ಫ್ಲೋರಿಡಾ ಆ 5 ಮೂರು ಪಂದ್ಯಗಳ ಟಿ-20 ಸರಣಿಯನ್ನು ಭಾರತ 2-0 ಅಂತರದಲ್ಲಿ ಜಯ ಸಾಧಿಸುವಲ್ಲಿ ವೇಗಿಗಳು ಪಾತ್ರ ಮಹತ್ತರವಾದದು ಎಂದು ಎಡಗೈ ಸ್ಪಿನ್ನರ್ ಕೃನಾಲ್ ಪಾಂಡ್ಯ ವೇಗಿಗಳನ್ನು ಶ್ಲಾಘಿಸಿದ್ದಾರೆ. ಭಾನುವಾರದ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟಿ-20 ಪಂದ್ಯದಲ್ಲಿ 22 ರನ್ಗಳಿಂದ ಜಯ (ಡಿಎಲ್ಎಸ್ ನಿಯಮ) ಸಾಧಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಂಡ್ಯ, ಪಂದ್ಯದಲ್ಲಿ ವೇಗಿಗಳು ಬೇಗ ವಿಕೆಟ್ ಪಡೆಯುವ ಮೂಲಕ ಮಧ್ಯಮ ಓವರ್ಗಳಲ್ಲಿ ಸ್ಪಿನ್ನರ್ಗಳಿಗೆ ಸಹಕರಿಸುತ್ತಾರೆ ಎಂದು ಹೇಳಿದರು. ವಿಶೇಷವಾಗಿ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಹಾಗೂ ಭುವನೇಶ್ವರ್ ಕುಮಾರ್ ಚೆಂಡಿನೊಂದಿಗೆ ಪಂದ್ಯವನ್ನು ಅತ್ಯುತ್ತಮ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ, ಸರಣಿ ಗೆಲುವಿನಲ್ಲಿ ತಂಡದ ಎಲ್ಲ ಸದಸ್ಯರ ಕೊಡುಗೆ ಮರೆಯುವಂತಿಲ್ಲ ಎಂದು ಹೇಳಿದರು. ಎರಡೂ ಪಂದ್ಯಗಳಲ್ಲಿ ವಾಷಿಂಗ್ಟನ್ ಸುಂದರ್ ಬೌಲಿಂಗ್ ಅದ್ಭುತವಾಗಿತ್ತು. ಭುವಿ ವಿಶ್ವ ಶ್ರೇಷ್ಠ ಬೌಲರ್, ಈ ಬಗ್ಗೆ ಎಲ್ಲರಿಗೂ ತಿಳಿದಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಆಟಗಾರರು ಸ್ಥಿರ ಪ್ರದರ್ಶನ ತೋರಿದ್ದಾರೆ ಎಂದು ತಿಳಿಸಿದರು. ಭಾರತ ತಂಡ ಎಲ್ಲಿಗೇ ಪ್ರವಾಸ ಕೈಗೊಂಡರೂ ಅಭಿಮಾನಿಗಳು, ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ಸಹಕಾರ ನೀಡುತ್ತಾರೆ. ಭಾನುವಾರ ನಡೆದಿದ್ದ ಎರಡನೇ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಬಾಲ್ಯದ ಸ್ನೇಹಿತ ನಿಸರ್ಗ ಚೋಕ್ಸಿ ಅಂಗಳಕ್ಕೆ ಬಂದು ಪ್ರೋತ್ಸಾಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪಾಂಡ್ಯ, ನನ್ನ ಬಾಲ್ಯದ ಸ್ನೇಹಿತ ಅಂಗಳಕ್ಕೆ ಬಂದು ಸಹಕಾರ ನೀಡಿದ್ದು ಹೆಚ್ಚು ಖುಷಿ ನೀಡಿದೆ ಎಂದು ಭಾವನಾತ್ಮಕವಾಗಿ ಹೇಳಿದ ಅವರು, ನಾನು ಮತ್ತು ನಿಸರ್ಗ 12 ಮತ್ತು 14 ವಯೋಮಿತಿ ಪಂದ್ಯಗಳಲ್ಲಿ ಜತೆಯಲ್ಲಿ ಆಡಿದ್ದೆವು ಎಂದು ಸ್ಮರಿಸಿಕೊಂಡರು.