ಶಿವಮೊಗ್ಗ, ನ 4: ಚಿತ್ರರಂಗ ಕಲಾವಿದರು ಗುತ್ತಿಗೆ ಕಾರ್ಮಿಕರೇ ಆಗಿದ್ದು, ರಾಜ್ಯದ ಚಿತ್ರರಂಗವನ್ನು ಉದ್ಯಮವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಹಾಗೂ ನಟ ಕುಮಾರಬಂಗಾರಪ್ಪ ಹೇಳಿದ್ದಾರೆ. ಸೊರಬ ತಾಲೂಕಿನ ಜಡೆ ಹೋಬಳಿ ಧ್ವನಿ--ಬೆಳಕು-ಶಾಮಿಯಾನ ಮಾಲೀಕರ ಸಂಘದ ವತಿಯಿಂದ ಜಡೆ ಗ್ರಾಮದ ಸಿದ್ಧವೃಷಬೇಂದ್ರ ಪದವಿಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಂದೆ ಎಸ್.ಬಂಗಾರಪ್ಪ ಸರ್ಕಾರದಲ್ಲಿ ಮೊದಲ ಬಾರಿಗೆ ಶಾಮಿಯಾನ ಸಂಘದವರಿಗೂ ರಾಜ್ಯಪ್ರಶಸ್ತಿ ನೀಡಲಾಗಿತ್ತು ಎಂದು ನೆನಪು ಮಾಡಿಕೊಂಡರು. ಚಿತ್ರರಂಗವನ್ನು ಇದುವರೆಗೆ ಉದ್ಯಮವಾಗಿ ಗುರುತಿಸದಿರುವುದು ದುರದೃಷ್ಟಕರ. ಚಿತ್ರೀಕರಣ ಸಂದರ್ಭದಲ್ಲಿ ಕಲಾವಿದರು ಅನಾಹುತಕ್ಕೆ ಅಪಘಾತಕ್ಕೆ ಸಿಲುಕುವ ಸಂದರ್ಭ ಎದುರಾಗುತ್ತಲೇ ಇರುತ್ತದೆ. ಚಿತ್ರರಂಗವನ್ನು ಉದ್ಯಮವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ರಾಜ್ಯದ ಕಲಾವಿದರಿಗೆ ವೇದಿಕೆಯಲ್ಲಿ ಅವಕಾಶ ಮಾಡಿಕೊಡುವುದಲ್ಲದೇ ಪ್ರೋತ್ಸಾಹಿಸುವುದು ಕೂಡ ಮುಖ್ಯ. ನಮ್ಮ ನಮ್ಮ ಮನೆಗಳಲ್ಲಿ ಸ್ಪಷ್ಟವಾಗಿ ಕನ್ನಡವನ್ನು ಮೊದಲು ಮಾತನಾಡಿ, ಮಕ್ಕಳಿಗೆ ಮನೆಯಿಂದಲೇ ವ್ಯಾಕರಣದ ಪಾಠ ಕಲಿಸಬೇಕು. ಮನಸಾರೆ ನಗುಮೊಗದಿಂದ ಮಾತೃಭಾಷೆಯನ್ನು ಉಚ್ಚರಿಸಬೇಕು ಎಂದರು. ಮಳೆಯಿಂದ ಹಾನಿಯಾಗಿರುವ ರಸ್ತೆಗಳ ಗುಂಡಿ ಮುಚ್ಚಲಾಗುವುದು. ಕೆರೆ ಕಟ್ಟೆ ತುಂಬಿದೆ, ಬೆಳೆ ಹಾಳಾಗಿದೆ. ನಾಲ್ಕು ಹೋಬಳಿಗಳಿಗೆ ನಿರಂತರ ನೀರು ಪೂರೈಸುವ, ಜಡೆಗೆ ಸುಸಜ್ಜಿತ ಬಸ್ ನಿಲ್ದಾಣ, ಗುಡವಿ ಮತ್ತು ಕೆರೆಹಳ್ಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಕುಮಾರ್ ಬಂಗಾರಪ್ಪ ಭರವಸೆ ನೀಡಿದ್ದಾರೆ.