ದೈಹಿಕ ಶಿಕ್ಷಕ, ಕನ್ನಡ ಪರಿಚಾರಕ, ಅತ್ಯುತ್ತಮ ಸಂಘಟಕ, ಕನ್ನಡ ಪರ ಹೋರಾಟಗಾರ ಹೀಗೆ ಬಹುಮುಖ ಸಾಧನೆಗಳ ವ್ಯಕ್ತಿ ಆರ್.ಎಂ.ಪಾಟೀಲರು. ಕನ್ನಡ ಸಾಹಿತ್ಯ ಲೋಕದ ವ್ಯಾಪ್ತಿಯನ್ನು ವಿಸ್ತರಿಸಿದವರು. ಅವರು ಪೋಷಿಸಿದ ಸಾಹಿತ್ಯ, ಸಂಸ್ಕೃತಿ ಪಾಲಿಸಿಕೊಂಡು ಬಂದ ಶಿಷ್ಯ ಪರಂಪರೆ ಬಹುದೊಡ್ಡದು.
ರಾಮನಗೌಡಾ ಪಾಟೀಲರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ 1953ರ ಮಾರ್ಚ್ 1ರಂದು ಜನಿಸಿದರು. ತಂದೆ ಮಲಗೌಡ, ತಾಯಿ ಗಂಗವ್ವ. ರಾಮನಗೌಡರು ತಾಯಿಯ ತವರುಮನೆ ಎಬರಟ್ಟಿಯಲ್ಲಿ ನಾಲ್ಕನೇ ತರಗತಿಯವರೆಗೆ ಪೂರೈಸಿ, ನಂತರ 5ರಿಂದ 7ನೇ ತರಗತಿವರೆಗೆ ಚಿಕ್ಕನಂದಿಯಲ್ಲಿ ಓದಿದರು. ಅವರು ಮಮದಾಪುರದ ಚಿಂತಾಮಣಿ ಪಾವಟೆ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದು, ಗೋಕಾಕದ ಜೆ.ಎಸ್.ಎಸ್ ಪದವಿ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಪೂರೈಸಿದರು. ರಾಮನಗೌಡರು ಬೆಳಗಾವಿಯ ಬೆನನ್‌ಸ್ಮಿತ್ ಕಾಲೇಜಿನಿಂದ ಬಿ.ಪಿ.ಇಡಿ. ಯನ್ನು ಮುಗಿಸಿದರು. ನಂತರ ಅವರು ಬಾಹ್ಯ ವಿದ್ಯಾರ್ಥಿಯಾಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ತಾತಕೋತ್ತರ ಪದವಿಯನ್ನು ಪಡೆದರು.
1979ರಲ್ಲಿ ಬಾಗಲಕೋಟೆಯ ಬಿ.ವಿ.ವಿ ಸಂಘದಿಂದ ರಾಮದುರ್ಗಸ ಸ್ಟೇಟ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ಆರ್.ಎಂ.ಪಾಟೀಲರು ವೃತ್ತಿಯನ್ನು ಪ್ರಾರಂಭಿಸಿದರು. ಅವರು 2013ರವರೆಗೆ 36 ವರ್ಷಗಳ ಅನುಪಮ ಸೇವೆ ಸಲ್ಲಿಸಿ ಮುಧೋಳದ ಆರ್.ಎಮ್.ಜಿ ಪದವಿಪೂರ್ವ ಕಾಲೇಜಿನಲ್ಲಿ ನಿವೃತ್ತಿ ಹೊಂದಿದರು. ರಾಮನಗೌಡರ ಗರಡಿಯಲ್ಲಿ ಪಳಗಿದ ಅನೇಕ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಭಾಗ, ರಾಜ್ಯ, ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗಿ ಕೀರ್ತಿ ತಂದಿದ್ದಾರೆ. ದೈಹಿಕ ಶಿಕ್ಷಕರಾಗಿ ಗ್ರಾಮೀಣ ಮಕ್ಕಳಿಗೆ ಅವರು ನೀಡಿರುವ ತರಬೇತಿ, ಶಿಷ್ಯವೃಂದ ಪಡೆದಿರುವ ಬಹುಮಾನ ಮತ್ತು ಪ್ರಶಸ್ತಿಗಳನ್ನು ಗಮನಿಸಿದರೆ, ಅವರ ವೃತ್ತಿ ಕೌಶಲ್ಯ, ಪರಿಶ್ರಮ ಹೇಗಿದೆ ಎನ್ನುವುದು ಕಂಡುಬರುತ್ತದೆ. ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ತೋರುತ್ತಿದ್ದ ರಾಮನಗೌಡರು ಸ್ವತಃ ವಿದ್ಯಾರ್ಥಿದೆಸೆಯಲ್ಲಿ ಕ್ರೀಡಾಪಟುವಾಗಿದ್ದರು. ಅವರು ಮುಂದೆ ದೈಹಿಕ ಶಿಕ್ಷಕ ಆಗಲೇಬೇಕು ಎನ್ನುವ ಗುರಿಯೊಂದಿಗೆ ಪದವಿ ಮುಗಿಸಿ, ಬಿಪಿಇಡಿ ಕೋರ್ಸ್ ಮಾಡಿದರು. ಮಕ್ಕಳ ಸಾಧನೆಯಲ್ಲಿ ಆತ್ಮತೃಪ್ತಿಯನ್ನು ಕಂಡವರು. ಆರ್.ಎಂ.ಪಾಟೀಲರು ದೈಹಿಕ ಶಿಕ್ಷಣದ ಜೊತೆಗೆ ಪಿಯು ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಮತ್ತು ಪ್ರೌಢಶಾಲೆಯಲ್ಲಿ ಕನ್ನಡ, ಇತಿಹಾಸವನ್ನು ಬೋಧಿಸಿರುವುದು ವಿಶೇಷವಾದುದು. ಅದಕ್ಕಾಗಿ ಅಂದಿನ ಪ್ರಾಚಾರ್ಯ ಆರ್.ವ್ಹಿ.ಪಾವಟೆ ಅವರನ್ನು ಮನದುಂಬಿ ನೆನೆಯುತ್ತಾರೆ. ಅವರು ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಯಾಗಿ ಸಮರಾ್ಣ ಮನೋಭಾವದಿಂದ ಸೇವೆ ಸಲ್ಲಿಸಿರುವರು.
ಕನ್ನಡಪರ ಚಟುವಟಿಕೆಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡ ಆರ್.ಎಂ.ಪಾಟೀಲ ಅವರು 2001ರಿಂದ 2004ರವರೆಗೆ ಕನ್ನಡಸಾಹಿತ್ಯ ಪರಿಷತ್ತಿನ ರಾಮದುರ್ಗ ತಾಲೂಕಾ ಘಟಕದ ಅಧ್ಯಕ್ಷರಾಗಿ ತಾಲೂಕಿನಲ್ಲಿ ಕನ್ನಡಾಭಿಮಾನವನ್ನು ಮೆರೆಸಿದರು. ಅವರು ತಮ್ಮ ಮೂರು ವರ್ಷದ ಅವಧಿಯಲ್ಲಿ ಉದಯೋನ್ಮಖ ಕವಿಗಳ ಕವನಗಳನ್ನು ಒಗ್ಗೂಡಿಸಿ, ‘ಭಾವತರಂಗ : ಕವನಸಂಕಲವನ್ನು ಸಂಪಾದಿಸಿ ಬಿಡುಗಡೆಗೊಳಿಸಿದರು. ಕವಿಗಳ ಪರಿಚಯಿಸುವ ಕಾರ್ಯಕ್ರಮವನ್ನು ನಿರಂತರವಾಗಿ ಮೂರು ತಿಂಗಳವರೆಗೆ ಏರಿ್ಡಸಿ, ‘ಕನ್ನಡ ಕವಿ-ಕಾವ್ಯ ಪರಂಪರೆ’ ಕೃತಿಯನ್ನು ಸಂಪಾದಿಸಿ ಬಿಡುಗಡೆಗೊಳಿಸಿದರು. ಸಾಲಿ ರಾಮಚಂದ್ರರಾಯರು, ಡಿ.ಎಸ್.ಕರ್ಕಿ ಮತ್ತು ಬಿ.ಸಿ ದೇಸಾಯಿ ಅವರುಗಳ ಹೆಸರುಗಳನ್ನು ಪುರಸಭೆಯ ಒಪ್ಪಿಗೆಯೊಂದಿಗೆ ರಾಮದುರ್ಗ ಪಟ್ಟಣದ ಪ್ರಮುಖ ರಸ್ತೆಗಳಿಗೆ ನಾಮಕರಣ ಮಾಡಿದರು. ಅವರು ತಮ್ಮ ಅವಧಿಯಲ್ಲಿ ಕಸಾಪ ಸದಸ್ಯರ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿದರು. ಅಲ್ಲದೇ 2004ರಲ್ಲಿ ರಾಮದುರ್ಗ ತಾಲೂಕಿನ ಕನ್ನಡಸಾಹಿತ್ಯ ಪರಿಷತ್ತಿನ ಪ್ರಥಮ ಸಮ್ಮೇಳನವನ್ನು ಅತೀ ಅದ್ದೂರಿಯಾಗಿ ನೆರವೇರಿಸಿದ ಶ್ರೇಯಸ್ಸು ಆರ್.ಎಮ್.ಪಾಟೀಲರಿಗೆ ಸಲ್ಲುತ್ತದೆ. ಈ ಸಂದರ್ಭದಲ್ಲಿ ಸಮ್ಮೇಳನದ ಸವಿನೆನಪಿಗಾಗಿ ‘ದರ್ಣ’ ಎಂಬ ಎಂಬ ಸ್ಮರಣ ಸಂಚಿಕೆಯನ್ನು ತಮ್ಮ ಸಂಪಾದಕತ್ವದಲ್ಲಿ ಬಿಡುಗಡೆಗೊಳಿಸಿದರು.
ವಿಜಯಪುರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಒಂದು ತಿಂಗಳ ಪ್ರವಚನವನ್ನು 2017ರಲ್ಲಿ ರಾಮದುರ್ಗದ ಬಿ.ವಿ.ವಿ. ಸಂಘದ ಬಸವೇಶ್ವರ ಶಾಲೆಯ ಮೈದಾನದಲ್ಲಿ ಜಗದಾತ್ಮಾನಂದ ಶ್ರೀಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಏರಿ್ಡಸಿದ ಕೀರ್ತಿ ಆರ್.ಎಂ.ಪಾಟೀಲರಿಗೆ ಸಲ್ಲುತ್ತದೆ. ಅಲ್ಲದೇ ಅವರು ಮಹಾಂತೇಶ ನಗರ ರಹವಾಸಿಗಳ ಸಂಘದ ಉಪಾಧ್ಯಕ್ಷರಾಗಿ ಹಾಗೂ ಶ್ರೀ ಶಿವಲಿಂಗ ಮತ್ತು ನಾಗದೇವತೆ ದೇವಸ್ಥಾನದ ಜೀರ್ಣೋದ್ಧಾರ, ಶ್ರಾವಣ ಮಾಸದ ಕಾರ್ಯಕ್ರಮಗಳನ್ನು ಸಂಘಟಿಸುವ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಖಾಸಗಿ ಪ.ಪೂ ಮಹಾವಿದ್ಯಾಲಯಗಳ ನೌಕರರ ಸಂಘದಲ್ಲಿ ಕ್ರಿಯಾಶೀಲ ವ್ಯಕ್ತಿಯಾಗಿ ರಾಮನಗೌಡರು ದುಡಿದಿರುವರು. ಅವರು ತಾಲೂಕಾ ಘಟಕದ ಕಾರ್ಯದರ್ಶಿಯಾಗಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್, ವಿಜ್ಞಾನ ವಿಷಯಗಳ ವಿಶೇಷ ಕಾರ್ಯಗಾರಗಳನ್ನು ಸಂಘದ ಅಡಿಯಲ್ಲಿ ಹಮ್ಮಿಕೊಂಡು, ತಾಲೂಕಿನಲ್ಲಿ ಉತ್ತಮ ಫಲಿತಾಂಶ ಬರಲು ಕಾರಣೀಕರ್ತರರಾಗಿದ್ದಾರೆ. ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿಯಾಗಿಯೂ ಅವರು ಸೇವೆಯನ್ನು ಸಲ್ಲಿಸಿದ್ದು, ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.
ಆರ್.ಎಂ.ಪಾಟೀಲರು ಯಾವುದೇ ಬಿಗುಮಾನಗಳಿಲ್ಲದೇ ಎಲ್ಲರೊಂದಿಗೆ ಬೆರೆಯುವ ಸಹೃದಯಿ. ಅವರು ಬೋಧನೆ, ಚಿಂತನೆ, ಸಂಸ್ಕೃತಿಗಳ ಸಂಗಮದ ವ್ಯಕ್ತಿತ್ವವುಳ್ಳವರಾಗಿದ್ದಾರೆ. ರಾಮನಗೌಡರು 1981ರಲ್ಲಿ ಕಲಾವತಿ ಅವರನ್ನು ವಿವಾಹವಾದರು. ಅವರ ಸುಖ ದಾಂಪತ್ಯದಲ್ಲಿ ಭಾರತಿ, ಗಿರಿಜಾ, ವಿದ್ಯಾ ಮತ್ತು ವಿನಯ ಜನಿಸಿದರು. ಭಾರತಿ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿದ್ದರೆ, ಗಿರಿಜಾ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾ ಸಾಪ್ಟ್‌ವೇರ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವಿನಯ ಜೈಪುರದ ಕರ್ನಾಟಕ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಧ್ಯ ಅವರು ರಾಮದುರ್ಗದ ಮಹಾಂತೇಶ ನಗರದಲ್ಲಿ ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಜೀವನ ಕಳೆಯುತ್ತಿದ್ದಾರೆ. ಅವರ ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ನಾಡಿನ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿವೆ. ಅವರು ಕಳೆದ ಮೂರು ದಶಕಗಳಿಂದ ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಅದ್ಭುತವಾದುದು. ಸಮನ್ವಯದ ಹಾದಿಯಲ್ಲಿ ಮಾನವೀಯ ಬದುಕು ಸಾಧಿಸಬೇಕು ಎಂಬ ಚಿಂತನೆಯುಳ್ಳ ರಾಮನಗೌಡರು ಅವರು ಈಗಲೂ ಸಹ ಸೃಜನಶೀಲರಾಗಿ ಕಾರ್ಯೋನ್ಮುಖರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
- * * * -