ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಅದು ಕನ್ನಡಿಗರ ಹಬ್ಬ : ಡಾ. ಸಂದೀಪ್ ಪಾಟೀಲ

ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಅದು ಕನ್ನಡಿಗರ ಹಬ್ಬ : ಡಾ. ಸಂದೀಪ್ ಪಾಟೀಲ Kannada Sahitya Sammelana is a festival of Kannadigas: Dr. Sandeep Patil

          ಸಿಂದಗಿ 31:  ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಅದು ಕನ್ನಡಿಗರ ಹಬ್ಬ. ಇಲ್ಲಿ ಹಲವಾರು ವಿಚಾರಧಾರೆಗಳು ಅನಾವರಣಗೊಳ್ಳುವುದರಿಂದ ಇದು ಜ್ಞಾನದ ಹಬ್ಬವೂ ಹೌದು. ಇಂತಹ ಕನ್ನಡದ ಅಸ್ಮಿತೆಯ, ಕನ್ನಡಾಂಬೆಯ  ನುಡಿ ಜಾತ್ರೆಗೆ ಅಖಂಡ ಸಿಂದಗಿ ತಾಲೂಕಿನ ವೈದ್ಯರೆಲ್ಲರೂ ತನು-ಮನ, ಧನದಿಂದ ಸಂಪೂರ್ಣ ಸಹಾಯ ಸಹಕಾರ ನೀಡುವ ಭರವಸೆಯನ್ನು  ತಾಲೂಕು ವೈದ್ಯರ ಸಂಘದ ಅಧ್ಯಕ್ಷ ಡಾ. ಸಂದೀಪ್ ಪಾಟೀಲ ವ್ಯಕ್ತಪಡಿಸಿದರು.   

           ತಾಲೂಕು ಪಂಚಾಯತ್ ಸಭಾಭವನದಲ್ಲಿ 21 ನೇಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ  ಪೂರ್ವಭಾವಿಯಾಗಿ ಹಮ್ಮಿಕೊಂಡ ವೈದ್ಯರುಗಳ ಸಭೆಯಲ್ಲಿ ಮಾತನಾಡಿದ ಅವರು ಸುದೀರ್ಘ 14 ವರ್ಷಗಳ  ನಂತರ  ಸಿಂದಗಿ ತಾಲೂಕಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಎರಡು ದಿನಗಳವರೆಗೆ ಜರುಗುವ ನಾಡ ನುಡಿ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮ್ಮೇಳನದ ಯಶಸ್ಸಿಗೆ ಕೈಜೋಡಿಸುವುದಾಗಿ ಹೇಳಿದರು.                           

         ಕಾರ್ಯಕ್ರಮದ ರೂಪರೇಷೆಯ ಕುರಿತು ವಿವರಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ್ ಮಾತನಾಡಿ ಸಮ್ಮೇಳನದ ಉದ್ಘಾಟನೆಯ ಪ್ರಥಮ ದಿನ ಸಾರೋಟಿನಲ್ಲಿ  ಸರ್ವಾಧ್ಯಕ್ಷರ ಮೆರವಣಿಗೆ ಜೊತೆ ಜೊತೆಗೆ ಸಾವಿರಾರು ಮಕ್ಕಳು, ತಾಯಂದಿರಿಂದ ಕುಂಭಮೇಳ, ಎರಡನೆಯ ದಿನ ವಿವಿಧ ಗ್ರಾಮಗಳಿಂದ ಆಗಮಿಸುವ ಮಾತೆಯರಿಂದ ಬುತ್ತಿ ಜಾತ್ರೆ ಜರುಗುವುದು.

          ವಿವಿಧ ಗೋಷ್ಠಿಗಳಾದ ಮಹಿಳಾ ಘೋಷ್ಠಿ, ವಚನ ಸಾಹಿತ್ಯ ಗೋಷ್ಠಿ, ಕವಿಗೋಷ್ಠಿ, ಬಂಡಾಯ ಸಾಹಿತ್ಯದ ಗೋಷ್ಠಿ ಹೀಗೆ ಪ್ರತಿ ಗೋಷ್ಠಿಯಲ್ಲೂ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಮಕ್ಕಳ ಹಾಗೂ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವ ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೈ ಸಿ ಮಯೂರ್ ಮಾತನಾಡಿ ತಾಲೂಕಿಗೆ ಕೊಟ್ಟ ವಿಶಿಷ್ಠ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಎಲ್ಲರಲ್ಲಿ ಮನವಿ ಮಾಡಿಕೊಂಡರು.       

               ಪರಿಷತ್ತಿನ ಗೌರವ ಕಾರ್ಯದರ್ಶಿ ಆನಂದ ಶಾಬಾದಿ ಸ್ವಾಗತಿಸಿ ನಿರೂಪಿಸಿದರು. ರಾಜಶೇಖರ್ ನರಗೋದಿ ವಂದಿಸಿದರು. ಆಯುಷ್ ಫೆಡರೇಶನ್ನಿನ ಅಧ್ಯಕ್ಷ ಡಾ. ಶಿವಾನಂದ್  ಹೊಸಮನಿ,ಚಿಕ್ಕ ಮಕ್ಕಳ ವೈದ್ಯ ಡಾ. ಹಿರೇಗೌಡರ, ಡಾ. ಮಹಾಂತೇಶ ಹಿರೇಮಠ ವೇದಿಕೆಯ ಮೇಲಿದ್ದರು. ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಎಸ್ ಎಸ್ ಬಾಗೇವಾಡಿ, ಡಾ. ಅನಿಲ ಹೂಗಾರ, ಡಾ. ರವಿ ಬಿರಾದಾರ, ಡಾ. ವಿಶ್ವರಾಧ್ಯ ಲೋಣಿ, ಡಾ.ಸುಧಾಕರ ಶಾಬಾದಿ. ಡಾ. ಅಬೂಬಕರ್ ಮುಲ್ಲಾ, ಡಾ. ವೀರೇಶ್ ಅಂಗಡಿ, ಡಾ. ಚೇತನ್ ಪಾಟೀಲ. ಪತ್ರಕರ್ತರಾದ ಅಂಬರೀಶ ಸುಣಗಾರ ನಾಗೇಶ್ ತಳವಾರ್, ನಿಂಗರಾಜ ಅತನೂರ, ವಿ.ಜಿ ಪಾಟೀಲ, ಶಿವಕುಮಾರ್ ಶಿವಶಿಂಪಿಗೇರ, ಸುನಂದಾ ಯಂಪುರೆ, ನೀಲಮ್ಮ ಯಡ್ರಾಮಿ, ಶಾರದಾ ಬೆಟಗೇರಿ, ಸೈನಾಬಿ ಮಸಳಿ, ಲಕ್ಷ್ಮೀ ಪೊಲೀಸ್ ಪಾಟೀಲ, ವರ್ಷಾ ಪಾಟೀಲ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.