ಕಂಪ್ಲಿ: ರಜಾದಲ್ಲಿ ಮಜಾ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ

ಲೋಕದರ್ಶನ ವರದಿ

ಕಂಪ್ಲಿ 20: ಗ್ರಾಮೀಣಭಾಗದ ಮಕ್ಕಳಿಗೆ ಬೇಸಿಗೆ ಶಿಬಿರ ವರದಾನವಾಗಿ ಪರಿಣಮಿಸಿದೆ. ಗ್ರಾಮೀಣ ದೇಶಿಯ ಸಂಸ್ಕೃತಿಯನ್ನು ಗ್ರಾಮೀಣ ಮಕ್ಕಳಲ್ಲಿ ಪ್ರೇರೇಪಿಸುವಲ್ಲಿ ಬೇಸಿಗೆ ಶಿಬಿರ ಯಶಸ್ವಿಯಾಗಿದೆ ಎಂದು ಬೆಂಗಳೂರಿನ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಸದಸ್ಯ ರಾಮಸಾಗರದ ಎಚ್.ಸಿ.ರಾಘವೇಂದ್ರ ಹೇಳಿದರು. 

ತಾಲೂಕಿನ ಮೆಟ್ರಿ ಗ್ರಾಮದ ಶಿವಪುರ ಸಹಿಪ್ರಾ ಶಾಲೆ ಆವರಣದಲ್ಲಿ, ಬೆಳ್ಳಿಚುಕ್ಕಿ ಕಲಾ ಸಂಘ ಮತ್ತು ಸ್ನೇಹಜೀವಿ ಸಾಮಾಜಿಕ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘದ ಸಹಯೋಗದಲ್ಲಿ, ಮೆಟ್ರಿ ಶಿವಪುರ ಸಹಿಪ್ರಾ ಶಾಲೆಯ ಸಹಕಾರದೊಂದಿಗೆ ಜರುಗಿದ 'ರಜಾದಲ್ಲಿ ಮಜಾ' ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೋರತೆಗೆಯಲು ಗ್ರಾಮೀಣ ಮಕ್ಕಳಿಗೆ ಬೇಸಿಗೆ ಶಿಬಿರಗಳು ಅಗತ್ಯವಿದ್ದು ನಾನಾ ಕ್ಷೇತ್ರಗಳಲ್ಲಿನ ಕೌಶಲ್ಯಗಳನ್ನು ಮಕ್ಕಳಿಗೆ ಪರಿಚಯಿಸುವಂತಾಗಬೇಕು ಎಂದು ಹೇಳಿದರು.   

    ಶಿಬಿರದ ನಿರ್ದೇಶಕ ಕೆ.ಶಂಕರ್ ಮೆಟ್ರಿ ಮಾತನಾಡಿ, 2019ರ ಏ.25ರಿಂದ ಮೇ.17ರತನಕ ಜರುಗಿದ ಬೇಸಿಗೆ ಶಿಬಿರಕ್ಕೆ ಉತ್ತಮ ಸ್ಪಂದನೆ ದೊರಕಿದ್ದು, ಮಕ್ಕಳಲ್ಲಿ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಸೇರಿ ನಾನಾ ಕ್ಷೇತ್ರಗಳಲ್ಲಿನ ಕೌಶಲ್ಯವನ್ನು ಪರಿಚಯಿಸಲಾಗಿದೆ. ಉತ್ತಮವಾಗಿ ಮಾತನಾಡುವ, ಹಾಡುವ, ನೃತ್ತಿಸುವ ಮತ್ತು ಸಂಭಾಷಿಸುವ ಚಾಕಚಕ್ಯತೆಯನ್ನು ಅರಿತಿದ್ದಾರೆ. ಇಂತಹ ಶಿಬಿರಗಳು ಗ್ರಾಮೀಣ ಮಕ್ಕಳಿಗೆ ಸೂಕ್ತ ವೇದಿಕೆಯಂತಾಗಿದೆ ಎಂದು ಹೇಳಿದರು. 

    ಬೇಸಿಗೆ ಶಿಬಿರದಲ್ಲಿ ಮಕ್ಕಳು ಕಲಿತ ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ, ಪುರಂದರ ದಾಸರ ಕೀರ್ತನೆಗಳು, ಶಿಶುನಾಳ ಶರೀಫರ ತತ್ವಪದಗಳು, ಚಲನಚಿತ್ರ ಗೀತೆಗಳಿಗೆ ನೃತ್ತಿಸಿದರು. ಮಕ್ಕಳಿಂದ ಡಾ.ಚಂದ್ರಶೇಖರ್ ಕಂಬಾರರ 'ಬೆಪ್ಪುತಕ್ಕಡಿ ಬೋಳೆ ಶಂಕರ, ದ.ರಾ.ಬೇಂದ್ರೆಯವರ 'ಸಾಯೋ ಆಟ' ನಾಟಕಗಳು ಪ್ರದರ್ಶನಗೊಂಡವು.          

ಸಭೆಯಲ್ಲಿ ಗ್ರಾಮಸ್ಥ ಎಚ್.ಹುಚ್ಚಪ್ಪ ಅವರು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ನೇತ್ರದಾನ ಮಾಡುವುದಾಗಿ ವಾಗ್ದಾನ ಮಾಡಿದ್ದರಿಂದ ಸನ್ಮಾನಿಸಲಾಯಿತು.  

    ಮಕ್ಕಳ ಸಹಾಯವಾಣಿ ಸಂಯೋಜಕ ಚಿದಾನಂದ, ನೇತ್ರಾ, ಶಿವಪುರ ಸಹಿಪ್ರಾ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಎಚ್.ಹುಲುಗಪ್ಪ, ಮುಖ್ಯಗುರು ಆರ್.ಮಲ್ಲಯ್ಯ ಹಿರೇಮಠ, ಸ್ನೇಹಜೀವಿ ಸಾಮಾಜಿಕ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘದ ಅಧ್ಯಕ್ಷ ಕೆ.ನಾಗರಾಜ, ಉಪಾಧ್ಯಕ್ಷ ಶಿವಕುಮಾರ್, ಸಂಪನ್ಮೂಲಕ ವ್ಯಕ್ತಿಗಳಾದ ಬೆಂಗಳೂರಿನ ಮಂಜುನಾಥ, ಕುಂದಾಪುರದ ನಾಗೇಶ್, ಗದಗಿನ ರಮೇಶ್ ಬಡಿಗೇರ್, ದೇವಲಾಪುರದ ಸುರೇಶ್ ಸೇರಿ ಮಕ್ಕಳು, ಪೋಷಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.