಟೆಯಲ್ಲಿ ಕೃಷಿಕರ ಬದುಕು ಬವಣೆ ಕುರಿತು ಕೃತಿಗಳು ಹೀಗೆ ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ.  

ಈರಯ್ಯ ಕಿಲ್ಲೇದಾರ ಅವರು ಜಾನಪದ ವಿಶ್ವವಿದ್ಯಾಲಯದ ಕನ್ನಡ ಜಾನಪದ ನಿಘಂಟು ಯೋಜನೆ ಮತ್ತು ಗ್ರಾಮ ಚರಿತ್ರೆ ಕೋಶ ಯೋಜನೆಗಳಲ್ಲಿ ಕ್ಷೇತ್ರ ತಜ್ಞರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಗುಡಿಕಟ್ಟಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರನ್ನು ಸಂಘಟಿಸಿ, ಶೇರು ಹಣ ಸಂಗ್ರಹಿಸಿ, ಹಾಲು ಉತ್ಪಾದಕರ ಸಹಕಾರಿ ಸಂಘವನ್ನು 1998ರಲ್ಲಿ ಸ್ಥಾಪಿಸಿದ್ದಾರೆ. ಅವರು ಮಲೇಶಿಯಾ ದೇಶದ ಪೆನಾಂಗದಲ್ಲಿ ಜರುಗಿದ ಆಹಾರ ಸಾರ್ವಭೌಮತ್ವ ಕುರಿತ ಅಂತರಾಷ್ಟ್ರೀಯ ಕಾರ್ಯಾಗಾರದಲ್ಲಿ ಭಾಗವಹಿಸಿ ವಿಷಯ ಮಂಡಿಸಿದ್ದಾರೆ. ಅಲ್ಲದೇ ಕೃಷಿಗೆ ಸಂಬಂಧಪಟ್ಟ ಹಲವಾರು ವಿಷಯಗಳ ಕುರಿತು ಸಾಹಿತ್ಯ ಸಮ್ಮೇಳನಗಳಲ್ಲಿ, ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳಲ್ಲಿ ಮತ್ತು ದೂರದರ್ಶನದಲ್ಲಿ ವಿಷಯ ಮಂಡಿಸಿ ಪ್ರಸಿದ್ಧಿಗಳಿಸಿದ್ದಾರೆ. ಅವರು ಹಲವು ಸಂಘ-ಸಂಸ್ಥೆಗಳ ಪದಾಧಿಕಾರಿಯಾಗಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಕೃಷಿ ಕುರಿತು ಬರೆದ ಲೇಖನಗಳು ನಾಡಿನ ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡು ಚರ್ಚೆಗೆ ಗ್ರಾಸವಾಗಿವೆ. ‘ಭೂಮಿಯ ಹದ ಎಂದರೇನೆಂಬುದು ತಿಳಿಯದಾಗಿದ್ದೇವೆ. ಮೊದಲೆಲ್ಲ ರೈತ ಬೆಳಗು ಹರಿವು ಮುನ್ನ ಹೊಲದಲ್ಲಿರುತ್ತಿದ್ದ. ಈಗ 10 ಗಂಟೆಯಾದರೂ ಮನೆಯಲ್ಲಿರುತ್ತಾನೆ. ಬದಲಾದ ಮನೋಭಾವ, ಆಧುನಿಕ ಬೇಸಾಯ ಪದ್ಧತಿ ನಮಗೆಷ್ಟು ಅನುಕೂಲ ಎಂಬುದನ್ನು ಕೃಷಿ ವಿಜ್ಞಾನಿಗಳು ಮತ್ತು ಸಂಶೋಧಕರು ಈಗಲೂ ಬಾಯಿಬಿಡುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸುತ್ತಾರೆ. 

ಕಾಯಕ ಯೋಗಿ ಈರಯ್ಯ ಕಿಲ್ಲೇದಾರ ಅವರ ಸಾವಯವ ಕೃಷಿ ಹಾಗೂ ಸಾಹಿತ್ಯ ಸೇವೆಯನ್ನು ಗುರುತಿಸಿದ ರಾಜ್ಯ ಸರ್ಕಾರ ಹಾಗೂ ನಾಡಿನ ಸಂಘ-ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಯುವ ಪ್ರಶಸ್ತಿ, ರಾಜ್ಯಮಟ್ಟದ ಸಾವಯವ ಕೃಷಿಕ ಪ್ರಶಸ್ತಿ, ಅತ್ಯುತ್ತಮ ತೋಟಗಾರಿಕಾ ಪ್ರಶಸ್ತಿ, ಸುಕೋ ಬ್ಯಾಂಕಿನ ರಾಜ್ಯಮಟ್ಟದ ಸುಕೃತ ಕೃಷಿ ಪುರಸ್ಕಾರ, ಚಡಚಣದ ಜೋಳಿಗೆ ಪ್ರತಿಷ್ಠಾನದ ಪುರಸ್ಕಾರ, ಕವಿಕುಲತಿಲಕ ಪ್ರಶಸ್ತಿ, ಸಂಕ್ರಮಣ ಪುರಸ್ಕಾರ, ಬೆಳಗಾವಿಯ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ. ಅಲ್ಲದೇ ಅವರು ನಡೆಸುತ್ತಿರುವ ಕೃಷಿ ವಿಚಾರ ವಿನಿಮಯ ಕೇಂದ್ರಕ್ಕೆ ರಾಜ್ಯಮಟ್ಟದ ಪ್ರಥಮ ಮತ್ತು ರಾಷ್ಟ್ರಮಟ್ಟದ ತೃತೀಯ ಬಹುಮಾನಗಳು ದೊರಕಿವೆ.  

ಸಾಹಿತಿ ಈರಯ್ಯನವರದು ಹೆಚ್ಚು ಆಪ್ತವಾಗಿರುವ ವ್ಯಕಿತ್ವ. ಖಾದಿ ಜುಬ್ಬಾ, ಪೈಜಾಮು, ಹೆಗಲಿಗೊಂದು ಚೀಲ ಹಾಕಿಕೊಂಡು ಓಡಾಡಿಕೊಂಡಿರುವ ಸೀದಾ ಸಾದಾ ವ್ಯಕ್ತಿ. ಕಿಲ್ಲೇದಾರರು ಓದಿದ್ದು ಅರ್ಥಶಾಸ್ತ್ರದ ಪದವಿಯಾದರೂ ಅವರು ಹಿಡಿದ ಹಾದಿ ಸ್ವಯಂ ಕೃಷಿ ಮಾರ್ಗ. ಕನ್ನಡನಾಡು ನುಡಿಗೆ ಹೆಮ್ಮೆ ತಂದ ಕೃಷಿ ಕ್ಷೇತ್ರದ ಮಹತ್ವದ ಸಾಧಕರು. ಕೃಷಿಯ ಕಾಳಜಿಯನ್ನು ಬರಿಮಾತಾಗಿಸದೇ ಕೃತಿಯ ಮೂಲಕ ಅನುಷ್ಠಾನ ಮಾಡಿರುವವರು ಈರಯ್ಯ ಕಿಲ್ಲೇದಾರ ಅವರು. ಅವರಿಗೆ ಅಭಿನಂದನೆಗಳು. ಸಂಪರ್ಕಿಸಿ 9731575119. 

- * * * -