ಕರ್ನಾಟಕ ಜಾನಪದ ಅಕಾಡೆಮಿ: ವಾರ್ಷಿಕ ಗೌರವ ಪ್ರಶಸ್ತಿಗೆ ಕೆ.ಶಂಕರ್ಪ ಆಯ್ಕೆ
ಬಳ್ಳಾರಿ 03: ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ 2024 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಶ್ರೀಧರಗಡ್ಡೆ ಗ್ರಾಮದ ಗುಡಾರ ನಗರ ಬಡಾವಣೆ ಬುಡಗ ಜಂಗಮ ಕಾಲೋನಿಯ ನಿವಾಸಿ ಕೆ.ಶಂಕರ್ಪ ಅವರು ಹಗಲುವೇಷ ಕಲಾ ಪ್ರಕಾರದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಎನ್.ನಮ್ರತ ಅವರು ತಿಳಿಸಿದ್ದಾರೆ. ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯ ಮೊತ್ತ ರೂ.25,000/- ಮತ್ತು ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ನೀಡಿ ಗೌರವಿಸಲಾಗುವುದು. ಬೆಂಗಳೂರಿನಲ್ಲಿ ನಡೆದ ಸರ್ವ ಸದಸ್ಯರ ಸಭೆಯ ತೀರ್ಮಾನದಂತೆ 2024 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಜಾನಪದ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.