ಚಿಕ್ಕೋಡಿ 24: ರಾಯಬಾಗ ವಿಧಾನಸಭೆ ಕ್ಷೇತ್ರದ ರೈತರ ಬಹುದಿನಗಳ ಬೇಡಿಕೆಯಾದ ಕರಗಾಂವ ಏತ ನೀರಾವರಿ ಯೋಜನೆಯ ಕಾಮಗಾರಿ ಬರುವ ಜನೇವರಿ ತಿಂಗಳಲ್ಲಿ ಆರಂಭವಾಗಲಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಭರವಸೆ ನೀಡಿದರು.
ತಾಲೂಕಿನ ವಿಜಯನಗರ ಮತ್ತು ಬೆಣ್ಣಿಹಳ್ಳಿ ಗ್ರಾಮದಲ್ಲಿ 60 ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಪೂಜೆ ನೇರವೇರಿಸಿ ಅವರು ಮಾತನಾಡಿದರು. ಕರಗಾಂವ ಏತ ನೀರಾವರಿ ಯೋಜನೆ ಟೆಂಡರ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಹತ್ತಿರ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ಕೊಡಲಾಗುತ್ತದೆ ಎಂದರು.
ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಮಂಜೂರು ಮಾಡಿಸಲಾಗಿದೆ. ವಿಜಯ ನಗರದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲು 35 ಲಕ್ಷ ರೂ ಅನುದಾನ ಮಂಜೂರು ಮಾಡಲಾಗಿದೆ. ಬೆಣ್ಣಿಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 25 ಲಕ್ಷ ರೂ ಅನುದಾನ ಮಂಜೂರು ಮಾಡಲಾಗಿದೆ ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪವನ ಕತ್ತಿ ಮಾತನಾಡಿ ಸರ್ಕಾರದ ಗ್ಯಾರಂಟಿ ಭರಾಟೆಯಲ್ಲಿ ಶಾಸಕ ಐಹೊಳೆ ಅವರು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುತ್ತಿರುವುದು ಕ್ಷೇತ್ರದ ಜನ ಪುಣ್ಯ ಮಾಡಿದ್ದಾರೆ. ಕ್ಷೇತ್ರದ ಜನರ ಶ್ರಯೋಭಿವೃದ್ಧಿಗಾಗಿ ದುಡಿಯುತ್ತಿರುವ ಐಹೊಳೆ ಅವರ ಬೆಣ್ಣಿಗೆ ಕ್ಷೇತ್ರದ ಜನ ನಿಲ್ಲಬೇಕು. ಅಭಿವೃದ್ಧಿ ಮಾಡಿದವರನ್ನು ಮರೆಯಬಾರದು ಎಂದರು.
ಈ ಸಂದರ್ಭದಲ್ಲಿ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಸಂಚಾಲಕ ಸುರೇಶ ಬೆಲ್ಲದ, ಜಾಗನೂರ ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮಣ ಮಂಗಿ, ಮಾಜಿ ಅಧ್ಯಕ್ಷ ಮಹಾಂತೇಶ ಶಿರಗೂರ, ಮಹೇಶ ಪಾಟೀಲ, ಬೀರ್ಪ ನಸಲಾಪೂರೆ, ತಿಮ್ಮಣ್ಣಾ ಗಾಡಿವಡ್ಡರ, ಮಲ್ಲೇಶ ಹಣಮಂತಗೋಳ, ಶಿವರಾಯ ಸನದಿ ಸೇರಿದಂತೆ ಮುಂತಾದವರು ಇದ್ದರು.