ಬೆಂಗಳೂರು, ಡಿ.19: ನಗರದ ಟೌನ್ ಹಾಲ್ ಬಳಿ ಹಲವಾರು ಸಂಘಟನೆಗಳು ಮತ್ತು ಇತರೇ ಸಾಮಾಜಿಕ ಚಿಂತಕರು ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಎಪಿ ಕಾರ್ಯಕರ್ತರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ.
ಶಾಂತಿಯುತ ಪ್ರತಿಭಟನೆಯ ಹಕ್ಕು ಸಾಂವಿಧಾನಿಕವಾಗಿದ್ದು, ರಾಜ್ಯ ಸರ್ಕಾರ ಜನರ ಈ ಹಕ್ಕನ್ನು ಹತ್ತಿಕ್ಕುತ್ತಿರುವುದು ಖಂಡನಾರ್ಹ ಹಾಗೂ ಕಾನೂನು ವಿರೋಧಿ ಕ್ರಮ. ಬೆಂಗಳೂರು ಪೋಲೀಸರು ತಕ್ಷಣವೇ ಎಎಪಿ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿ, ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡಬೇಕು ಎಂದು ಕರ್ನಾಟಕ ಎಎಪಿ ಆಗ್ರಹಿಸಿದೆ.
ಎಎಪಿಯ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿವರಿಸಿದಂತೆ ಈ ಎರಡೂ ಕಾಯ್ದೆಗಳು ಸಂವಿಧಾನ ವಿರೋಧಿಯಾಗಿದೆ. ಈ ಕಾನೂನು ಜನವಿರೋಧಿ ಮಾತ್ರವಲ್ಲ, ದೇಶದ ಮೂಲ ಸಿದ್ಧಾಂತಕ್ಕೇ ಧಕ್ಕೆಯುಂಟು ಮಾಡುತ್ತಿದೆ. ಈ ಕಾನೂನಿನ ಪ್ರಕಾರ ಹೊರದೇಶದಿಂದ ಬಂದ ಭಾರತೀಯರಿಗೆ ಪೌರತ್ವದ ಆಶ್ವಾಸನೆ ನೀಡುತ್ತದೆ. ಆದರೆ ದೇಶದಲ್ಲಿ ವಾಸಿಸುತ್ತಿರುವ ನಾಗರೀಕರಿಗೆ ಮೂಲಸೌಕರ್ಯದ ಭದ್ರತೆಯನ್ನು ಒದಗಿಸುವುದಿಲ್ಲ ಎಂದು ಎಎಪಿ ದೂರಿದೆ.
ಇದು ಭಾರತವನ್ನು ನಿಜವಾಗಿಯೂ ಕಾಡುತ್ತಿರುವ ಸಮಸ್ಯೆಗಳಾದ ಉದ್ಯೋಗ, ಶಿಕ್ಷಣ, ಆರೋಗ್ಯ, ಏರುತ್ತಿರುವ ಬೆಲೆ, ಕುಸಿಯುತ್ತಿರುವ ಆರ್ಥಿಕತೆ ಹಾಗೂ ಕೇಂದ್ರ ಸರ್ಕಾರದ ಸೋಲುಗಳ ಬಗ್ಗೆ ಜನರ ದಿಕ್ಕು ತಪ್ಪಿಸುವ ಹುನ್ನಾರವಾಗಿದೆ. ಆಮ್ ಆದ್ಮಿ ಪಕ್ಷವು ದೇಶದ ಶಾಂತಿಗೆ ಯಾವುದೇ ಅಡೆತಡೆಯಾಗದಂತೆ, ಶಾಂತಿಯುತವಾಗಿ ಹೋರಾಡುವ ಜನತೆಯನ್ನು ಬೆಂಬಲಿಸುತ್ತದೆ. ಹೋರಾಟವನ್ನು ಉಗ್ರವಾಗಿ ಕೊಂಡೊಯ್ದರೆ, ಈ ಕಾನೂನನ್ನು ಜಾರಿಗೊಳಿಸಿ, ದೇಶ ವಿಭಜಿಸಿ ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ಹೊಂಚು ಹಾಕುತ್ತಿರುವವರಿಗೆ ಲಾಭವಾಗುತ್ತದೆಯೇ ಹೊರತು, ದೇಶದ ಅಭಿವೃದ್ಧಿಗೆ ಪೂರಕವಾಗಿರುವುದಿಲ್ಲ ಎಂದು ಬೆಂಗಳೂರು ಘಟಕ ಅಧ್ಯಕ್ಷ ಮೋಹನ್ ದಾಸರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.