ಕೆಎಸ್ಆರ್ಟಿಸಿ ನೌಕರರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ 50 ಲಕ್ಷ ರೂ.ವಿಮೆ ನೀಡಲು ಒತ್ತಾಯ

ಬೆಂಗಳೂರು, ಜು.2: ಕೋವಿಡ್-19 ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ನೌಕರರು ಮತ್ತು ನಿಗಮವನ್ನು ರಕ್ಷಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಸಂಸ್ಥೆಯ ಎಲ್ಲಾ ಸಿಬ್ಬಂದಿಗೂ 50 ಲಕ್ಷ ರೂ.ವಿಮೆ ಘೋಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟ (ಸಿಐಟಿಯು) ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೋವಿಡ್-19 ವಿರುದ್ಧ ಸೆಣಸುತ್ತಿರುವ ಎಲ್ಲಾ ಸಿಬ್ಬಂದಿಗೂ 50 ಲಕ್ಷ ರೂ.ವಿಮೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ರೀತಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಎಲ್ಲಾ ನೌಕರರನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ಕಡ್ಡಾಯವಾಗಿ 50 ಲಕ್ಷ ರೂ. ವಿಮೆ ಖಾತರಿಯನ್ನು ಒದಗಿಸಬೇಕು.

ಎಲ್ಲಾ ಸಾರಿಗೆ ಸಿಬ್ಬಂದಿಗೂ ವಿಶೇಷವಾಗಿ ಚಾಲಕರು, ನಿರ್ವಾಹಕರು, ತಾಂತ್ರಿಕ ಮತ್ತು ಆಡಳಿತ ಸಿಬ್ಬಂದಿಗೆ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸುರಕ್ಷತಾ ಉಪಕರಣಗಳು, ಸ್ಯಾನಿಟೈಸರ್, ಮುಖಗವಸು, ಕೈಗವಸು ಇತ್ಯಾದಿಗಳನ್ನು ಕಡ್ಡಾಯವಾಗಿ ಒದಗಿಸಬೇಕು. ಕರ್ತವ್ಯಕ್ಕೆ ಹಾಜರಾಗುತ್ತಿರುವ ಕಾರ್ಮಿಕರಿಗೆ ಸರಿಯಾದ ವೈಯಕ್ತಿಕ ಸಲಕರಣೆಗಳು ಲಭ್ಯವಾಗುತ್ತಿಲ್ಲ. ಸರಿಯಾದ ಶೌಚಾಲಯಗಳು ಮತ್ತು ಮೂಲಭೂತ ಸೌಕರ್ಯಗಳು ಕೊರತೆಯಿದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರ ಜೀವ ಮತ್ತು ಜೀವನಗಳ ಸಂಪೂರ್ಣ ರಕ್ಷಣೆಯ ಹೊಣೆಯನ್ನು ಸರ್ಕಾರವೇ ಹೊರಬೇಕು.

ರಾಜ್ಯ ರಸ್ತೆ ಸಾರಿಗೆ ನಿಗಮಗಳು ಸಾರ್ವಜನಿಕ ಸೇವೆಯನ್ನು ಮಾಡುತ್ತಿರುವುದರಿಂದ ರಾಜ್ಯ ಸರ್ಕಾರದಿಂದ ಪ್ರತಿಯೊಂದು ನಿಗಮಕ್ಕೆ ಕನಿಷ್ಠ 500 ಕೋಟಿ ರೂ. ಸಂಕಷ್ಟ ಪರಿಹಾರ ಪ್ಯಾಕೇಜನ್ನು ನೀಡಬೇಕು. ಕಚ್ಚಾ ತೈಲ ಬೆಲೆಗಳು ವಿಪರೀತವಾಗಿ ಕುಸಿದಿದೆ. ಆದರೆ ಕಳೆದ ಹದಿನೈದು ದಿನಗಳಲ್ಲಿ ಲೀಟರ್ ಡೀಸೆಲ್ ಬೆಲೆ 11 ರೂ.ಗಳಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ನಿಗಮಗಳು ಅಧೋಗತಿ ತಲುಪಿವೆ. ಆದ್ದರಿಂದ ಅಂತಾರಾಷ್ಟ್ರೀಯ ಬೆಲೆ ಕುಸಿತದ ಲಾಭವನ್ನು ಸಾರ್ವಜನಿಕರ ಸಾರಿಗೆಗೆ ವರ್ಗಾವಣೆ ಮಾಡಬೇಕು. ಡೀಸೆಲ್ ಮೇಲಿನ ವಿಪರೀತ ತೆರಿಗೆಯನ್ನು ರದ್ದು ಮಾಡಿ ರಿಯಾಯಿತಿ ದರದಲ್ಲಿ ನಿಗಮಗಳಿಗೆ ಡೀಸೆಲ್ ಒದಗಿಸಬೇಕು. ರಾಜ್ಯ ಸಾರಿಗೆ ನಿಗಮಗಳ ವಾಹನಗಳ ತೆರಿಗೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು. ಸಾರಿಗೆ ನಿಗಮದ ಬಸ್ಸುಗಳಿಗೆ ಟೋಲ್ ಫ್ರೀ ವ್ಯವಸ್ಥೆ ಜಾರಿಗೆ ಮಾಡಬೇಕು. ಸಾರಿಗೆ ನಿಗಮಗಳಿಗೆ ಸರ್ಕಾರ ನೀಡಬೇಕಿರುವ ವಿವಿಧ ಬಸ್ ಪಾಸ್ಗಳ ಬಾಕಿ ಹಣವನ್ನು ಸಂಪೂರ್ಣವಾಗಿ ವಾಪಸ್ ನೀಡಬೇಕು. ಸಾರಿಗೆ ನಿಗಮಗಳ ಸಿಬ್ಬಂದಿ ಆಕಸ್ಮಾತ್ ಕೊರೊನಾ ಪೀಡಿತರಾದಲ್ಲಿ ಅಂತಹವರ ಕ್ವಾರಂಟೈನ್ ಅವಧಿಯನ್ನು ವೇತನ ಸಹಿತ ರಜೆ ಎಂದು ಪರಿಗಣಸಬೇಕು. ಇತರ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು.

ಎಲ್ಲಾ ಕಾರ್ಮಿಕರಿಗೆ 2020 ಮೇ 31ರರವೆಗೆ ಲಾಕ್ ಡೌನ್ ಅವಧಿಯ ವೇತನವನ್ನು ಪೂರ್ಣವಾಗಿ ನೀಡಬೇಕು. ಆ ನಂತರದ ಅವಧಿಯಲ್ಲಿ ಕಾರ್ಮಿಕರನ್ನು ಮಾರ್ಗಗಳಿಗೆ ನಿಯೋಜನೆ ಮಾಡಲು ಆಡಳಿತ ವರ್ಗಕ್ಕೆ ಸಾಧ್ಯವಾಗದಿದ್ದಲ್ಲಿ ಅದರ ಹೊಣೆಗಾರಿಕೆಯನ್ನು ಆಡಳಿತ ವರ್ಗಕ್ಕೆ ಹೊರಬೇಕು. ರಜೆ ಹಾಕುವಂತೆ ಕಾರ್ಮಿಕರನ್ನು ಒತ್ತಾಯಿಸಬಾರದು. ಪೂರ್ಣ ಪ್ರಮಾಣದ ವೇತನ ನೀಡಬೇಕು ಎಂದು ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಪ್ಪ, ಉಪಾಧ್ಯಕ್ಷ ಡಾ.ಪ್ರಕಾಶ್, ಜಂಟಿ ಕಾರ್ಯದರ್ಶಿ ಆನಂದ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್ ಅವರು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.