ದಾಸ ಶ್ರೇಷ್ಠರಲ್ಲಿ ಕನಕದಾಸರು ಅಗ್ರಗಣ್ಯರು: ಬಸವರಾಜ

ಕೊಪ್ಪಳ: ಕರ್ನಾಟಕ ಕೀರ್ತನೆ ಸಾಹಿತ್ಯದ ಅಶ್ವಿನಿ ದೇವತೆ ಎಂದು ಹೆಸರಾದ ದಾಸ ಶ್ರೇಷ್ಠರಲ್ಲಿ ಕನಕದಾಸರು ಅಗ್ರಗಣ್ಯರು ಎಂದು ಕೊಪ್ಪಳದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೋ. ಬಸವರಾಜ ಬೆಣ್ಣಿ ಹೇಳಿದರು.

       ಕೊಪ್ಪಳದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ನ. 15 ರಂದು ಹಮ್ಮಿಕೊಂಡಿದ್ದ ಕನಕದಾಸರ 532ನೇ ಜನ್ಮದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜ, ಸಮುದಾಯಗಳನ್ನು ಕಟ್ಟುವ, ಬೆಳೆಸುವ ಮತ್ತು ಅವುಗಳನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಇಂತಹ ದಾರ್ಶನಿಕರ ಕೊಡುಗೆ ಅವಿಸ್ಮರಣೀಯ. ಕನಕದಾಸರು ಭಕ್ತಿ ಸುಧೆಯಲ್ಲಿ ಪ್ರಥಮರು. ಅವರ ಭಕ್ತಿಗೆ ಶ್ರೀ ಕೃಷ್ಣ ಪರಮಾತ್ಮನು ದರ್ಶನವಿತ್ತ ಐತಿಹ್ಯವಿದೆ. ಸಮಾಜ ಸುಧಾರಣೆ, ಸಂಸ್ಕೃತಿ, ಪರಂಪರೆಗಳನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲು ಅವರ ದಾರ್ಶನಿಕ ಗುಣಗಳು ಇಂದಿಗೂ ಪ್ರಸ್ತುತ. ಸೇವೆ, ಪರೋಪಕಾರಗಳಂತಹ ಮನೋಭಾವನೆಗಳು ಇಂದಿಗೂ ಹಲವರು ತಮ್ಮ ಬುದುಕು ಕಟ್ಟಿಕೊಳ್ಳುವಲ್ಲಿ ನೆರವಾಗಿವೆ. ಮಠ-ಮಾನ್ಯಗಳು ಜ್ಞಾನ ಸೇವೆ, ಅನ್ನ ಸೇವೆ, ವಸತಿ, ಸಮಾಜ ಸೇವೆಗಳನ್ನು ಮಾಡುತ್ತಿವೆ ಎಂದರೆ, ಅದಕ್ಕೆ ದಾಸರ ಕೊಡುಗೆಗಳು ಪ್ರಮುಖ ಕಾರಣವಾಗಿವೆ. ನಾಲ್ಕು ದಿನಗಳ ಜೀವನದ ಲೆಕ್ಕಾಚಾರದಲ್ಲಿ ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡುವ, ಅನುಸರಿಸುವ ಮತ್ತು ಅಳವಡಿಸಿಕೊಳ್ಳುವ ಕಾರ್ಯವಾಗಬೇಕು. ಯಾವುದೂ ಇಲ್ಲಿ ಶಾಶ್ವತವಲ್ಲ. ನಾವು ಮಾಡುವ ಉತ್ತಮ ಕೆಲಸಗಳು ನಮ್ಮನ್ನು ತಲೆಮಾರು ಪರಂಪರೆಗಳವರಗೆ ಕೊಂಡೊಯ್ಯಬಲ್ಲವು. ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿರುವ ದಾಸ ಶ್ರೇಷ್ಠರು, ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಮಾರ್ಮಿಕವಾಗಿ ಕೇಳಿದ್ದಾರೆ. 300 ಕ್ಕೂ ಅಧಿಕ ಕೀರ್ತನೆಗಳು ಅವರಿಂದ ರಚಿಸಲ್ಪಟ್ಟಿವೆ, ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ಮುಂತಾದವುಗಳು ಅವರು ನೀಡಿದ ಪ್ರಮುಖ ಕೊಡುಗೆಗಳು ಎಂದು ಹೇಳಿದರು.

       ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾದ ರವಿಚಂದ್ರ ಪ್ರಾಸ್ತಾವಿಕವಾಗಿ ದಾಸರ ಬದುಕು, ಜೀವನ, ಸಾಧನೆ, ಕೊಡುಗೆಗಳ ಕುರಿತಾಗಿ ಮಾತನಾಡಿದರು. ಗುರುಸ್ವಾಮಿ ಸ್ವಾಗತಿಸಿದರು. ಉಪನ್ಯಾಸಕರಾದ ಶ್ರೀಕಾಂತ ವಂದಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.