ಬೆಂಗಳೂರು, ಜ.27,ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಿಂದ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಲಾಯಿತು.ಇಂದು ಸ್ವತಂತ್ರ ಉದ್ಯಾನವನಲ್ಲಿ ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ ಎನ್ನುವ ಶೀರ್ಷಿಕೆಯಡಿ ರಾಜ್ಯದ ವಾಯುವ್ಯ, ಈಶಾನ್ಯ, ಕೆ.ಎಸ್.ಆರ್.ಟಿ.ಸಿ ಬಿಎಂಟಿಸಿ ಒಟ್ಟು ನಾಲ್ಕು ನಿಗಮಗಳ ನೌಕರರಿಂದ ಪ್ರತಿಭಟನೆ ನಡೆಸಲಾಯಿತು.
ರಾಜ್ಯದ ನಾಲ್ಕು ನಿಗಮ ಮಂಡಳಿಗಳಿಂದ ಸೇರಿ ಒಟ್ಟು 1 ಲಕ್ಷದ 35 ಸಾವಿರ ಜನ ನೌಕರರು ಕೆಲಸ ಮಾಡುತ್ತಿದ್ದು, ರಾಜ್ಯದ 2020-22ರ ಬಜೆಟ್ ಅಧಿವೇಶನದಲ್ಲಿ ಸಾರಿಗೆ ನೌಕರರ ಬೇಡಿಕೆಗೆ ಮನ್ನಣೆ ನೀಡುವಂತೆ ಆಗ್ರಹಿಸಿಬೆ.9 ಗಂಟೆಯಿಂದ ಸಂಜೆ 5 ರ ವರೆಗೆ ನೌಕರರು ಉಪವಾಸ ಸತ್ಯಾಗ್ರಹ ನಡೆಸಲಾಯಿತು.ಪ್ರತಿಭಟನೆಯಲ್ಲಿ ಬಿಎಂಟಿಸಿ ನೌಕರರು ಮತ್ತು ಕುಟುಂಬದವರೂ ಸೇರಿ ರಾಜ್ಯದ ನಾನಾ ಜಿಲ್ಲೆಗಳಿಂದ ಸರಿಸುಮಾರು 8 ಸಾವಿರ ನೌಕರರು ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದು, ವಾರದ ರಜೆ, ಹಾಗೂ ಪಾಳಿ ಮುಗಿದ ನೌಕರರು ಮಾತ್ರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಪ್ರತಿಭಟನೆ ನಡೆಸಲಾಯಿತು.
ಸಾರಿಗೆ ನಿಗಮದ ಒಕ್ಕೂಟವು ವಾರದ ರಜೆ ಇರುವವರು ಮಾತ್ರ ಪ್ರತಿಭಟನೆಯಲ್ಲಿ ಭಾಗಿಯಾಗಬೇಕೆಂದು ಹಾಗೂ ಯಾರೂ ಕೆಲಸಕ್ಕೆ ಗೈರಾಗಿ ಬರಬಾರದೆಂದು ಮತ್ತು ಕರ್ತವ್ಯ ಮುಗಿಸಿರುವವರು ತಪ್ಪದೇ ತಮ್ಮ ಕುಟುಂಬದವರನ್ನೂ ಕರೆತರಬೇಕೆಂದು ನೌಕರರಿಗೆ ಸೂಚನೆ ನೀಡಿತ್ತು. ಪ್ರತಿಭಟನೆಯಿಂದ ಬಸ್ ಗಳ ಓಡಾಟದಲ್ಲಿ ಯಾವುದೇ ವ್ಯತ್ಯಯವಿರಲಿಲ್ಲ. ಎಂದಿನಂತೆ ಬಸ್ ಗಳ ಓಡಾಡುತ್ತಿದ್ದವು.ಸಾರಿಗೆ ನೌಕರರ ಪ್ರತಿಭಟನೆಗೆ ಒತ್ತಾಸೆಯಾಗಿ ಶಿರಸಿಯ ಬಸವ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ದಾಸನಪೇಟೆ ಶ್ರೀವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ರಾಜ್ಯದ ನಾಲ್ಕು ನಿಗಮಗಳು ಸೇರಿ ಇಂದು ಪ್ರತಿಭಟನೆ ನಡೆಸುತ್ತಿದ್ದು, ನಿಗಮದ ಮೂಲಕ ನೇಮಕವಾದ ಅರೆ ಸರ್ಕಾರಿ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು. ಇವರನ್ನು ಸರ್ಕಾರಿ ನೌಕರರನ್ನಾಗಿ ಮಾಡಿದರೆ ಅವರ ವೇತನ ಹೆಚ್ಚಾಗಿ ಅವರ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯವಾಗಲಿದೆ ಎಂದರು.
ನಾವು ನೆಮ್ಮದಿಯಾಗಿ ಪ್ರಯಾಣ ಮಾಡುವಂತೆ ನೋಡಿಕೊಳ್ಳುವ ನೌಕರರಿಗೆ ಇಂದು ನೆಮ್ಮದಿ ಇಲ್ಲದಂತಾಗಿದೆ. ನಮ್ಮ ಸಾರಿಗೆ ನೌಕರರು ಸಾಥ್ವಿಕ ಪ್ರತಿಭಟನೆ ನಡೆಸುತ್ತಿದ್ದು,ಕೆಲಸ ಮುಗಿದವರು, ರಜೆ ಇದ್ದವರು ಸಾರ್ವಜನಿಕರಗೆ ತೊಂದರೆ ಆಗದಂತೆ ಔಪಚಾರಿಕ ಪ್ರತಿಭಟನೆ ನಡೆಸಿದ್ದಾರೆ.ಸರ್ಕಾರ ಹಾಗೂ ಸಚಿವರು ಈ ಬಗ್ಗೆ ಗಮನ ಹರಿಸಿ ನೌಕಕರ ಮನವಿಗೆ ಸ್ಪಂಧಿಸಬೇಕೆಂದು ಸ್ವಾಮೀಜಿ ಮನವಿ ಮಾಡಿದರು.