ಬೆಂಗಳೂರು, ಜ 16- ರೈತರ ಪರ, ಬಡವರ ಪರ ಮತ್ತು ಅಭಿವೃದ್ಧಿಯ ಯೋಜನೆಗಳನ್ನು ಹೊಂದಿರುವ ಉತ್ತಮ ಬಜೆಟ್ ಮಂಡಿಸಲು ಸಂಬಂಧಿತ ಎಲ್ಲ ಭಾಗೀದಾರರೊಂದಿಗೆ ಸಮಾಲೋಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಗುರುವಾರ ರಾಜ್ಯ ಬಿಜೆಪಿ ಪೂರ್ಣಾವಧಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿರುವ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂದಿನ ಮೂರು ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಇಡೀ ದೇಶದಲ್ಲೇ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿ ನೆಮ್ಮದಿಯ ಬದುಕು ಕಲ್ಪಿಸಿಕೊಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಮಾರ್ಚ್ 5ರಂದು ಮಂಡಿಸಲಾಗುವ ಬಜೆಟ್‍ನಲ್ಲಿ ಅನೇಕ ರೈತರ ಪರ, ಬಡವರ ಪರ, ಅಭಿವೃದ್ಧಿ ಯೋಜನೆಗಳನ್ನು ಪ್ರಕಟಿಸಲಾಗುವುದು. ಒಳ್ಳೆಯ ಬಜೆಟ್ ನೀಡಲು ಎಲ್ಲರ ಜೊತೆ ಸಮಾಲೋಚನೆ ನಡೆಸಲಾಗುವುದು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಹೆಜ್ಜೆ ಇಡಬೇಕಾಗಿದೆ. ಶಾಸಕ ಸ್ಥಾನಕ್ಕೆ 18 ಶಾಸಕರು ರಾಜೀನಾಮೆ ನೀಡಿದ್ದರಿಂದ ಬಿಜೆಪಿ ಅಧಿಕಾರದಲ್ಲಿದೆ. ಪಕ್ಷದ ಸಂಘಟನೆಗೆ ನಮ್ಮ ಜೊತೆ ಬಂದವರನ್ನು ಸಂಘಟನೆಗೆ ಉಪಯೋಗಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಆಡಳಿತಪಕ್ಷಕ್ಕೆ ಅಭಿವೃದ್ಧಿ ಮತ್ತು ಪಕ್ಷ ಬಲಪಡಿಸುವ ಎರಡೂ ಜವಾಬ್ದಾರಿಯಿದೆ ಎಂದು ಹೇಳಿದರು.
ಸರ್ವಾನುಮತದಿಂದ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಳಿನ್ ಕುಮಾರ್ ಅವರು ಮೂರು ವರ್ಷಗಳ ಅವಧಿಯಲ್ಲಿ ಪಕ್ಷವನ್ನು ಬಲಪಡಿಸುವ ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ ಅವರು ರಾಜ್ಯಾಧ್ಯಕ್ಷರಾಗಿ ಜಿಲ್ಲೆಗಳಲ್ಲಿ ಎರಡು ಬಾರಿ ಪ್ರವಾಸ ಮಾಡಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ, ಪಕ್ಷ ಬಲವರ್ಧನೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುಂದಿನ ಮೂರು ವರ್ಷ ಪಕ್ಷವನ್ನು ಬಲಪಡಿಸುವ ಅವರ ಕೆಲಸಕ್ಕೆ ಎಲ್ಲರೂ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ, ಪರಿಶಿಷ್ಟ ಜಾತಿ-ಪಂಗಡ ಮೋರ್ಚಾ ಸೇರಿದಂತೆ ಎಲ್ಲ ಮೋರ್ಚಾಗಳನ್ನು ಬಲಪಡಿಸಬೇಕಾಗಿದೆ. ಬಿಜೆಪಿನಲ್ಲಿ ಮಾತ್ರ ಕಾರ್ಯಕರ್ತರ ಅಭಿಪ್ರಾಯ ಪಡೆದು ಎಲ್ಲಾ ಮಟ್ಟದಲ್ಲೂ ಅಧ್ಯಕ್ಷರನ್ನು ಆಯ್ಕೆ ಮಾಡುವ ವ್ಯವಸ್ಥೆ ಇದೆ. ಬೇರೆ ಯಾವ ಪಕ್ಷದಲ್ಲೂ ಇಂತಹ ಆಂತರಿಕ ಪ್ರಜಾಪ್ರಭುತ್ವವಿಲ್ಲ. ಬಿಜೆಪಿ ಸೇರುವುದಕ್ಕೆ ವಿವಿಧ ಸಮುದಾಯಗಳ ಅನೇಕ ಪ್ರಭಾವಿ ಮುಖಂಡರು ಇಚ್ಛೆ ವ್ಯಕ್ತಪಡಿಸಿದ್ದು, ಅವರಿಗೆ ಸ್ವಾಗತವಿದೆ ಎಂದು ಯಡಿಯೂರಪ್ಪ ಹೇಳಿದರು.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಬಲವರ್ಧನೆ-ನಳಿನ್ ಕುಮಾರ್ ಕಟೀಲ್
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲ್ ಅವರು, ತಮ್ಮನ್ನು ರಾಜ್ಯ ಅಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತಿದ್ದೇನೆ. ಬಿಜೆಪಿಯಲ್ಲಿ ಚಹಾ ಮಾರುವವರು ಪ್ರಧಾನಿಯಾಗಿದ್ದಾರೆ, ನಿಂಬೆಹಣ್ಣು ಮಾರುವವರು ಮುಖ್ಯಮಂತ್ರಿಯಾಗಿದ್ದಾರೆ, ಮತಗಟ್ಟೆ ಕಾರ್ಯಕರ್ತ ಸಹ ಪಕ್ಷದ ರಾಜ್ಯಾಧ್ಯಕ್ಷರಾಗುವುದನ್ನು ಬಿಜೆಪಿಯಲ್ಲಿ ಮಾತ್ರ ಕಾಣಬಹುದು. ತಾವು ಅಧ್ಯಕ್ಷರಾಗಿ ನಿಯುಕ್ತಿಯಾದಾಗ ಇಂತಹ ದೊಡ್ಡ ಜವಾಬ್ದಾರಿ ನಿಭಾಯಿಸುವ ಕುರಿತು ಭಯ, ಆತಂಕವಿತ್ತು. ಕರಾವಳಿ ಜಿಲ್ಲೆಗಳನ್ನು ಬಿಟ್ಟು ಇಡೀ ರಾಜ್ಯದಲ್ಲಿ ಸುತ್ತು ಕಾರ್ಯ ನಿರ್ವಹಿಸಲು ಸಾಧ್ಯವೇ ಎಂದು ಅನಿಸಿತ್ತು. ಆದರೆ, ಪಕ್ಷದ ಧ್ವಜ ಹಿಡಿದ ತಕ್ಷಣವೇ ಧೈರ್ಯ, ಆತ್ಮವಿಶ್ವಾಸ ಹೆಚ್ಚಾಯಿತು. ಮುಖ್ಯಮಂತ್ರಿಯವರ ಮಾರ್ಗದರ್ಶನದೊಂದಿಗೆ ತಾವು ಸಾಗುತ್ತಿದ್ದು, ಸದ್ಯ ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದು, ಕಾರ್ಯಕರ್ತರು ಹುರಿದುಂಬಿಸಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಈಗಾಗಲೇ 37 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಿಗೆ, 306 ಮಂಡಲಗಳ ಪೈಕಿ 264 ಮಂಡಲಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಪ್ರತಿ ಮಂಡಲಕ್ಕೂ ಸ್ವಂತ ಕಾರ್ಯಾಲಯವನ್ನು ನಿರ್ಮಿಸಲಾಗುವುದು. ಪಂಚಾಯತ್ ಚುನಾವಣೆಗಳಲ್ಲಿ ಶೇ 80ರಷ್ಟು ಸ್ಥಾನ ಪಡೆಯುವುದು ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗಳಿಸುವ ಗುರಿಯೊಂದಿಗೆ ಮುಂದಿನ ಮೂರು ವರ್ಷಗಳಲ್ಲಿ ಶ್ರಮಿಸಲಾಗುವುದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಸಮಾರಂಭದಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಷಿ, ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಗೋವಿಂದ ಕಾರಜೋಳ, ಸಚಿವರಾದ ಶ್ರೀ ಜಗದೀಶ್ ಶೆಟ್ಟರ್, ಆರ್.ಅಶೋಕ್, ಈಶ್ವರಪ್ಪ, ಸಿ.ಟಿ.ರವಿ, ಕೋಟಾ ಶ್ರೀನಿವಾಸ ಪೂಜಾರಿ, ವಿ.ಸೋಮಣ್ಣ ಮತ್ತು ಪಕ್ಷದ ಇತರ ಮುಖಂಡರು ಉಪಸ್ಥಿತರಿದ್ದರು.