ಕಾರವಾರ 18: ಕೇಂದ್ರ ಸಚಿವ ಅನಂತಕುಮಾರ ಹೆಗಡೆಯದ್ದು ನಾಲಿಗೆ ರಾಜಕಾರಣ. ಅವರು ತಮಗಾಗಿ ಹಾಗೂ ಅಭಿವೃದ್ಧಿಗಾಗಿ ಮತ ಕೇಳಿದ್ದೇ ಇಲ್ಲ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಟೀಕಿಸಿದ್ದಾರೆ.
ಕಾರವಾರದಲ್ಲಿ ಜೆಡಿಎಸ್ ಪದಾಧಿಕಾರಿಗಳು ಮತ್ತು ತಮ್ಮ ಬೆಂಬಲಿಗರ ಸಭೆ ನಡೆಸಿದ ಅವರು ಕೆನರಾ ಲೋಕಸಭೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಜೆಡಿಎಸ್ ಕಾರ್ಯಕರ್ತರಿಗೆ ಸೂಚಿಸಿದರು. ಮಾಧ್ಯಮಗಳ ಜೊತೆ ಇದೇ ವೇಳೆ ಮಾತನಾಡಿದ ಅವರು ಕೆನರಾ ಸಂಸದ ಅನಂತಕುಮಾರ್ ತಮಗಾಗಿ ತಮ ಕೇಳಿದ್ದೇ ಇಲ್ಲ. ಮೋದಿಗಾಗಿ ಮತ ಕೇಳುತ್ತಿದ್ದಾರೆ. ಆದರೆ ಮೋದಿಯಿಂದ ಕೆನರಾ ಕ್ಷೇತ್ರಕ್ಕೆ ಒಂದೂ ಕೆಲಸ ಮಾಡಿಸಿಕೊಳ್ಳಲಿಲ್ಲ. ಬಂದರಿನ ಎರಡನೇ ಹಂತದ ವಿಸ್ತರಣೆಯ ಬಗ್ಗೆ, ಅಂಕೊಲಾ ಹುಬ್ಬಳ್ಳಿ ರೈಲು ಮಾರ್ಗದ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹಾಕಿಲಿಲ್ಲ. ದುರಂತ ಎಂದರೆ ನಮ್ಮ ಜಿಲ್ಲೆಗೆ ಬೇಕಾಗಿರುವ ಅಭಿವೃದ್ಧಿಯ ಬಗ್ಗೆ ಸಂಸತ್ತನಲ್ಲಿ ಧ್ವನಿಯೇ ಎತ್ತಲಿಲ್ಲ. ಯಾಕಾಗಿ ಅವರನ್ನು ಮತ್ತೆ ಆರಿಸಬಾರದು ಎಂದು ಮತದಾರರಲ್ಲಿ ಜಾಗೃತಿ ಮೂಡಿಸಲು ಕೆಲಸವನ್ನು ನಾನೇ ಮಾಡುತ್ತೇನೆ ಎಂದರು.
ಧರ್ಮಗಳ ಹೆಸರಲ್ಲಿ ಮನುಷ್ಯರನ್ನು ವಿಭಜಿಸಿ ರಾಜಕೀಯ ಮಾಡುವ ಅನಂತ ಕುಮಾರ್ ಹೆಗಡೆ ವಿರುದ್ಧ ಮೊಟ್ಟ ಮೊದಲಿಗೆ ಜಿಲ್ಲೆಯಲ್ಲಿ ಧ್ವನಿ ಎತ್ತಿದವನು ನಾನು. ನಾನು ನೇರಾ ನೇರ ಅನಂತಕುಮಾರ್ ಹೆಗಡೆಯನ್ನು ಟೀಕಿಸಿದ ನಂತರ ಬಿಜೆಪಿ ಪಕ್ಷದಲ್ಲಿನ ಅವರ ವಿರೋಧದ ಧ್ವನಿಗೆ ಬಲ ಬಂತು. ಅಲ್ಲದೇ ಅನಂತಕುಮಾರ್ ಹೆಗಡೆಯನ್ನು ಬಿಜೆಪಿ ರಾಷ್ಟ್ರೀಯ ನಾಯಕರು ದೇಶದ ವಿವಿಧ ರಾಜ್ಯಗಳಿಗೆ ಭಾಷಣ ಮಾಡಲು ಕಳಿಸುವುದಕ್ಕೆ ಬ್ರೇಕ್ ಹಾಕಿದರು. ಅನಂತಕುಮಾರ್ ಹೆಗಡೆ ಎಂಥ ಅಹಂಕಾರಿ ಎಂದರೆ ಅವರ ಪ್ರಚಾರಕ್ಕೆ ಯಡಿಯೂರಪ್ಪ ಬಂದಾಗ ಅವರನ್ನು ಸೌಜನ್ಯಕ್ಕೂ ಮಾತನಾಡಿಸಿದ, ಅವರಿಗೆ ನಮಸ್ಕಾರ ಸಹ ಮಾಡಿರಲಿಲ್ಲ. ನಾನು ಬಿಜೆಪಿಯಲ್ಲಿ ಇದ್ದುದರಿಂದ ಇಂಥ ಘಟನೆಗಳು ನೆನಪಲ್ಲಿ ಇವೆ. ಸ್ವತಃ ಬಿಜೆಪಿ ಕಾರ್ಯಕರ್ತರು, ಕೆಲ ನಾಯಕರು ಅನಂತಕುಮಾರ್ ಹೆಗಡೆಗೆ ಪಾಠ ಕಲಿಸಲು ಸಜ್ಜಾಗಿದ್ದಾರೆ ಎಂದರು.
ಕೌಶಲ್ಯ ಎಂದರೆ ಏನು ಎಂದು ಅರಿಯದ ಸಚಿವ:
ರಾಷ್ಟ್ರಪ್ರೇಮ, ಹಿಂದುತ್ವ ಎಂದು ಕೂಗಾಡುವ ಸಚಿವ ಅನಂತಕುಮಾರ್ ಹೆಗಡೆಗೆ ಕೌಶಲ್ಯ ಎಂಬ ಪದದ ಅರ್ಥವೇ ಗೊತ್ತಿಲ್ಲ. ಯುವಕರಿಗಾಗಿ ಇವರು ಏನು ಮಾಡಲಿಲ್ಲ. ಯುವಕರನ್ನು ಪ್ರಚೋದಿಸಿದ್ದು ಬಿಟ್ಟರೆ ಏನು ಮಾಡಲಿಲ್ಲ. ಹಿಂದುಳಿದ ವರ್ಗದ ಯುವಕರನ್ನು ತಪ್ಪು ಹಾದಿಗೆ ಮಾರ್ಗ ತೋರಿಸಿದರು ಎಂದು ಟೀಕಿಸಿದರು. ಜೆಡಿಎಸ್ ಮುಖಂಡರಾದ ಆರ್.ಜಿ.ನಾಯ್ಕ, ಎಂ.ಖಲಿಲುಲ್ಲಾ, ಪ್ರಕಾಶ್ ನಾಯ್ಕ, ಪುರುಷೋತ್ತಮ ಸಾವಂತ, ಅಜಿತ್ ಪೊಕಳೆ ಸೇರಿದಂತೆ ಹಲವರು ಇದ್ದರು.