ಕಲಬುರಗಿ , ಫೆ 5 ಇಂದಿನಿಂದ ಮೂರು ದಿನಗಳವರೆಗೆ ತೊಗರೆ ಕಣಜ ಕಲಬುರಗಿಯಲ್ಲಿ ಏರ್ಪಡಿಸಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯಾಸಕ್ತರ ದಂಡೇ ಆಗಮಿಸುತ್ತಿದೆ.ಸಮ್ಮೇಳನದ ನಿಮಿತ್ಯ ಬುಧವಾರ ಬೆಳಿಗ್ಗೆ 8 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಗಳು, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾದ ಗೋವಿಂದ ಎಂ. ಕಾರಜೋಳ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಅಲ್ಲದೇ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಅವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ಇನ್ನು, ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ವೀರಭದ್ರ ಸಿಂಪಿ ಅವರು ನಾಡ ಧ್ವಜಾರೋಹಣ ನೆರವೇರಿಸಿದರು. ಈ ಸಮ್ಮೇಳನದಲ್ಲಿ 3 ಲಕ್ಷಕ್ಕಿಂತ ಅಧಿಕ ಜನರು ಪಾಲ್ಗೊಳ್ಳುವ ಮೂಲಕ ಸಮ್ಮೇಳನದ ಮೆರಗನ್ನು ಹೆಚ್ಚಿಸಲಿದ್ದಾರೆ. ಇಂದು ಬೆಳಗ್ಗೆ 11.30ಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲದ ಆವರಣದಲ್ಲಿ ನ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.