ದಾಂಡೇಲಿ: ಪ್ರವಾಸಿಗರ ಸ್ವರ್ಗ ಎನಿಸಿಕೊಳ್ಳುವ ದಾಂಡೇಲಿಯ ಅತ್ಯಂತ ಹಳೆಯ ಕಾಳಿ ನದಿಯ ಸೇತುವೆಗೆ ವಿದ್ಯುತ್ ದೀಪಗಳೇ ಇಲ್ಲಾ ಇದ್ದ ವಿದ್ಯುತ್ ದೀಪ ಕಂಬಗಳು ಬಿದ್ದು ಹೋಗಿವೆ. ಇರುವ ಒಂದೇ ಒಂದು ವಿದ್ಯುತ್ ದೀಪವು ಕೆಟ್ಟು ಹೋದರೆ ಸೇತುವೆ ಸಂಪೂರ್ಣ ಕತ್ತಲೆಮಯ. ಮುಸ್ಸಂಜೆಯಲ್ಲಿ ವಾಯು ವಿಹಾರಕ್ಕೆಂದು ಪ್ರತಿ ನಿತ್ಯ ನೂರಾರು ಜನರು ಓಡಾಟ ನಡೆಸುವ ರಮಣೀಯ ಪ್ರಕೃತಿ ಸೌಂದರ್ಯ ಹೊಂದಿರುವಂತಹ ಕಾಳಿ ಸೇತುವೆಯ ದುಸ್ಥಿತಿ ಇದು.
ಆದರೆ ಸಂಬಂದಪಟ್ಟವರ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿಯಿಂದ ಕಾಳಿ ನದಿಯ ಸೇತುವೆ ವಿದ್ಯುತ್ ದೀಪಗಳಿಲ್ಲದೆ ಮುಸ್ಸಂಜೆಯಲ್ಲಿ ತನ್ನ ಸಹಜ ಸೌಂದರ್ಯವನ್ನು ಕಳೆದುಕೊಂಡಿದೆ. ಪ್ರಕೃತಿ ಸೌಂದರ್ಯ ಆರಾಧಿಸಲು ಬರುವ ನೂರಾರು ಪ್ರವಾಸಿಗರು ಕಾಳಿ ಸೇತುವೆ ಮೆಲೆ ನಿಂತು ಜುಳು ಜುಳು ಹರಿಯುವ ಕಾಳಿ ನದಿಯ ಸೊಬಗು, ದೂರಕ್ಕೆ ದೃಷ್ಟಿ ಹರಿಸಿದಷ್ಟು ಹಚ್ಚ ಹಸಿರಿನ ದಟ್ಟವಾದ ಕಾಡನ್ನು ಕಂಡು ಸಂತಸದಿಂದ ಪುಳಕಿತರಾಗುತ್ತಾರೆ. ಆದರೆ ರಾತ್ರಿ ಸಮಯದಲ್ಲಿ ಏನಾದರೂ ಪ್ರವಾಸಿಗರು ಸೇತುವೆಗೆ ಆಗಮಿಸಿದರೆ ಸೇತುವೆಯು ಕತ್ತಲೆ ಕೂಪದಂತೆ ಕಾಣುತ್ತದೆ. ಪ್ರವಾಸಿಗರು ವಿದ್ಯುತ್ ದೀಪಗಳಿಲ್ಲಾ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡು ಬರುತ್ತದೆ.
ಪ್ರವಾಸೋದ್ಯಮ ಕೇಂದ್ರವೆಂದು ಕೊಚ್ಚಿಕೊಳ್ಳುವ ನಮಗೆ ಕಾಳಿ ನದಿಯ ಸೇತುವೆಗೆ ವಿದ್ಯುತ್ ದೀಪಗಳನ್ನು ಅಳವಡಿಸಲು ಲೆಕ್ಕಾಚಾರ ಹಾಕುವಂತ ಪರಿಸ್ಥಿತಿ. ಸಾಯಂಕಾಲ ವಾಯು ವಿಹಾರಕ್ಕೆಂದು ನೂರಾರು ಜನರು ಬಂದು ಹೋದ ಮೇಲೆ ಕೆಲ ಮದ್ಯವಸನಿಗಳು ಸಹ ತಮ್ಮ ದಾಹ ತೀರಿಸಿಕೊಳ್ಳಲು ಕತ್ತಲಿನ ಈ ಸೇತುವೆಯನ್ನು ಬಳಸಿಕೊಳ್ಳುತ್ತಿದ್ದಾರೆ. ದಾಂಡೇಲಿ ನಗರದ ಹೋಟೆಲ್ಗಳಲ್ಲಿ ಹಾಗೂ ಅಂಗಡಿಗಳಲ್ಲಿ ದುಡಿಯುವ ಕೋಗಿಲಬಾನ ಗ್ರಾಮದ ಮಹಿಳೆಯರು ಇದೇ ಕಾಳಿ ಸೇತುವೆಯಿಂದ ಕತ್ತಲಲ್ಲಿ ಮನೆ ಅತ್ತ ಸಾಗಬೇಕು.
ಕತ್ತಲೆ ತುಂಬಿದ ಸೇತುವೆಯಿಂದ ಒಂದು ರೀತಿಯ ಭಯದ ವಾತಾವರಣ ಜೊತೆಗೆ ಮದ್ಯದ ಅಮಲಿನಲ್ಲಿರುವ ಕುಡುಕರು ಅಡ್ಡ ಸಿಗುವ ಭಯ ರಾತ್ರಿ ಸಮಯದಲ್ಲಿ ಸಾಗುವ ಒಂಟಿ ಮಹಿಳೆಯರು ಮಾತ್ರ ತಮಗಾಗುವ ಕೆಟ್ಟ ಅನುಭವವನ್ನು ವಿವರಿಸಿ ಹೇಳಬಲ್ಲರು.
ಈಗಲಾದರೂ ಸಂಭಂದಪಟ್ಟವರು ಕಾಳಿ ನದಿಯ ಸೇತುವೆಗೆ ವ್ಯವಸ್ಥಿತವಾದ ರೀತಿಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಿ ಪ್ರವಾಸೋದ್ಯಮ ಪ್ರದೇಶವಾದ ದಾಂಡೇಲಿ ನಗರದ ಸೌಂದರ್ಯ ಹೆಚ್ಚಿಸಬೇಕು. ಜನಸಾಮಾನ್ಯರು ಹಾಗೂ ಮಹಿಳೆಯರು ಸಾಯಂಕಾಲ ಹಾಗೂ ರಾತ್ರಿ ಸಮಯದಲ್ಲಿ ಭಯ ಮುಕ್ತರಾಗಿ ಓಡಾಡಲು ಸೇತುವೆಗೆ ದೀಪಗಳನ್ನು ಅಳವಡಿಸುವ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯ ಜನರ ಆಗ್ರಹವಾಗಿದೆ.