ಕಲಬುರಗಿ, ಫೆ 4, ಬಿಸಿಲ ನಗರಿ ಕಲಬುರಗಿಯಲ್ಲಿ ಫೆಬ್ರವರಿ 5 ರಿಂದ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಸಮ್ಮೇಳನದ ನೇತೃತ್ವದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಎಚ್.ಎಸ್ ವೆಂಕಟೇಶಮೂರ್ತಿ ಮಂಗಳವಾರ ಕಲಬುರಗಿಗೆ ಆಗಮಿಸಿದರು.ಬೆಂಗಳೂರಿನಿಂದ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಕಲಬುರ್ಗಿ ರೈಲ್ವೆ ನಿಲ್ದಾಣಕ್ಕೆ ಸಮ್ಮೇಳನ ಅಧ್ಯಕ್ಷರು ಆಗಮಿಸಿದ್ದು, ಅವರನ್ನು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ ಸೇರಿ ಇನ್ನಿತರ ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಡಾ ಎಚ್.ಎಸ್. ವೆಂಕಟೇಶಮೂರ್ತಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಲಬುರಗಿ ನಗರಕ್ಕೆ ಬೆಳಗಿನ ಜಾವ ಬಂದಿಳಿದಿದ್ದು, ಕನ್ನಡಾಭಿಮಾನಿಗಳ ಸ್ವಾಗತಕ್ಕೆ ನಾನು ಚಿರಋಣಿ ಎಂದರು.85ನೇ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯುವುದರ ಜತೆಗೆ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕೇವಲ ಕಲ್ಯಾಣ ಕರ್ನಾಟಕ ಜನತೆ ಮಾತ್ರವಲ್ಲದೇ, ಅಖಂಡ ಕರ್ನಾಟಕದ ಜನರು ಈ ನುಡಿಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಸಮ್ಮೇಳನದ ನಿರ್ಣಯಗಳು ಕಾಗದಕ್ಕೆ ಸಿಮೀತವಾಗುತ್ತಿವೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂತಹ ಸಂದರ್ಭದಲ್ಲಿ ನಕಾರಾತ್ಮಕ ಯೋಚನೆ ಮಾಡುವುದು ಸರಿಯಲ್ಲ. ಮಗು ಅಳದೆ ಹೋದರೆ, ತಾಯಿ ಹಾಲು ಕೊಡುವುದಿಲ್ಲ. ನಾವು ಹೋರಾಟ ಮಾಡಿ ಸರ್ಕಾರದ ಕಣ್ಣು ತೆರಸಲೇಬೇಕು. ಇಂದಲ್ಲ ನಾಳೆ ಸಮ್ಮೇಳನದ ನಿರ್ಣಯಗಳು ಜಾರಿಗೆ ಬರುತ್ತವೆ ಎಂಬ ನಂಬಿಕೆ ತಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ, ಐ.ಎ.ಎಸ್.ಪ್ರೊಬೆಷನರ್ ಅಧಿಕಾರಿ ಗೋಪಾಲಕೃಷ್ಣ ಬಿ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಹೆಚ್.ಜಿ., ಕ.ಸಾ.ಪ. ಗೌರವ ಕಾರ್ಯದರ್ಶಿ ಮಡಿವಾಳಪ್ಪ ಸೇರಿ ಇನ್ನಿತರ ಅಧಿಕಾರಿಗಳು, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಾಲಾ ಕಾಲೇಜುಗಳಿಗೆ ರಜೆ85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಬಿ. ಶರತ್ ಆದೇಶಿಸಿದ್ದಾರೆ. ಸಾಹಿತ್ಯೆ ಜಾತ್ರೆ ಸಂದರ್ಭದಲ್ಲಿ ಎಲ್ಲಾ ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯದ ಉಪನ್ಯಾಸಕರು, ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಅಂತೆಯೇ ಶಾಲಾ ವಾಹನಗಳನ್ನು ಸಾರಿಗೆ ಸೌಲಭ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಸಮ್ಮೇಳನಕ್ಕೆ ಆಗಮಿಸುತ್ತಿರುವ ಪ್ರತಿನಿಧಿಗಳಿಗಾಗಿ ಶಾಲಾ-ಕಾಲೇಜುಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅದರ ಜೊತೆಗೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡು ಸಮ್ಮೇಳನವನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. 4000 ಪೊಲೀಸರ ನಿಯೋಜನೆ ಫೆಬ್ರವರಿ 5 ರಿಂದ ನಡೆಯಲಿರುವ ಮೂರು ದಿನಗಳ 85ನೇ 'ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ'ದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಗರದಲ್ಲಿ 4,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ತಿಳಿಸಿದ್ದಾರೆ.
ಪ್ರಮುಖ ವೃತ್ತಗಳು, ಚೌಕ್‌ಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಲಾಗುತ್ತಿದೆ. 10 ಕೆಎಸ್‌ಆರ್‌ಪಿ ತುಕಡಿ, 15 ಡಿಎಎರ್ ತುಕಡಿಗಳನ್ನು ಸಮ್ಮೇಳನ ನಡೆಯುವ ಮೈದಾನದಲ್ಲಿ ನಿಯೋಜಿಸಲಾಗುವುದು. ನಗರದ ಸುಮಾರು 1,000 ಪೊಲೀಸರಿಗೆ ತರಬೇತಿ ನೀಡಲಾಗಿದ್ದು, ನೆರೆಯ ಜಿಲ್ಲೆಗಳಿಂದ 3,000 ಪೊಲೀಸರನ್ನು ಸಮ್ಮೇಳನ ಭದ್ರತೆಗಾಗಿ ಕರೆಸಲಾಗುವುದು. "ಮೂವರು ಪೊಲೀಸ್ ವರಿಷ್ಠಾಧಿಕಾರಿಗಳು ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ. ಒಟ್ಟು 15 ಸಹಾಯಕ ಪೊಲೀಸ್ ಆಯುಕ್ತರು, 75 ಇನ್ಸ್‌ಪೆಕ್ಟರ್‌ಗಳು ಮತ್ತು 200 ಸಬ್‌ಇನ್ಸ್‌ಪೆಕ್ಟರ್‌ಗಳನ್ನು ಸಹ ನಿಯೋಜಿಸಲಾಗುವುದು ಎಂದು ಅವರು ವಿವರಿಸಿದರು.ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯಲ್ಲಿ ಸುಮಾರು ಒಂದು ಲಕ್ಷ ಜನರು ಭಾಗವಹಿಸುವ ಸಾಧ್ಯತೆಯಿದೆ. ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಎರಡು ಡ್ರೋನ್ ಕ್ಯಾಮೆರಾ ಮೆರವಣಿಗೆಯ ಮೇಲೆ ನಿಗಾ ಇಡಲಿದೆ. ಅಲ್ಲದೆ, ಒಂದು ಡ್ರೋನ್ ಕ್ಯಾಮೆರಾ ಮೂರು ದಿನಗಳ ಕಾಲ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಕಣ್ಗಾವಲಿನಲ್ಲಿರುತ್ತದೆ ಎಂದು ಆಯುಕ್ತರು ತಿಳಿಸಿದರು.ಡ್ರೋನ್‌ಗಳನ್ನು ಮೇಲ್ವಿಚಾರಣೆ ಮಾಡಲು ತಂಡವನ್ನು ಸಿದ್ಧಪಡಿಸಲಾಗಿದೆ. ಮೂರು ದಿನಗಳ ಕಾಲ ನಗರದಲ್ಲಿ ಸಂಚಾರವನ್ನು ನಿಯಂತ್ರಿಸಲು ಆದ್ಯತೆ ನೀಡಲಾಗಿದೆ. ವಿವಿಧ ಕಲ್ಯಾಣ ಮಂಟಪ ಮತ್ತು ನಾಗೇನಹಳ್ಳಿ ಪೊಲೀಸ್ ತರಬೇತಿ ಶಾಲೆಗಳಲ್ಲಿ ಪೊಲೀಸರಿಗೆ ವಸತಿ ಕಲ್ಪಿಸಲಾಗಿದೆ ಎಂದು ನಾಗರಾಜ್ ಹೇಳಿದರು.