ಲೋಕದರ್ಶನ ವರದಿ
ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕ್ರೃತಿಕ ಸಂಭ್ರಮ ಸಮಾರೋಪ; ಗಡಿ ಗಟ್ಟಿ ಇದ್ದರೆ ನಾಡು, ಧಡಿ ಗಟ್ಟಿ ಇದ್ದರೆ ಸೀರೆ: ರಾಜು ಕಾಗೆ
ಕಾಗವಾಡ 25: ಬೆಳಗಾವಿ ನೆಲದ ಕೆಲವು ಪ್ರದೇಶಗಳು ಸಾಂಸ್ಕೃತಿಕವಾಗಿ ಕಳೆದುಹೋಗುತ್ತಿರುವ ದಿನಮಾನಗಳಲ್ಲಿ ಭಾಷಿಕ ಸಮನ್ವಯ ಸಾಧಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಾನವನ ಹೃದಯವಂತಿಕೆಯನ್ನು ಹೆಚ್ಚಿಸಬೇಕಾದರೇ ಸಾಂಸ್ಕೃತಿಕ ಸಾಮರಸ್ಯ ಅಗತ್ಯವಾಗಿದೆಯೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.
ಅವರು, ಶುಕ್ರವಾರ ದಿ. 25 ರಂದು ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶಿವಾನಂದ ಮಹಾವಿದ್ಯಾಲಯ ಇವುಗಳ ಸಹಯೋಗದಲ್ಲಿ ನಡೆದ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿಡುತ್ತಿದ್ದರು.
ಹಾರೂಗೇರಿಯ ವಿಶ್ರಾಂತ ಪ್ರಾಚಾರ್ಯ ಡಾ. ವ್ಹಿ.ಎಸ್. ಮಾಳಿ ಮಾತನಾಡಿ, ಕಾಗವಾಡದಂತಹ ಗಡಿ ಪ್ರದೇಶದಲ್ಲಿ ಧಾರವಾಡದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಕರೆದು ತಂದಿದ್ದು ಅತ್ಯಂತ ಅರ್ಥಪೂರ್ಣವಾಗಿದೆ. ಗಡಿಭಾಗದ ಅನೇಕ ಹಳ್ಳಿಗಳಲ್ಲಿ ಮರಾಠಿ ಭಾಷಿಕರು ಪ್ರತಿ ವರ್ಷ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುತ್ತಾರೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ಅವರಂತೆ ನಾವೂ ನಮ್ಮ ನೆಲದಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕನ್ನಡಿಗರಾದ ನಾವೂ ಭಾಷಾ ಪ್ರೇಮವನ್ನು ಮೆರೆಯಬೇಕಾಗಿದೆ. ಇದಕ್ಕೆ ಕಾಗವಾಡದ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.
ಹಿರಿಯ ವಿದ್ವಾಂಸ ಡಾ.ಎಂ.ಬಿ. ಹೂಗಾರ ಮಾತನಾಡಿದರು. ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಎ. ಕರ್ಕಿ ವಹಿಸಿದ್ದರು. ಮೊದಲಿಗೆ ಗಡಿಭಾಗದ ತಲ್ಲಣಗಳು ಮತ್ತು ಸಾಂಸ್ಕೃತಿಕ ಭಾಂಧವ್ಯ ಕುರಿತು ವಿಚಾರ ಸಂಕಿರಣ ನಡೆಯಿತು. ನಂತರ ಕವಿಗೋಷ್ಠಿ ನಡೆಯಿತು.
ಇದೇ ವೇಳೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ 10 ಜನ ಸಾಧಕರಿಗೆ ಸನ್ಮಾನ ಮಾಡಲಾಯಿತು. ನಂತರ ಗೋಕಾಕದ ನೃತ್ಯಪಟುಗಳು ಸೇರಿದಂತೆ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಈ ವೇಳೆ ಮುಖಂಡರಾದ ಜ್ಯೋತಿಕುಮಾರ ಪಾಟೀಲ, ಸಪ್ನೀಲ ಪಾಟೀಲ, ರಮೇಶ ಚೌಗುಲೆ, ಶಂಕರ ಹಲಗತ್ತಿ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಬಸವರಾಜ ಗಾರ್ಗಿ, ಜಿನದತ್ತ ಹಡಗಲಿ, ಪ್ರೊ. ಆರ್.ಎಸ್. ನಾಗರಡ್ಡಿ, ಪ್ರೊ. ಎಸ್.ಎಸ್. ಫಡತರೆ, ಡಾ. ಎಸ್.ಪಿ. ತಳವಾರ, ಡಾ. ಆರ್.ಎಸ್. ಕಲ್ಲೋಳಿಕರ, ಪ್ರೊ. ಎಸ್.ಎಸ್. ಮೋರೆ, ಪ್ರೊ. ಬಿ.ಆಯ್. ಜಗದಮನಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು.
ಫೋಟೋ ಶಿರ್ಷಿಕೆ: (25 ಕಾಗವಾಡ-3) ಕಾಗವಾಡ ಪಟ್ಟಣದಲ್ಲಿ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಮತ್ತು ಸಾಂಸ್ಕೃತಿಕ ಸಂಭ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಶಾಸಕ ರಾಜು ಕಾಗೆ ಮಾತನಾಡುತ್ತಿರುವ ಚಿತ್ರ.