ಬೆಂಗಳೂರು, ಆ 26 ಭಾರತ ರೆಡ್ ಹಾಗೂ ಭಾರತ ಬ್ಲೂ ತಂಡಗಳ ನಡುವಿನ ದುಲೀಪ್ ಟ್ರೋಫಿಯ ಎರಡನೇ ಪಂದ್ಯ ಅಂತಿಮವಾಗಿ ಡ್ರಾಗೆ ಮುಕ್ತಾಯವಾಯಿತು.
ಪಂದ್ಯದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು ಕರುಣ್ ನಾಯರ್ ಅವರ ಬ್ಯಾಟಿಂಗ್ ! ಪ್ರಥಮ ಇನಿಂಗ್ಸ್ನಲ್ಲಿ ಕೇವಲ ಒಂದೇ ಒಂದು ರನ್ನಿಂದ ಶತಕ ವಂಚಿತರಾಗಿದ್ದ ಕರುಣ್ ನಾಯರ್, ದ್ವಿತೀಯ ಇನಿಂಗ್ಸ್ನಲ್ಲಿ ಹಾಗೇ ಆಗಲಿಲ್ಲ. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿ ಶತಕ ಸಿಡಿಸಿದರು.
ಎರಡು ವಿಕೆಟ್ ಕಳೆದುಕೊಂಡು 93 ರನ್ಗಳಿಂದ ಸೋಮವಾರ ಬೆಳಗ್ಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ರೆಡ್ 88 ಓವರ್ಗಳಿಗೆ ಆರು ವಿಕೆಟ್ ಕಳೆದುಕೊಂಡು 297 ರನ್ ಗಳಿಸಿತು. ಆ ಮೂಲಕ ದ್ವಿತೀಯ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತ ತಂಡ ದ್ವಿತೀಯ ಇನಿಂಗ್ಸ್ ಮುಂದುವರಿಸಲಿಲ್ಲ. ಅಂತಿಮವಾಗಿ ಪಂದ್ಯ ಡ್ರಾ ಆಯಿತು. ಭಾರತ ರೆಡ್ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ್ದರಿಂದ ತನ್ನ ಖಾತೆಗೆ ಮೂರು ಅಂಕಗಳನ್ನು ಸೇರಿಸಿಕೊಂಡಿತು. ಬ್ಲೂ ಒಂದು ಅಂಕ ಪಡೆಯಿತು.
ಸೋಮವಾರ ಅಜೇಯ 43 ರನ್ ಗಳೀಂದ ದೀರ್ಘ ಕಾಲ ಬ್ಯಾಟಿಂಗ್ ಮಾಡಿದ ಕರುಣ್ ನಾಯರ್, ತವರು ಅಂಗಳದ ಲಾಭ ಪಡೆದರು. ಯಾವುದೇ ತಪ್ಪು ಹೊಡೆಗಳಿಗೆ ಕೈ ಹಾಕದೆ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ ತೋರಿದರು. ನಾಯರ್ 223 ಎಸೆತಗಳಲ್ಲಿ ಒಂದು ಸಿಕ್ಸ್ ಹಾಗೂ 19 ಬೌಂಡರಿಯೊಂದಿಗೆ ಅಜೇಯ 166 ರನ್ ಗಳಿಸಿ ಅಜೇಯರಾಗಿ ಉಳಿದರು.
ಅಮೋಘ ಜತೆಯಾಟ:
ಮುರಿಯದ ಮೂರನೇ ವಿಕೆಟ್ಗೆ ಕರುಣ್ ನಾಯರ್ ಹಾಗೂ ಅಂಕಿತ್ ಕಲ್ಸಿ ಜೋಡಿಯು 156 ರನ್ ಜತೆಯಾಟವಾಡುವ ಮೂಲಕ ಭಾರತ ರೆಡ್ ಮೊತ್ತ 200ರ ಗಡಿ ದಾಟಲು ನೆರವಾಗಿತ್ತು. ಕರುಣ್ ನಾಯರ್ಗೆ ಹೆಚ್ಚು ಸಮಯ ಮತ್ತೊಂದು ತುದಿಯಲ್ಲಿ ಹೆಗಲು ನೀಡಿದ್ದ ಅಂಕಿತ್ ಕಲ್ಸಿ 160 ಎಸೆತಗಳಲ್ಲಿ 64 ರನ್ ಗಳಿಸಿ ಔಟ್ ಆದರು.
ಒಟ್ಟಾರೆ ಈ ಪಂದ್ಯದಲ್ಲಿ ಕರುಣ್ ನಾಯರ್ ಎರಡೂ ಇನಿಂಗ್ಸ್ಗಳಿಂದ 265 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಭಾರತ ಬ್ಲೂ ತಂಡದ ಉತ್ತಮ ಬೌಲಿಂಗ್ ಮಾಡಿದ ಜಲಜ್ ಸೆಕ್ಸೇನಾ 105 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ದಿವೇಶ್ ಪಠಾಣಿಯಾ 53 ರನ್ ನೀಡಿ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಭಾರತ ರೆಡ್
ಪ್ರಥಮ ಇನಿಂಗ್ಸ್: 285
ದ್ವಿತೀಯ ಇನಿಂಗ್ಸ್: 88 ಓವರ್ಗಳಲ್ಲಿ 297/6 (ಕರುಣ್ ನಾಯರ್ ಔಟಾಗದೆ 166, ಅಂಕಿತ್ ಕಲ್ಸಿ 64; ಜಲಜ್ ಸೆಕ್ಸೇನಾ 105 ಕ್ಕೆ 5, ದಿವೇಶ್ ಪಠಾಣಿಯ 53 ಕ್ಕೆ 2)
ಭಾರತ ಬ್ಲೂ
ಪ್ರಥಮ ಇನಿಂಗ್ಸ್: 255